ಕಣಿವೆ, ಅ. 2: ನೆರೆಯ ಕೇರಳ ರಾಜ್ಯದ ಜನರು ಆಹಾರದ ಭಾಗವಾಗಿ ಸಾಮಾನ್ಯವಾಗಿ ಬಳಸುವ ಕೆಸದ ಗೆಡ್ಡೆಯನ್ನು ಉತ್ತರ ಕೊಡಗಿನ ಶಿರಂಗಾಲ, ಹೆಬ್ಬಾಲೆ, ತೊರೆನೂರು, ಸಿದ್ದಲಿಂಗಪುರ ಮೊದಲಾದ ಅರೆ ನೀರಾವರಿ ಪ್ರದೇಶಗಳಲ್ಲಿ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಏಳೂವರೆಯಿಂದ ಎಂಟು ತಿಂಗಳ ಅವಧಿಗೆ ಕಟಾವಿಗೆ ಬರುವ ಈ ಕೆಸದ ಗೆಡ್ಡೆ ಬೆಳೆ ಈ ಬಾರಿ ಅಷ್ಟೇನು ಫಲವತ್ತಾಗಿ ಬೆಳೆಯಲು ಬಿತ್ತನೆಯ ಅವಧಿಯ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಬೀಳಬೇಕಿದ್ದ ಮಳೆ ಕೈಕೊಟ್ಟಿದ್ದು ಪ್ರಮುಖ ಕಾರಣವಾಯಿತು ಎನ್ನುತ್ತಾರೆ ಹೆಬ್ಬಾಲೆಯ ಯುವ ರೈತ ಸುನಿಲ್.

ಕಳೆದ ಫೆಬ್ರವರಿ ಹಾಗೂ ಮಾರ್ಚ್‍ನಲ್ಲಿ ಬಿತ್ತನೆ ಮಾಡಿದ ಈ ಕೆಸದ ಗೆಡ್ಡೆÉಗೆ ಬೇಸಿಗೆಯ ಬಿಸಿಲ ಝಳ ಒಂದೆಡೆಯಾದರೆ, ಸಕಾಲಿಕವಾಗಿ ಮಳೆಯಾಗದೇ ಇದ್ದುದು ಮತ್ತೊಂದು ಕಾರಣವಾಯಿತು ಎನ್ನುತ್ತಾರೆ. ನಾಲ್ಕು ಎಕರೆ ಭೂಮಿಯಲ್ಲಿ ಬೆಳೆಯಲಾದ ಕೆಸ ಈ ಬಾರಿ ಎಕರೆಗೆ ಕೇವಲ 6 ರಿಂದ 7 ಟನ್ ಮಾತ್ರ ಇಳುವರಿ ಬರುತ್ತಿದೆ. ಆದರೆ ನಮ್ಮ ನಿರೀಕ್ಷೆಯಂತೆ ಬೆಳೆ ಬಂದಿದ್ದರೆ ಎಕರೆಗೆ ತಲಾ 10 ರಿಂದ 12 ಟನ್ ಫಸಲು ಬರಬೇಕಿತ್ತು. ಆದರೆ ಏನು ಮಾಡೋದು ಎಲ್ಲರನ್ನೂ ಬೆಚ್ಚಿಬೀಳಿಸುವ ಕೊರೊನಾದ ಮೇಲೆ ಎಲ್ಲವನ್ನು ಹಾಕಿಕೊಂಡು ನಾವು ಕೈಕಟ್ಟಿ ಕೂರಬೇಕಲ್ಲ ಹೇಳಿ ಎನ್ನುತ್ತಾರೆ ರೈತ ಸುನಿಲ್. ಅಂದರೆ ರೈತ ಯಾವುದೇ ಬೆಳೆ ಬೆಳೆದರೂ ಕೂಡ ಮಾರುಕಟ್ಟೆಯಲ್ಲಿ ದರವಿಲ್ಲ - ದರವಿಲ್ಲ ಎಂದುಕೊಂಡು ರೈತರನ್ನು ಬೆಚ್ಚಿ ಬೀಳಿಸುತ್ತಾ ರೈತರಿಂದ ಮನಸೋ ಇಚ್ಛೆ ಕೃಷಿ ಉತ್ಪನ್ನಗಳನ್ನು ಖರೀದಿಸುವ ದಲ್ಲಾಳಿಗಳು ರೈತರನ್ನು ಶೋಷಣೆ ಮಾಡುತ್ತಿದ್ದರೂ ಕೂಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳಾಗಲೀ, ರೈತರ ಹಿತ ಕಾಯಬೇಕಾದ ಕೃಷಿ, ಕಂದಾಯ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳಾಗಲಿ ನಮ್ಮ ನೆರವಿಗೆ ಧಾವಿಸುತ್ತಿಲ್ಲ ಎಂದು ಆಕ್ರೋಷ ಹೊರಹಾಕುತ್ತಾರೆ ರೈತರು. ಜನರ ಹಸಿವು ನೀಗಿಸುವ ಯಾವುದೇ ಕೃಷಿ ಉತ್ಪನ್ನಗಳಿಗೂ ಸೂಕ್ತ ಬೆಲೆ ಎನ್ನುವ ಖರೀದಿದಾರರು ಹಾಗೂ ದಲ್ಲಾಳಿಗಳು ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮೊದಲಾದೆಡೆ ಕೊಂಡೊಯ್ದು ತಮಗಿಷ್ಟವಾದ ದರಕ್ಕೆ ಮಾರಾಟ ಮಾಡಿ ಜೇಬು ತುಂಬಿಸಿಕೊಳ್ಳುತ್ತಾರೆ.

ಹೀಗಾಗಿ ಬೆವರು ಬಸಿದು ಬೆಳೆ ಬೆಳೆಯುವ ರೈತನಿಗೆ ತಾನು ಬೆಳೆದ ಉತ್ಪನ್ನವನ್ನು ಮಾರಾಟ ಮಾಡಿ ಹಣ ನೋಡಲು ಒಂದು ವರುಷ ಸಮಯ ಬೇಕಾಗುತ್ತದೆ. ಅದೇ ವ್ಯಾಪಾರಿ ಅಥವಾ ದಲ್ಲಾಳಿ ನಮ್ಮಂತಹ ರೈತರನೇಕರು ಬೆಳೆವ ಫಸಲನ್ನು ಖರೀದಿಸಿ ಲಾಭ ಮಾಡಿಕೊಳ್ಳಲು ಕೇವಲ ಕೆಲವೇ ನಿಮಿಷ ಸಾಕು. ಇಂತಹ ವ್ಯವಸ್ಥೆ ತೊಲಗುವವರೆಗೂ ರೈತರ ನೆಮ್ಮದಿಯ ಬದುಕು ಸಾಧ್ಯವೇ ಇಲ್ಲ ಎನ್ನುತ್ತಾರೆ ಮರೂರು ಗ್ರಾಮದ ಮತ್ತೋರ್ವ ಯುವ ರೈತ ಹೆಚ್.ಎಸ್. ಭಿಕ್ಷೇಶ್. ಹೆಬ್ಬಾಲೆಯ ರೈತ ಸುನಿಲ್ ತಾನು ಬೆಳೆದ ಕೆಸದ ಗೆಡ್ಡೆಯನ್ನು ಕೇರಳದ ವ್ಯಾಪಾರಿ ಯೊಬ್ಬರಿಗೆ ಸ್ಥಳೀಯ ಸಗಟು ವ್ಯಾಪಾರಿಯ ಮೂಲಕ ಮಾರಾಟ ಮಾಡಿದ್ದು, ಒಂದು ಕೆ.ಜಿ. ಕೆಸದ ಗೆಡ್ಡೆÉಗೆ ರೂ. 24 ರಂತೆ ಮಾತಾಡಿಕೊಂಡು ಮಾರಾಟ ಮಾಡಿದ್ದಾರೆ. ಆದರೆ ಅದೇ ಕೆಸದ ಗೆಡ್ಡೆÉಗೆ ಸ್ಥಳೀಯ ವ್ಯಾಪಾರಿ ಕೆ.ಜಿ.ಯೊಂದಕ್ಕೆ ರೂ. 2 ಕಮಿಷನ್ ಪಡೆದು ಕೇರಳದ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ. ಇಲ್ಲಿ ಇಬ್ಬರೂ ಕೂಡ ರೈತನ ಶೋಷಕರೇ...? ಈ ಯುವ ರೈತ ಕೊರೊನಾ ಲಾಕ್‍ಡೌನ್ ಪೂರ್ವದಲ್ಲಿ ಮಾಡುತ್ತಿದ್ದ ಕೆಲಸವನ್ನು ತೊರೆದು ಕೃಷಿಯತ್ತ ಮುಖ ಮಾಡಿ ಎಕರೆಗೆ ತಲಾ ರೂ. 