ಕಣಿವೆ, ಅ.2: ಸಾರ್ವಜನಿಕರು ಕಂಡ ಕಂಡಲ್ಲಿ ಕಸ ತ್ಯಾಜ್ಯ ಬಿಸಾಡದೇ ಸ್ವಚ್ಛವಾದ ಪರಿಸರವನ್ನು ನಿರ್ಮಿಸಲು ಪಣತೊಡಬೇಕೆಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕರೆಕೊಟ್ಟರು. ಮುಳ್ಳುಸೋಗೆ ಗ್ರಾಮ ಪಂಚಾಯತಿ ವತಿಯಿಂದ ಸಮೀಪದ ಗುಮ್ಮನಕೊಲ್ಲಿ ಗ್ರಾಮದಲ್ಲಿ ಅನುಷ್ಠಾನಗೊಳಿಸಿದ್ದ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಘನ ತ್ಯಾಜ್ಯ ಘಟಕಗಳನ್ನು ಜಿಲ್ಲೆಯ ಎಲ್ಲಾ ಪಂಚಾಯಿತಿಗಳಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳ್ಳುವ ಮೂಲಕ ಗ್ರಾಮ, ನಗರ, ಪಟ್ಟಣ ವ್ಯಾಪ್ತಿಯ ಜನರಲ್ಲಿ ಕಸ ನಿರ್ವಹಣೆಯ ಅರಿವುಂಟು ಮಾಡಬೇಕು. ನಿರ್ದಿಷ್ಟ ಗಡುವು ನೀಡಿ ಆ ಸಮಯದೊಳಗೆ ಘನ ತ್ಯಾಜ್ಯ ಘಟಕಗಳನ್ನು ನಿರ್ಮಿಸದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ ಎಂದು ಶಾಸಕ ರಂಜನ್ ಸಭೆಯಲ್ಲಿ ಇದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರಿಗೆ ನಿರ್ದೇಶನ ನೀಡಿದ್ದಾರೆ. ಶಾಸಕರು, ಒಣ ಕಸ ಹಾಗೂ ಹಸಿ ಕಸವನ್ನು ಮನೆ ಮನೆ ಗಳಿಂದಲೇ ವಿಂಗಡಿಸಿಡಲು ಅನುವಾಗುವಂತೆ ಪ್ಲಾಸ್ಟಿಕ್ ಬಕೆಟ್‍ಗಳನ್ನು ಖರೀದಿಸಲು ಶಾಸಕರ ಅನುದಾನದಿಂದ 5 ಲಕ್ಷ ರೂಗಳನ್ನು ನೀಡುವುದಾಗಿ ಇದೇ ಸಂದರ್ಭ ರಂಜನ್ ಘೋಷಿಸಿದರು.
ಘನತ್ಯಾಜ್ಯ ಘಟಕದಲ್ಲಿ ವಿವಿಧ ಶಾಲೆಗಳ ಮಕ್ಕಳು ಅನುಪಯುಕ್ತ ವಸ್ತುಗಳಿಂದ ಸಿದ್ದಪಡಿಸಿದ್ದ ವಸ್ತುಪ್ರದರ್ಶನವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಪ್ರತಿ ಮನೆಗಳಿಂದ ಕಸದ ಸರಿಯಾದ ನಿರ್ವಹಣೆ ಆದರೆ ಪಂಚಾಯಿತಿಗಳ ಪೌರ ಕಾರ್ಮಿಕರಿಗೆ ಒಂದಷ್ಟು ಸಹಕಾರವಾಗುತ್ತದೆ. ಸಾರ್ವಜನಿಕರು ನಿತ್ಯವೂ ಸ್ವಚ್ಛವಾಗಿದ್ದರೆ ಸಮಾಜದಲ್ಲಿ ಉತ್ತಮ ಆರೋಗ್ಯ ಕಾಣಬಹುದಾಗಿದೆ ಎಂದರು. ಮತ್ತೊರ್ವ ಅತಿಥಿ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ, ಘನ ತ್ಯಾಜ್ಯ ನಿರ್ವಹಣಾ ಘಟಕ ಊರಿಗೆ ಬಂದದ್ದು ನಿಜಕ್ಕೂ ಹೆಮ್ಮೆಯಿದೆ. ಆದರೆ ಈ ಘಟಕದ ಆವರಣದಲ್ಲಿ ನಿರ್ಮಿಸಿರುವ ಚಿತಾಗಾರವನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ, ಭಂವರ್ ಸಿಂಗ್ ಮೀನಾ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗುಡೂರು ಭೀಮಸೇನ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 104 ಗ್ರಾಮ ಪಂಚಾಯತಿಗಳಿದ್ದು, ಈಗಾಗಲೇ 25 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಘಟಕ ಆರಂಭಗೊಂಡಿದೆ. 79 ಗ್ರಾಮ ಪಂಚಾಯಿತಿಗಳಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು. ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಶ್ರೀಕಂಠ ಮೂರ್ತಿ, ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಜಯಣ್ಣ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಅಶೋಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್.ರಾಜಶೇಖರ್, ಸ್ವಚ್ಛತಾ ಮಿಷನ್‍ನ ಪೆಮ್ಮಯ್ಯ, ಸೂರಜ್, ರಾಜೇಶ್ ಮೊದಲಾದವರಿದ್ದರು.
