ಮಡಿಕೇರಿ, ಅ. 2 : ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.

ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಬಿಜೆಪಿ ನೇತೃತ್ವದ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಉತ್ತರ ಪ್ರದೇಶದ ಹಾತ್ರಾಸ್ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನ, ಮಡಿಕೇರಿ ನಗರ ಮಹಿಳಾ ಅಧ್ಯಕ್ಷೆ ಪಾರ್ವತಿ ಫ್ಯಾನ್ಸಿ ಪಾರ್ವತಿ, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಪ್ರಮುಖರಾದ ಉದಯ, ಗಿಲ್ಬರ್ಟ್, ಅಲ್ಪಸಂಖ್ಯಾತರ ಘಟಕ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಉತ್ತರ ಪ್ರದೇಶದ ಹಾಥ್ರಸ್‍ನಲ್ಲಿ ದಲಿತ ಯುವತಿ ಅತ್ಯಾಚಾರಿಗಳಿಗೆ ಬಲಿಯಾದ ಪ್ರಕರಣವನ್ನು ಖಂಡಿಸಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮುಂದಾಳತ್ವದಲ್ಲಿ ನಗರದ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ, ಅತ್ಯಾಚಾರಿಗಳಿಗೆ ಶಿಕ್ಷೆ ಆಗುತ್ತಿಲ್ಲ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿ ಕೆಪಿಸಿಸಿ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಅತ್ಯಾಚಾರ ಪ್ರಕರಣದ ಯುವತಿಯ ಮನೆಗೆ ತೆರಳಲು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ತೆರಳಿದ ಸಂದರ್ಭ ಇವರನ್ನು ಅಲ್ಲಿನ ಯೋಗಿ ಆದಿತ್ಯನಾಥ್ ಅವರ ಬಿಜೆಪಿ ಸರ್ಕಾರ ರಸ್ತೆ ಮಧ್ಯದಲ್ಲಿ ತಡೆದು ಅವಮಾನ ಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯ ಬೇಕು, ರಾಷ್ಟ್ರಪತಿ ಆಡಳಿತ ಜಾರಿಯಾಗ ಬೇಕೆಂದು ಆಗ್ರಹಿಸಿದರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಮಾತನಾಡಿ ಹಾಥ್ರಸ್ ಜಿಲ್ಲೆಯ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕಂಡು ಹಿಡಿದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಪೆಮ್ಮಂಡ ಪೊನ್ನಪ್ಪ, ಅಸಂಘಟಿತ ಕಾರ್ಮಿಕ ಘಟಕದ ಮಹಿಳಾ ಸಮಿತಿಯ ತಾಲೂಕು ಅಧ್ಯಕ್ಷೆ, ಮಂಜುಳಾ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲಿರ ರಶೀದ್ ಕಾಂಗ್ರೆಸ್ ಸೇವಾದಳದ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ತೆರೆಸವಿಕ್ಟರ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕೆÀ್ಷ ಕೊಳೇರ ಭಾರತಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಕೊರಕುಟ್ಟೀರ ಸರ ಚಂಗಪ್ಪ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಜೆ.ಬಾಬು, ಯುವ ಕಾಂಗ್ರೆಸ್ ತಾಲೂಕು ಅಧ್ಯಕೆÀ್ಷ ಜೆ.ಕೆ.ಸೋಮಣ್ಣ, ಪಕ್ಷದ ಹಿರಿಯ ಮುಖಂಡರಾದ ಮೂಕಳೇರ ಕುಶಾಲಪ್ಪ, ಕೊಲ್ಲೀರ ಬೋಪಣ್ಣ, ಆಪಟ್ಟೀರ ಟಾಟೂ ಮೊಣ್ಣಪ್ಪ, ಪಡಿಜ್ಞರಂಡ ಗಿರೀಶ್, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷರಾದ ಶಾಜಿ ಅಚ್ಚುತ್ತನ್, ಪರಿಶಿಷ್ಟ ವರ್ಗದ ತಾಲೂಕು ಅಧ್ಯಕ್ಷ ಮಣಿಕುಂಞ ಸೇರಿದಂತೆ ಹಲವÀರು ಭಾಗವಹಿಸಿ ದ್ದರು. ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ ಠಾಣಾಧಿಕಾರಿ ಸುರೇಶ್ ಬೋಪಣ್ಣ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಸಿದ್ದಾಪುರ

ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಸಮಾನ ಮನಸ್ಕರ ವೇದಿಕೆ ವತಿಯಿಂದ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಮೇಣದ ಬತ್ತಿಯೊಂದಿಗೆ ಪ್ರತಿಭಟನೆಯಲ್ಲಿ ಉತ್ತರ ಪ್ರದೇಶ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಜಮಾಅತೆ ಇಸ್ಲಾಮಿ ಸಂಘಟನೆಯ ಬಶೀರ್, ಪತ್ರಕರ್ತ ರೆಜಿತ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಎ.ಎಸ್ ಮುಸ್ತಫ, ಸಿಪಿಐ ಪಕ್ಷದ ಕೃಷ್ಣ, ಪತ್ರಕರ್ತ ಎಂ.ಎ. ಅಜೀಜ್ ಮಾತನಾಡಿದರು. ಕಾಂಗ್ರೆಸ್ ಮುಖಂಡ ವಿ.ಕೆ ಬಶೀರ್, ಎಸ್ ಡಿ ಪಿ ಐ ಪಕ್ಷದ ಶೌಕತ್ ಅಲಿ, ಪ್ರಮುಖರಾದ ಹುಸೈನ್, ಶೌಕತ್, ಅಸ್ಕರ್, ನವಾಸ್, ಹಸ್ಸನ್ ಸೇರಿದಂತೆ ಮತ್ತಿತರರು ಇದ್ದರು.