ಮಡಿಕೇರಿ, ಅ. 1: ಕೊಡಗಿನಲ್ಲಿ ಜಾಗತಿಕ ಕೊರೊನಾ ಈ ಸೋಂಕಿನಿಂದ ಮೃತರಾದವರ ಅಂತ್ಯಸಂಸ್ಕಾರದ ಕುರಿತು ಆರಂಭದಲ್ಲಿ ಕಾಳಜಿ ವಹಿಸಿದ್ದ ಜಿಲ್ಲಾಡಳಿತ ಮಂದಿ ಬಳಿಕ ನಿರಾಸಕ್ತಿಯಿಂದ ನಿರ್ಲಿಪ್ತ ವರ್ತನೆ ತೋರಿದೆ. ಇದುವರೆಗೆ ಸುಮಾರು 40 ಮಂದಿಯ ಶವಸಂಸ್ಕಾರ ನಡೆದಿದೆ. ಇದೀಗ ಜಿಲ್ಲಾಡಳಿತ ಅತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಈ ರೀತಿಯ ಕಾರ್ಯವೈಖರಿಗೆ ಸ್ವಯಂ ಪ್ರೇರಿತರಾಗಿ ಸೇವೆಗೆ ಮುಂದೆ ಬಂದಿರುವ ಯುವಕರು ತೀವ್ರ ಬೇಸರಗೊಂಡಿದ್ದಾರೆ. ತಮ್ಮ ಪರಿಶ್ರಮದ ಬಗ್ಗೆ ಸೌಜನ್ಯಕ್ಕಾದರೂ ಕೇಳದಿರುವ ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನಗೊಂಡಿದ್ದಾರೆ.‘ಶಕ್ತಿ’ಗೆ ಲಭಿಸಿರುವ ಮಾಹಿತಿ ಪ್ರಕಾರ, ಎರಡು ತಿಂಗಳ ಹಿಂದೆ ಕೊರೊನಾ ಸೋಂಕಿತರ ಬಗ್ಗೆ ಅಪಾರ ಕಾಳಜಿಯೊಂದಿಗೆ ಜಿಲ್ಲಾ ಆಡಳಿತದಿಂದ ಪ್ರತ್ಯೇಕವಾಗಿ ಕೋಮುವಾರು ಸ್ಮಶಾನಗಳನ್ನು ಗುರುತಿಸಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ತಾಲೂಕು ಕೇಂದ್ರಗಳಲ್ಲಿ ಕೂಡ ಅಂತ್ಯಸಂಸ್ಕಾರಕ್ಕಾಗಿ ವ್ಯವಸ್ಥೆ ರೂಪಿಸಲಾಗಿದೆ. ಇದರೊಂದಿಗೆ ಸ್ವಯಂಸೇವಕರು ಕೊರೊನಾದಿಂದ ಮೃತರಾದವರ ಶವಸಂಸ್ಕಾರ ನಡೆಸಲು ಮುಂದೆ ಬರುವಂತೆ ಕೋರಲಾಗಿತ್ತು.

ಈ ವೇಳೆ ವಿಶ್ವಹಿಂದೂ ಪರಿಷತ್ತಿನ ಬಜರಂಗದಳ ಯುವಕರು ಹಾಗೂ ಪಿಎಫ್‍ಐ ಸಂಘಟನೆಯ ಯುವಕರು ಜಿಲ್ಲಾಡಳಿತದ ಕೋರಿಕೆಯಂತೆ ಸ್ವಯಂ ಸೇವಕರಾಗಿ ಈ ರೀತಿಯ ಮೃತರ ಶವಸಂಸ್ಕಾರಕ್ಕೆ ಸ್ವಯಂ ಪ್ರೇರಣೆಯಿಂದ ಧಾವಿಸಿ ಬಂದಿದ್ದಾರೆ. ಹೀಗೆ ಮುಂದೆ ಬಂದಿರುವ ಸೇವಾಮನೋಭಾವದ ಯುವಕರಿಗೆ ಜಿಲ್ಲಾಡಳಿತ ಪೊಲೀಸ್ ಅಧಿಕಾರಿಗಳು ಮತ್ತು ಆರೋಗ್ಯ ತಜ್ಞರಿಂದ ತರಬೇತಿ ಏರ್ಪಡಿಸಿ, ಎಲ್ಲಾ ಮುಂಜಾಗ್ರತಾ ಕ್ರಮದೊಂದಿಗೆ ಶವಸಂಸ್ಕಾರಕ್ಕೆ ಅಗತ್ಯ ವ್ಯವಸ್ಥೆಯ ಆಶ್ವಾಸನೆ ನೀಡಿ ಹುರಿದುಂಬಿಸಿದ್ದಾರೆ. ಆ ಮೇರೆಗೆ ಸ್ವಯಂಸೇವಕರು ಸನ್ನದ್ಧರಾಗಿದ್ದಾರೆ.