25 ರಿಂದ 30 ಸಾವಿರ ವ್ಯಯಿಸಿ ಕಷ್ಟಪಟ್ಟು ಕೆಸದ ಗೆಡ್ಡೆÉ ಬೆಳೆದಿದ್ದಾರೆ. ಆದರೆ ಮಳೆ ಸರಿಯಾಗಿ ಆಗದೇ ಇದ್ದುದು ಮತ್ತು ‘ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಎಂಬಂತೆ’ ಮಾರಿ ಕೊರೊನಾ ಬೇರೆ ಒಕ್ಕರಿಸಿದ್ದು ಬೆಳೆಗೆ ಬೆಲೆ ಕುಸಿತವಾಗಿದೆ ಎನ್ನಲಾಗುತ್ತದೆ. ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕುವ ಮೂಲಕ, ರೈತರು ಬೆಳೆದ ಕೃಷಿ ಉತ್ಪನ್ನ ಗಳನ್ನು ನೇರವಾಗಿ ಮಾರುಕಟ್ಟೆಗೆ ರೈತರೇ ಮಾರಾಟ ಮಾಡುವಂತಹ ವ್ಯವಸ್ಥೆ ಜಾರಿಯಾದರೆ ಮಾತ್ರ ಕಷ್ಟಪಟ್ಟು ತಾನು ಬೆಳೆದ ಉತ್ಪನ್ನಗಳನ್ನು ರೈತ, ಬೆಳೆ ನಷ್ಟವಿಲ್ಲದೇ ಮಾರಾಟ ಮಾಡಬಹುದು. ಈ ಕೆಸದ ಗೆಡ್ಡೆÉ ಭೂಮಿ ಯೊಳಗೆ ಬೆಳೆಯುವ ಕಾರಣ ಅಷ್ಟೇನು ರಾಸಾಯನಿಕಗಳನ್ನು ಸುರಿಯ ಲಾಗುವುದಿಲ್ಲ. ಭೂಮಿಯ ಮೇಲೆ ಬೆಳೆಯುವ ಹಸಿಮೆಣಸು, ಕಾಳುಮೆಣಸು, ಬೀನ್ಸ್, ಬದನೆ, ಬೆಂಡೆ, ಟೊಮ್ಯಾಟೊ ಮೊದಲಾದ ತರಕಾರಿ ಕಾಯಿಪಲ್ಯೆಗಳಿಗೆ ವಿಪರೀತವಾಗಿ ರಾಸಾಯನಿಕಗಳನ್ನು ಸಿಂಪಡಣೆ ಮಾಡದೇ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಆದರೆ ಭೂಮಿಯೊಳಗೆ ಬೆಳೆಯುವ ಕೆಸದ ಗೆಡ್ಡೆ, ಸಿಹಿ ಗೆಣಸು, ಆಲೂಗೆಡ್ಡೆ, ಮರಗೆಣಸು ಮೊದಲಾದ ವುಗಳಿಗೆ ಹೆಚ್ಚು ರಸಾಯನಿಕಗಳನ್ನು ಬಳಸದ ಕಾರಣ ಕೇರಳೀಯರು ಹೆಚ್ಚಾಗಿ ಸೇವಿಸುತ್ತಾರೆ ಎನ್ನಲಾಗುತ್ತದೆ. ಏನೇ ಇರಲೀ ರೈತರು ಬೆಳೆಯುವ ತರಕಾರಿ ಕಾಯಿಪಲ್ಯೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ ಅಷ್ಟೆ.

- ಕೆ.ಎಸ್. ಮೂರ್ತಿ.