ಮಡಿಕೇರಿ, ಅ. 3: ಕೊಡಗಿನಲ್ಲಿ ನೂತನವಾಗಿ ಅಸ್ತಿತ್ವ ಪಡೆದಿರುವ ಪೊಲೀಸ್ ಮಹಿಳಾ ಘಟಕದ ‘ಕಾವೇರಿ ಪಡೆ’ಯು ದೈನಂದಿನ ಚಟುವಟಿಕೆಯೊಂದಿಗೆ ಶಾಲಾ-ಕಾಲೇಜುಗಳಲ್ಲಿ ಅಕ್ರಮ ಗಾಂಜಾ ಹಾಗೂ ಮಾದಕ ವಸ್ತುಗಳ ದಂಧೆಗೆ ಅವಕಾಶವಾಗದಂತೆ ಕಣ್ಗಾವಲು ಇರಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಕಿವಿಮಾತು ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿದ ಅವರು, ಕೇಂದ್ರ ಕಚೇರಿ ಎದುರು ಸಸಿ ನೆಡುವುದರೊಂದಿಗೆ ಅಲ್ಲಿನ ಆಡಳಿತ ವಿಭಾಗ, ಜಿಲ್ಲಾ ಶಸಸ್ತ್ರ ವಿಭಾಗ, ಶ್ವಾನದಳ ಘಟಕ ಸೇರಿದಂತೆ ಕಾವೇರಿ ಪಡೆ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ವೇಳೆ ವಿಶೇಷ ಮಹಿಳಾ ತಂಡಕ್ಕೆ ಖುದ್ದು ತಿಳಿ ಹೇಳಿದ ಅವರು, ಜಿಲ್ಲೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಯಾವುದೇ ಮಾದಕ ವಸ್ತುಗಳ ಮಾರಾಟ ಅಥವಾ ಸೇವನೆಗೆ ಅವಕಾಶವಾಗದಂತೆ ಸದಾ ಕಣ್ಗಾವಲು ಇಟ್ಟು ಅಂತಹ ದಂಧೆ ವಿರುದ್ಧ ಕಠಿಣ ಕ್ರಮ ಅನುಸರಿಸುವಂತೆ ಸ್ಪಷ್ಟ ಸೂಚನೆ ನೀಡಿದರು.
ನೂತನ ಕಟ್ಟಡಕ್ಕೆ ಒತ್ತು: ಕೊಡಗು ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯ ಕಟ್ಟಡವು ಮೂರ್ನಾಲ್ಕು ದಶಕಗಳ ಹಿಂದಿನದ್ದಾಗಿದ್ದು, ಈಗಾಗಲೇ ನೂತನ ಕಟ್ಟಡ ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿ.ಜಿ. ಪ್ರತಿಕ್ರಿಯಿಸಿದರು. ಕೊರೊನಾ ಸೋಂಕಿನ ಕಾರಣ ಈ ಪ್ರಕ್ರಿಯೆ ವಿಳಂಬವಾಗಿದ್ದು, ಮುಂದಿನ ದಿನಗಳಲ್ಲಿ ನೂತನ ಕಚೇರಿ ಕಟ್ಟಡಕ್ಕೆ ಒತ್ತು ನೀಡಲಾಗುವುದು ಎಂದು ಅವರು ನುಡಿದರು.
ಕೊಡಗು ಸೇರಿದಂತೆ ರಾಜ್ಯದೆಲ್ಲೆಡೆ ಪೊಲೀಸ್ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯದಿಂದ ಕರ್ತವ್ಯ ನಿರ್ವಹಿಸುವ ಸಲುವಾಗಿ, ತಾವೇ ಖುದ್ದಾಗಿ ಜಿಲ್ಲೆಗಳಿಗೆ ಭೇಟಿ ನೀಡಿ ಕುಂದು ಕೊರತೆ ಆಲಿಸುತ್ತಿದ್ದು, ಕರ್ತವ್ಯನಿರ್ವಹಣೆಯಲ್ಲಿ ಕಾನೂನು ಉಲ್ಲಂಘಿಸಿದರೆ ಅಂತಹ ಇಲಾಖಾ ಸಿಬ್ಬಂದಿ ಅಥವಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಜರುಗಿಸುವುದಾಗಿ ಸ್ಪಷ್ಟ ನುಡಿಯಾಡಿದರು.
ಐಜಿ ಹಾಗೂ ಎಸ್ಪಿ ಸಹಿತ ಕೆಳಹಂತದ ಅಧಿಕಾರಿಗಳು ಈ ವೇಳೆ ಹಾಜರಿದ್ದು, ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಿಗೆ ಮಾಹಿತಿ ಒದಗಿಸಿದರು.