ಮರುಘಳಿಗೆ ಕೆಲಸ : ಈ ಶಿಬಿರದ ಬೆನ್ನಲ್ಲೇ ಅನಿರೀಕ್ಷಿತವಾಗಿ ಕೊರೊನಾಗೆ ಕ್ರೈಸ್ತ, ಮುಸಲ್ಮಾನ, ಹಿಂದೂ ಎಂಬ ತಾರತಮ್ಯವಿಲ್ಲದೆ ಒಬ್ಬರ ಹಿಂದೆ ಒಬ್ಬರಂತೆ ಬಲಿಯಾಗತೊಡಗಿದ್ದಾರೆ. ಆರಂಭದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಹಿತ ಪೌರಕಾರ್ಮಿಕರು ಒಂದೆರಡು ಅಂತ್ಯಸಂಸ್ಕಾರಗಳಲ್ಲಿ ಕಾಣಿಸಿಕೊಂಡು, ಈ ಸ್ವಯಂಸೇವಕರಿಗೆ ಸಲಹೆ, ಸೂಚನೆ ನೀಡಿದ್ದಾರೆ.

(ಮೊದಲ ಪುಟದಿಂದ)

ಪಿ.ಪಿ. ಕಿಟ್ ಹಂಚಿಕೆ : ಹಾಗೆಯೇ ಮಡಿಕೇರಿಯ ಕೋವಿಡ್ -19 ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಸ್ವಯಂಸೇವಕರನ್ನು ಬರಮಾಡಿಕೊಂಡು, ತಲಾ ನಾಲ್ವರಿಗೆ ಪಿ.ಪಿ. ಕಿಟ್ (ರಕ್ಷಾ ಉಡುಗೆ) ನೀಡುವದರೊಂದಿಗೆ, ಮೃತ ವ್ಯಕ್ತಿಯಿಂದ ಸೋಂಕು ಹರಡದಂತೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮ ಕುರಿತು ತಿಳಿಹೇಳಿ ಆ್ಯಂಬುಲೆನ್ಸ್ ಮೂಲಕ ಸ್ಮಶಾನಕ್ಕೆ ಶವ ಸಾಗಿಸಿ ಹೂಳುವದು ಅಥವಾ ಸುಡುವದಕ್ಕೆ ಸಹಕಾರ ನೀಡಿದ್ದಲ್ಲದೆ, ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ಪ್ರಚಾರಕ್ಕೆ ಕಡ್ಡಾಯ ನಿಯಂತ್ರಣ : ಈ ವೇಳೆ ಜಿಲ್ಲಾಡಳಿತದಿಂದ ನಿಯಮ ರೂಪಿಸಿ ಕೊರೊನಾ ಸೋಂಕಿನಿಂದ ಮೃತರಾದವರ ಹೆಸರು ಬಹಿರಂಗೊಳಿಸದೆ ಗೌಪ್ಯತೆ ಕಾಪಾಡುವದು ಸೇರಿದಂತೆ, ಸ್ವಯಂಸೇವಕರು ತಮ್ಮ ಮೊಬೈಲ್‍ಗಳಲ್ಲಿ ಚಿತ್ರೀಕರಣ ಅಥವಾ ಈ ಕಠಿಣ ಸೇವೆಯ ಕುರಿತು ಪ್ರಚಾರ ಪಡೆಯದಂತೆ ತಾಕೀತು ಮಾಡಲಾಗಿದೆ.

ಬೆನ್ನು ತಿರುಗಿಸಿದರು : ಇದಾದ ಬಳಿಕ ನಗರದ ಹೊರವಲಯದಲ್ಲಿರುವ ಚೈನ್‍ಗೇಟ್ ಬಳಿಯ ಹಿಂದೂ ರುದ್ರಭೂಮಿಯಲ್ಲಿ, ಬಹುಸಂಖ್ಯಾತ ಸಮುದಾಯದ ಸುಮಾರು 20 ಶವಗಳ ಸಂಸ್ಕಾರವನ್ನು ಇದುವರೆಗೆ ಮಾಡಲಾಗಿದೆ. ಈ ಸನ್ನಿವೇಶದಲ್ಲಿ ಆರಂಭದ ಒಂದೆರಡು ಶವಸಂಸ್ಕಾರದಲ್ಲಿ ಕಾಣಿಸಿಕೊಂಡಿರುವ ಕಂದಾಯ, ಪೊಲೀಸ್ ಸೇರಿದಂತೆ ಪೌರ ಕಾರ್ಮಿಕರು ಕೂಡ ಬೆನ್ನು ತಿರುಗಿಸುವದರೊಂದಿಗೆ ನಾಪತ್ತೆಯಾಗಿದ್ದಾರೆ.

