ಸೋಮವಾರಪೇಟೆ,ಅ.1: ಕಳೆದ ವಾರ ಸತತವಾಗಿ ಸುರಿದ ಮಳೆಯಿಂದಾಗಿ ಕಾಫಿ ಗಿಡಗಳಿಗೆ ಕೊಳೆರೋಗ ತಗುಲಿದ್ದು, ಫಸಲು ಹಿಡಿದಿದ್ದ ಗಿಡಗಳು ಇದೀಗ ಬೋಳಾಗುತ್ತಿವೆ. ಈ ವರ್ಷವಾದರೂ ಬಂಪರ್ ಫಸಲು ಲಭಿಸುವ ನಿರೀಕ್ಷೆಯಲ್ಲಿದ್ದ ಬೆಳೆಗಾರರ ಗೋಳು ಮತ್ತೆ ಮುಂದುವರೆದಿದ್ದು, ನಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯಲ್ಲಿ ಪ್ರಾರಂಭದಲ್ಲಿ ಉತ್ತಮವಾಗಿ ಹೂ ಮಳೆಯಾಗಿದ್ದರಿಂದ ಅರೇಬಿಕಾ ಕಾಫಿ ಗಿಡಗಳಲ್ಲಿ ಹೆಚ್ಚಿನ ಫಸಲು ಕಂಡುಬಂದಿದ್ದವು. (ಮೊದಲ ಪುಟದಿಂದ) ಕಳೆದೆರಡು ವರ್ಷಗಳಿಂದ ನಿರಂತರವಾಗಿ ಅತೀವೃಷ್ಟಿಗೆ ತುತ್ತಾಗಿ ಫಸಲು ನಷ್ಟ ಅನುಭವಿಸಿದ್ದ ಬೆಳೆಗಾರರ ಮೊಗದಲ್ಲಿ ಹೂ ಮಳೆ ಹರ್ಷತಂದಿತ್ತು.ತದನಂತರವೂ ಹಂತಹಂತವಾಗಿ ಮಳೆಯಾದ ಹಿನ್ನೆಲೆ ಅರೇಬಿಕಾ ಗಿಡಗಳಲ್ಲಿ ಬಂಪರ್ ಫಸಲು ಬಂದಿತ್ತು. ಕಳೆದೆರಡು ವರ್ಷಗಳ ನಷ್ಟವನ್ನು ಸರಿದೂಗಿಸಿಕೊಳ್ಳುವ ಆಲೋಚನೆಯಲ್ಲಿದ್ದ ಬೆಳೆಗಾರರಿಗ ಈ ವರ್ಷದ ಅತೀವೃಷ್ಟಿ ಆಘಾತ ತಂದಿದ್ದು, ಮತ್ತೆ ನಷ್ಟದ ಕೂಪಕ್ಕೆ ತಳ್ಳಿದೆ.
ಕಳೆದ ವಾರದಲ್ಲಿ ಸತತವಾಗಿ 10 ದಿನಗಳ ಕಾಲ ಸುರಿದ ಮಳೆಯಿಂದಾಗಿ ಕಾಫಿಗೆ ಕೊಳೆರೋಗ ತಗುಲಿದ್ದು, ಗಿಡಗಳ ಎಲೆಗಳು ಕರಗುತ್ತಿವೆ. ಇದರೊಂದಿಗೆ ಬಲಿಯುವ ಹಂತದಲ್ಲಿರುವ ಕಾಫಿ ಫಸಲು ನೆಲಕ್ಕಚ್ಚುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ.
ತಾಲೂಕಿನ ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಕೊಳೆರೋಗ ಕಂಡುಬಂದಿದೆ. ಫಸಲು ಹಿಡಿದಿದ್ದ ರೆಕ್ಕೆಗಳು ಬೋಳಾಗುತ್ತಿದ್ದು, ಎಲೆಗಳೂ ಸಹ ಕರಗುತ್ತಿವೆ. ಶಾಂತಳ್ಳಿ, ಕುಮಾರಳ್ಳಿ, ಕುಂದಳ್ಳಿ, ತೋಳೂರುಶೆಟ್ಟಳ್ಳಿ, ಗರ್ವಾಲೆ, ಕಿಕ್ಕರಳ್ಳಿ, ಹರಗ, ಬೆಟ್ಟದಕೊಪ್ಪ, ಚಾಮೇರಮನೆ, ಸೂರ್ಲಬ್ಬಿ, ಮಲ್ಲಳ್ಳಿ, ತಡ್ಡಿಕೊಪ್ಪ, ಹಂಚಿನಳ್ಳಿ, ಕೊತ್ನಳ್ಳಿ, ಕುಡಿಗಾಣ, ಹೆಗ್ಗಡಮನೆ, ಪುಷ್ಪಗಿರಿ, ಕೂತಿ, ಎಡದಂಟೆ ವ್ಯಾಪ್ತಿಯಲ್ಲಿ ಕೊಳೆರೋಗಕ್ಕೆ ಹೆಚ್ಚಿನ ಫಸಲು ನೆಲಕ್ಕಚ್ಚಿವೆ.
