ವೀರಾಜಪೇಟೆ, ಅ. 1: ಈ ವರ್ಷದ ಮೇ ತಿಂಗಳಿಂದ ಸೆಪ್ಟಂಬರ್ 30ರ ತನಕ ದಕ್ಷಿಣ ಕೊಡಗಿಗೆ ಬಿದ್ದ ಭಾರೀ ಮಳೆಗೆ ತಾಲೂಕಿನಲ್ಲಿ ಒಟ್ಟು 276 ಮನೆಗಳು ಜಖಂಗೊಂಡಿದ್ದು, ಒಂದು ಜಾನುವಾರು ಹಾಗೂ ಒಂದು ವೃದ್ಧ ಮಹಿಳೆ ಸಾವನ್ನಪ್ಪಿದ್ದು, ಈವರೆಗೆ ಸುಮಾರು ರೂ. ಎರಡು ಕೋಟಿ ತೊಂಬತ್ತು ಲಕ್ಷ ನಷ್ಟ ಉಂಟಾಗಿದೆ. ಈ ಸಂಬಂಧ ಸರಕಾರಕ್ಕೆ ವರದಿ ಕಳುಹಿಸಿರುವುದಾಗಿ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್ ತಿಳಿಸಿದ್ದಾರೆ.

ಸೆಪ್ಟಂಬರ್ 21 ರಂದು ಬಿದ್ದ ಭಾರೀ ಮಳೆಗೆ ಶ್ರೀಮಂಗಲದ ಸಿಂಕೋನ ಎಸ್ಟೇಟ್‍ನ ಬಳಿಯ ಜೈನಾಬಿ (70) ಎಂಬ ಮಹಿಳೆಯ ಮನೆಯ ಒಂದು ಭಾಗದ ಗೋಡೆ ಬಿದ್ದು ಸಾವನ್ನಪ್ಪಿದ್ದು, ಮಾನವ ಹಾನಿ ಹಿನ್ನಲೆಯಲ್ಲಿ ಆಕೆಯ ಮಗಳು ಕೈರುನ್ನಿಸಾ ಎಂಬಾಕೆಗೆ ರೂ. 5 ಲಕ್ಷ ಪರಿಹಾರವಾಗಿ ನೀಡಲಾಗಿದೆ. ಈಗಾಗಲೇ ಸರಕಾರದಿಂದ ರೂ. ಒಂದು ಕೋಟಿ ಹಣ ಬಂದಿದ್ದು, ಇದರಲ್ಲಿ ವೀರಾಜಪೇಟೆಯ ಎರಡು ಕೋವಿಡ್ ಆಸ್ಪತ್ರೆಗಳಿಗೆ, ವಿವಿಧೆಡೆಗಳಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿದ್ದ ಗಂಜಿ ಕೇಂದ್ರಗಳಿಗೆ, ಸಂತ್ರಸ್ತರ ಕಿಟ್ ವಿತರಣೆಗೆ ವಿನಿಯೋಗಿಸಲಾಗಿದ್ದು, ಇನ್ನು ಇದರ ಪರಿಹಾರಕ್ಕಾಗಿ ರೂ. 50 ಲಕ್ಷದಷ್ಟು ಹಣ ಅಗತ್ಯವಿರುವುದಾಗಿ ಸರಕಾರಕ್ಕೆ ವರದಿ ಕಳಿಸಲಾಗಿದೆ ಎಂದು ನಂದೀಶ್ ತಿಳಿಸಿದ್ದಾರೆ.

ತಾಲೂಕಿನಲ್ಲಿ ಭಾರೀ ಮಳೆ ಸೆಪ್ಟಂಬರ್ ಕೊನೆಯ ತನಕವೂ ಮುಂದುವರೆದಿರುವುದರಿಂದ ನಷ್ಟದ ಸಮೀಕ್ಷೆ ಕಾರ್ಯ ಇನ್ನು ಮುಂದುವರೆದಿದೆ. ಸರಕಾರದಿಂದ ಪರಿಹಾರ ಬಂದ ತಕ್ಷಣ ತಾಲೂಕಿನ ಸಂತ್ರಸ್ತರಿಗೆ ಪರಿಹಾರದ ಹಣ ವಿತರಿಸಲಾಗುವುದು. ಇತ್ತೀಚೆಗೆ ಬಿದ್ದ ಭಾರೀ ಮಳೆಯ ನಷ್ಟವನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದು, ಸದ್ಯದಲ್ಲಿಯೇ ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ನಂದೀಶ್ ಮಾಹಿತಿ ನೀಡಿದ್ದಾರೆ.