ಮಡಿಕೇರಿ, ಅ. 2: ಭಾರತದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ಅರಣ್ಯ ಪರಿಸರ ಸೂಕ್ಷ್ಮ ವಲಯದ ಕುರಿತು ಕೆ. ಕಸ್ತೂರಿ ರಂಗನ್ ವರದಿ ಶಿಫಾರಸು ಬಗ್ಗೆ ಮುಂದಿನ ಡಿಸೆಂಬರ್ 31ರೊಳಗೆ ಕೇಂದ್ರ ಸರಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆ ಹೊರಡಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠ ನಿರ್ದೇಶನ ನೀಡಿದೆ.ಪರಿಸರ ಸೂಕ್ಷ್ಮ ವಲಯದ ಕುರಿತು ಈ ಹಿಂದೆ ಕೇಂದ್ರ ಸರಕಾರ ಗಾಡ್ಗಿಳ್ ಸಮಿತಿ ರಚಿಸಿದ್ದು, ಆ ಸಮಿತಿ ವರದಿಗೆ ಆಕ್ಷೇಪಣೆಗಳ ನಡುವೆ, ಕೆ. ಕಸ್ತೂರಿ ರಂಗನ್ ನೇತೃತ್ವದ ಮರು ಸಮಿತಿ ರಚಿಸಿ, ಸಮಗ್ರ ಅಧ್ಯಯನದೊಂದಿಗೆ ನ್ಯಾಯಪೀಠಕ್ಕೆ ವರದಿ ನೀಡಲು ನಿರ್ದೇಶಿಸಲಾಗಿತ್ತು.ಕಸ್ತೂರಿರಂಗನ್ ವರದಿಯಲ್ಲಿ ದೇಶದ ಪಶ್ಚಿಮಘಟ್ಟ ಸೂಕ್ಷ್ಮ ಪರಿಸರ ವಲಯವೆಂದು ಉಲ್ಲೇಖಿಸಿ 56,825 ಚದರ ಕಿಲೋ ಮೀಟರ್ ಪ್ರದೇಶಗಳನ್ನು ಗುರುತಿಸಿ, ಕೇಂದ್ರ ಸರಕಾರದಿಂದ ಅಧಿಸೂಚನೆಗೆ ಶಿಫಾರಸ್ಸುಗೊಳಿಸಲಾಗಿತ್ತು. ಈ ವರದಿಯಲ್ಲಿ ಪಶ್ಚಿಮಘಟ್ಟ ವಲಯಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿನ ಸಾಕಷ್ಟು ಸ್ಥಳಗಳನ್ನು ಸೂಕ್ಷ್ಮ ಪರಿಸರ ವಲಯವೆಂದು ಪರಿಗಣಿಸಲಾಗಿತ್ತು. ಈ ಪೈಕಿ ಕೊಡಗಿನ ಹಲವು ಗ್ರಾಮಗಳ ಉಲ್ಲೇಖವಿತ್ತು.

ವ್ಯಾಪಕ ಪ್ರತಿಭಟನೆ : ಈ ವರದಿ ಬಗ್ಗೆ ಕೊಡಗು ಸೇರಿದಂತೆ ಕರ್ನಾಟಕದ ಕೆಲವು ಜಿಲ್ಲೆಗಳು ಹಾಗೂ ವಿವಿಧ ರಾಜ್ಯಗಳಿಂದ ತೀವ್ರ ಆಕ್ಷೇಪದೊಂದಿಗೆ ಜಲವಲಯದಿಂದ ಪ್ರತಿಭಟನೆ ಮೂಲಕ; ಕೇಂದ್ರ ಸರಕಾರ ಸಂಬಂಧಿಸಿದ ವರದಿಗೆ ತಿದ್ದುಪಡಿಗೊಳಿಸುವಂತೆಯೂ, ವಿವಾದಾತ್ಮಕ ವರದಿಯನ್ನು ಅನುಷ್ಠಾನಗೊಳಿಸಬಾರದೆಂದು ಒತ್ತಡ ಕೇಳಿಬಂದಿತ್ತು.

ಅಧಿಸೂಚನೆಗೊಂಡಿಲ್ಲ : ಆ ಕಾರಣದಿಂದ ಕೆ. ಕಸ್ತೂರಿರಂಗನ್ ವರದಿ ಜಾರಿಯೊಂದಿಗೆ ಸೂಕ್ಷ್ಮ ಪರಿಸರ ವಲಯವೆಂದು ಗುರುತಿಸಿರುವ ಪ್ರದೇಶಗಳ ಬಗ್ಗೆ ಯಾವದೇ ನಿರ್ಧಾರ ಪ್ರಕಟಗೊಂಡಿಲ್ಲ; ಬದಲಾಗಿ ಪ್ರತಿಭಟನೆಯ ಫಲವಾಗಿ ಸಂಬಂಧಿಸಿದ ವರದಿಯಲ್ಲಿ ಸಾಕಷ್ಟು ಮಾರ್ಪಾಡುಗೊಳಿಸಿ, ಈ ಹಿಂದೆ ಉಲ್ಲೇಖಿಸಿದ 56825 ಚದರ ಕಿ.ಮೀ. ಪ್ರದೇಶದ ಬದಲಿಗೆ ಅದರ ಶೇ. 37 ರಷ್ಟು ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಅಧಿಸೂಚನೆಗೆ ಆ ಸಮಿತಿ ಶಿಫಾರಸು ಮಾಡಿತ್ತು.

ಆದರೆ ಕೇಂದ್ರ ಸರಕಾರದಿಂದ ಈ ಬಗ್ಗೆ ಇದುವರೆಗೆ ಯಾವದೇ ತೀರ್ಮಾನ ಪ್ರಕಟಗೊಳ್ಳದೆ ಹಸಿರು ನ್ಯಾಯಮಂಡಳಿಗೂ ವರದಿ ಬಗ್ಗೆ ಉಲ್ಲೇಖ ಪತ್ರ ರವಾನೆಯಾಗಿಲ್ಲ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು ಸಂಬಂಧಿಸಿದ ಸಚಿವಾಲಯಕ್ಕೆ ಡಿ. 31ರ ಗಡುವು ನೀಡಿದೆ.

ಇದರೊಂದಿಗೆ ಸಂಬಂಧಿಸಿದ ಸಮಿತಿಯ ಮುಖ್ಯಸ್ಥರ ಸಹಿತ ಉದ್ಯೋಗಿಗಳ ನಿರ್ವಹಣಾ ವೆಚ್ಚವನ್ನು ವೇತನ ಸಹಿತ ನಿಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶಿಸುವದಾಗಿ ಸೂಚ್ಯವಾಗಿ ಎಚ್ಚರಿಸಿದೆ.