ಭಾಗಮಂಡಲ, ಅ. 2 : ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಉದ್ಘಾಟನಾ ಸಮಾರಂಭ ಭಾಗಮಂಡಲ ಗೌಡ ಸಮಾಜದಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿದ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ ಒಂದು ಸಂಸ್ಥೆ ಸ್ಥಾಪನೆಯಾದಾಗ ಸಂಸ್ಥೆಗೆ ನಿಗದಿತ ಗುರಿ ಇರಬೇಕು. ಹಾಗಾದಾಗ ಮಾತ್ರ ಸಂಸ್ಥೆ ಉತ್ತಮ ರೀತಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ. ಯುವ ಸಂಘಟನೆ ಹುಟ್ಟಿಕೊಂಡ ನಂತರ ಆ ಭಾಗದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಹುರಿದುಂಬಿಸುವ ಕೆಲಸವಾಗಬೇಕು. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದು ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಕಾರ ನೀಡಲಾಗುವುದು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೊಸಮನೆ ಕವಿತಾಪ್ರಭಾಕರ್ ನಮ್ಮ ಆಚಾರ ವಿಚಾರಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಯುವ ಒಕ್ಕೂಟ ಸ್ಥಾಪನೆಯಾಗುತ್ತಿರುವುದು ಸಂತೋಷದ ವಿಷಯವಾಗಿದ್ದು, ಆ ಮೂಲಕ ನಮ್ಮ ಯುವ ಪೀಳಿಗೆಗೆ ನಮ್ಮ ಸಂಸ್ಕøತಿಯನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.
ಯುವ ಒಕ್ಕೂಟದ ವಿಶೇಷ ಸಲಹೆಗಾರರು ಹಾಗೂ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದು ಇದು ಸರಿಯಲ್ಲ. ಯುವಕರು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಪೂರೈಸಿ ಜೀವನದಲ್ಲಿ ಏನಾದರೂ ಸಾಧನೆ ಮಾಡುವಂತಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ ಮಾತನಾಡಿ 2019 ರ ಜುಲೈ 6ರಂದು ಸ್ಥಾಪನೆಯಾಗಿದ ಈ ಗೌಡ ಯುವ ಒಕ್ಕೂಟ ಮಳೆಯ ಕಾರಣದಿಂದಾಗಿ ತಡವಾಗಿ ಉದ್ಘಾಟನೆಯಾಗುತ್ತಿದೆ. ಗೌಡ ಸಂಸ್ಕøತಿಯ ಪೋಷಣೆ, ಪರಸ್ಪರ ಸಹಬಾಳ್ವೆ, ನಾಡಿನ ಸೇವೆ ನಮ್ಮ ಧ್ಯೇಯ ಎಂದರು. ನಮ್ಮ ಸಂಸ್ಕøತಿಯ ಬಗ್ಗೆ ಯುವ ಜನಾಂಗಕ್ಕೆ ಸಾಕಷ್ಟು ಮಾಹಿತಿಯ ಕೊರತೆ ಇದ್ದು ಈ ಬಗ್ಗೆ ಅರಿವು ಮೂಡಿಸಲು ಒಕ್ಕೂಟದ ವತಿಯಿಂದ ಕಾರ್ಯಾಗಾರ ರೂಪಿಸಲಾಗುವುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾಗಮಂಡಲ ನಾಡು ಗೌಡ ಒಕ್ಕೂಟದ ಉಪಾಧ್ಯಕ್ಷ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಕೂಡಕಂಡಿ ದಯಾನಂದ ಎಲ್ಲರನ್ನು ಸಾಮರಸ್ಯದಿಂದ ಕಾಣುತ್ತಾ ಗೌರವಿಸುತ್ತಾ ಸಮಾಜದಲ್ಲಿ ಸಹಬಾಳ್ವೆಯೊಂದಿಗೆ ಯುವ ಪ್ರತಿಭೆಗಳನ್ನು ಮುಂದೆ ತರುವ ನಿಟ್ಟಿನಲ್ಲಿ ಒಕ್ಕೂಟ ಸ್ಥಾಪನೆಯಾಗಿದೆ. ಎಂದರು. ಮುಖ್ಯ ಅತಿಥಿಯಾಗಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪೈಕರ ಮನೋಹರ ಮಾದಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೌಡ ಸಮಾಜದ ಅಧ್ಯಕ್ಷ ಪಳಂಗಪ್ಪ, ಒಕ್ಕೂಟದ ಗೌರವ ಕಾರ್ಯದರ್ಶಿ ಚಲನ್ ನಿಡ್ಯಮಲೆ ಉಪಸ್ಥಿತರಿದ್ದರು. ಈ ಸಂದರ್ಭ ಅತಿ ಹೆಚ್ಚು ಅಂಕಗಳಿಸಿದ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ತೊತ್ತಿಯನ ಪ್ರಕೃತಿ ವಿನೀತ್ ಹಾಗೂ ಹೊಸಮನೆ ಅನನ್ಯ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅರುಣ ಪದವಿಪೂರ್ವ ಕಾಲೇಜಿನ ಶ್ವೇತ ಕೂಡಕಂಡಿ ಹಾಗೂ ವಿದ್ಯಾಶ್ರೀ ಅಮೆಮನೆ ಅವರನ್ನು ಸನ್ಮಾನಿಸಲಾಯಿತು. ಚೇತನ್ ಕೂಡಕಂಡಿ ಹಾಗೂ ಚೈತ್ರ ಕುದುಕುಳಿ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಕುಮಾರ್ ಹೊದೆಟ್ಟಿ ಸ್ವಾಗತಿಸಿದರು. ಕಲ್ಪನಾ ಹೊಸಗದ್ದೆ ವಂದಿಸಿದರು.