ಲೋಕೇಶ್ವರಿ v/s ಚಂದ್ರಕಲಾ
ಗುಮ್ಮನಕೊಲ್ಲಿ ಗ್ರಾಮದಲ್ಲಿ ನೂತನವಾಗಿ ಅಳವಡಿಸಿದ ರೂ. 20 ಲಕ್ಷ ವೆಚ್ಚದ ಘನತ್ಯಾಜ್ಯ ಕಸ ನಿರ್ವಹಣೆ ಘಟಕದ ಉದ್ಘಾಟನೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸ್ವಚ್ಛ ಪರಿಸರದ ಪರಿಕಲ್ಪನೆಯನ್ನು ಮೂಡಿಸಿದ ಗಾಂಧೀಜಿಯವರ ಕನಸನ್ನು ನನಸು ಮಾಡಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲಬೇಕು ಎಂದು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಬಳಿಕ ಮಾತನಾಡಿದ ಮತ್ತೋರ್ವ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಗಾಂಧೀಜಿಯ ಸ್ವಚ್ಛತೆಯ ಪರಿಕಲ್ಪನೆಯನ್ನು ಕೇವಲ ಮೋದಿಯೇ ಮಾಡಿಲ್ಲ. ಈ ಹಿಂದೆ ಇದ್ದ ಕಾಂಗ್ರೆಸ್‍ನ ಪ್ರಧಾನಿಗಳು ಮಾಡಿಕೊಂಡು ಬಂದಿದ್ದಾರೆ. ಆದರೆ ಬಿಜೆಪಿಗೆ ಇಷ್ಟೊಂದು ಪ್ರಚಾರ ಸಿಗುತ್ತಾ ಇದೆ ಎಂದರು.
ನಂತರ ಶಾಸಕ ರಂಜನ್ ಮಾತನಾಡುವಾಗ, ಇವರದು ಬರೀ ಇದೇ ಆಯ್ತು. ಹಿಂದೆ ಇವರ ಪಕ್ಷದ ರಾಜೀವ್ ಗಾಂಧಿಯೇ ಹೇಳಿದ್ದರು ನಾವು ಮೂರು ಇಂಚು ಪೈಪ್‍ನಲ್ಲಿ ನೀರು ಹರಿಸಿದರೆ, ಅದು ಎಲ್ಲಾ ಕಡೆ ಸೋರಿಕೆ ಆಗಿ ಕೊನೆಗೆ ಜನರಿಗೆ ಒಂದಿಂಚೂ ನೀರು ಸಿಗ್ತಿರಲಿಲ್ಲ ಅಂತಾ. ಆದರೆ ಈ ಕಾಂಗ್ರೆಸ್‍ನವರಿಗೆ ಬರೀ ಟೀಕೆ ಮಾಡೋದೆ ಕೆಲಸ ಎನ್ನುವ ಅರ್ಥದಲ್ಲಿ ಟೀಕಿಸಿದರು.