ಭಾರೀ ಮಳೆ-ಗಾಳಿಗೆ ತೋಟದಲ್ಲಿ ಶೀತ ಹೆಚ್ಚಾಗಿ ಇತರ ಮರಗಳ ಎಲೆಗಳು ಅರೇಬಿಕಾ ಕಾಫಿ ಗಿಡಗಳ ಮೇಲೆ ಬಿದ್ದು, ಕೊಳೆಯಲಾರಂಭಿಸುತ್ತಿವೆ. ಇಲ್ಲಿಂದ ಶುರುವಾಗುವ ಕೊಳೆರೋಗ ಅರೇಬಿಕಾ ಕಾಫಿ ಗಿಡದ ಎಲೆ, ಫಸಲನ್ನು ಆಪೋಶನಗೈಯುತ್ತಿದ್ದು, ಫಸಲನ್ನು ಮಣ್ಣುಪಾಲು ಮಾಡುತ್ತಿದೆ.
ಕೊಳೆರೋಗ ನಿಯಂತ್ರಣಕ್ಕೆ ಬೆಳೆಗಾರರು ಎಷ್ಟೇ ಪ್ರಯತ್ನ ಪಟ್ಟರೂ ಯಶಸ್ಸು ಲಭಿಸುತ್ತಿಲ್ಲ. ಕಾಫಿ ತೋಟಗಳ ವಾರ್ಷಿಕ ನಿರ್ವಹಣೆಯೂ ದುಬಾರಿಯಾಗುತ್ತಿವೆ. ಕೂಲಿಯೂ ಹೆಚ್ಚಾಗುತ್ತಿದ್ದು, ತೋಟಗಳನ್ನು ನಿರ್ವಹಣೆ ಮಾಡುವದೇ ಕಷ್ಟಸಾಧ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹರಗ ಗ್ರಾಮದ ಕೃಷಿಕ ಶರಣ್ ಅಭಿಪ್ರಾಯಿಸಿದ್ದಾರೆ.
ಅರೇಬಿಕಾ ಕಾಫಿ ತೋಟದಲ್ಲಿ ವರ್ಷವಿಡೀ ಕೆಲಸ ನಿರ್ವಹಿಸಬೇಕಿದೆ. ಗಿಡಗಳ ಬುಡ ಬಿಡಿಸುವದು, ಗೊಬ್ಬರ ಹಾಕುವದು, ನೆರಳು ನಿರ್ವಹಣೆ, ಕೀಟನಾಶಕ ಸಿಂಪಡಣೆ, ಗಿಡಗಂಟಿಗಳ ತೆರವು, ಚರಂಡಿ ನಿರ್ಮಾಣ, ಬೇಸಿಗೆಯಲ್ಲಿ ನೀರು ಹಾಯಿಸುವದು.., ಹೀಗೆ ವರ್ಷವಿಡೀ ಕೆಲಸ ಮಾಡಿದರೂ ನಿರೀಕ್ಷಿತ ಆದಾಯ ಬರುತ್ತಿಲ್ಲ. ಸಣ್ಣ ಹಾಗೂ ಮಧ್ಯಮ ಬೆಳೆಗಾರರ ಸ್ಥಿತಿ ವರ್ಷದಿಂದ ವರ್ಷಕ್ಕೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ತೋಳೂರುಶೆಟ್ಟಳ್ಳಿಯ ಕೃಷಿಕ ಸುಧಾಕರ್ ಹೇಳಿದ್ದಾರೆ.
ಪ್ರತಿವರ್ಷ ಅತೀವೃಷ್ಟಿ, ಅನಾವೃಷ್ಟಿಗೆ ಸಿಲುಕಿ ನಷ್ಟ ಅನುಭವಿಸುತ್ತಿರುವ ಬೆಳೆಗಾರರು ಈ ವರ್ಷವೂ ನಷ್ಟಕ್ಕೆ ಸಿಲುಕಬೇಕಿದ್ದು, ಸರ್ಕಾರದ ಪರಿಹಾರಕ್ಕೆ ಕೈಯೊಡ್ಡಬೇಕಾಗಿದೆ. ಈಗಾಗಲೇ ತಾಲೂಕು ಕಂದಾಯ ಇಲಾಖೆಗೆ ಸಾವಿರಾರು ಅರ್ಜಿಗಳನ್ನು ಪರಿಹಾರಕ್ಕೆ ಸಲ್ಲಿಸಲಾಗಿದ್ದು, ಆ್ಯಪ್ ಮೂಲಕ ಬೆಳೆ ಸಮೀಕ್ಷೆಯೂ ನಡೆಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಬೆಳೆಗಾರರೂ ಫಸಲು ನಷ್ಟಕ್ಕೆ ಒಳಗಾಗಿದ್ದು, ಸರ್ಕಾರದಿಂದ ಗರಿಷ್ಠ ಮಟ್ಟದ ಪರಿಹಾರ ಒದಗಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಬೇಕೆಂದು ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಒತ್ತಾಯಿಸಿದ್ದಾರೆ. -ವಿಜಯ್ ಹಾನಗಲ್