ಖಬರ್ ಸ್ಥಾನಕ್ಕೂ ಅಷ್ಟೇ : ಅದೇ ರೀತಿ ನಗರದ ರಾಣಿಪೇಟೆ ಬಳಿಯ ಖಬರ್ ಸ್ಥಾನದಲ್ಲಿ ಹಾಗೂ ಹೊಸ ಬಡಾವಣೆ ವ್ಯಾಪ್ತಿಯ ಕ್ರೈಸ್ತ ಸ್ಮಶಾನದಲ್ಲಿ ಪಿಎಫ್‍ಐ ಸ್ವಯಂ ಸೇವಕರು ಪ್ರತ್ಯೇಕ ವ್ಯವಸ್ಥೆಯೊಂದಿಗೆ ಸುಮಾರು 20 ಮಂದಿ ಕೊರೊನಾದಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಹೂತು ಹಾಕಿದ್ದಾರೆ. ಈ ತಂಡಕ್ಕೆ ಸಂಬಂಧಪಟ್ಟವರು ಗುಂಡಿ ತೆಗೆಯಲು ಜೆಸಿಬಿ ಯಂತ್ರ ಹಾಗೂ ಐದು ಜೊತೆ ಪ್ರತಿಹಂತದಲ್ಲಿ ಪಿ.ಪಿ. ಕಿಟ್ ಹಂಚಿಕೆ ಹೊರತು ಯಾರೊಬ್ಬರೂ ಅತ್ತ ಸುಳಿಯುತ್ತಿಲ್ಲವಂತೆ.

ಸೌದೆಗೂ ಕೊರತೆ : ಹಿಂದೂ ರುದ್ರಭೂಮಿಯಲ್ಲಿ ಶವ ಸಂಸ್ಕಾರಕ್ಕೆ ಆರಂಭದಲ್ಲಿ ಅರಣ್ಯ ಇಲಾಖೆ ಸೌದೆ ಹಾಕಿದ್ದು, ಈ ಮರದ ತುಂಡುಗಳನ್ನು ಪೌರಕಾರ್ಮಿಕರು ಒಡೆದುಕೊಡುತ್ತಿದ್ದರಂತೆ; ಆ ಬಳಿಕ ಸ್ವಯಂಸೇವಕರೇ ಎಲ್ಲವನ್ನು ಮಾಡಿಕೊಳ್ಳುತ್ತಿದ್ದಾರಂತೆ. ಸೌದೆ ಬಗ್ಗೆ ವಿಚಾರಿಸಲಾಗಿ, ತಹಶೀಲ್ದಾರರು ‘ಎಲ್ಲಿಂದ ಸೌದೆÉ ತರುವದು... ಶವಗಳನ್ನು ಹೂತುಬಿಡಿ’ ಎಂದು ಪುಕ್ಕಟೆ ಸಲಹೆ ನೀಡುತ್ತಾರಂತೆ! ಹೀಗಾಗಿ ತೀರಾ ಬೇಸರಗೊಂಡಿರುವ ಸ್ವಯಂಸೇವಕರು, ಇದೀಗ ಕೊರೊನಾ ಸೋಂಕಿನಿಂದ ಮೃತರಾದವರ ಸಂಬಂಧಿಕರು ಅಥವಾ ದಾನಿಗಳನ್ನು ಸಂಪರ್ಕಿಸಿ ಸೌದೆ ವ್ಯವಸ್ಥೆಗೆ ಮುಂದಾಗಿದ್ದಾರಂತೆ.

ಕೊರೊನಾ ಭಯ : ಕೊರೊನಾದಿಂದ ಮೃತರಾಗಿ ಸ್ವಯಂಸೇವಕರು ಅಂತ್ಯಸಂಸ್ಕಾರ ನಡೆಸುತ್ತಿದ್ದರೆ, ಮೃತರ ಸಂಬಂಧಿಕರಿಗೆ ಸೋಂಕು ದೃಢಪಟ್ಟಿದ್ದರೂ ಅಲ್ಲಿ ಹಾಜರಿರುವುದರಿಂದ, ಇತರ ಬಂಧುಗಳ ಸಹಿತ ಮಿತ್ರರು ಈ ಕಾರ್ಯದಿಂದ ದೂರವೇ ಉಳಿಯುವ ಪರಿಸ್ಥಿತಿ ಕಂಡುಬರುತ್ತಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ ಜೀವದ ಹಂಗು ತೊರೆದು ಅಂತ್ಯಸಂಸ್ಕಾರ ನಡೆಸುವ ಸ್ವಯಂಸೇವಕರನ್ನು ಜಿಲ್ಲಾಡಳಿತದಿಂದ ಯೊರೊಬ್ಬರೂ ಕೇಳುವವರಿಲ್ಲ ಎಂಬ ಭಯ ಕಾಡತೊಡಗಿದೆಯಂತೆ...!