ಸಂಪಾಜೆ, ಅ. 1 : ಮಡಿಕೇರಿ ವಿಭಾಗದ ಭಾಗಮಂಡಲ ಅರಣ್ಯ ವ್ಯಾಪ್ತಿಗೆ ಒಳಪಡುವ ಪಟ್ಟಿಘಾಟ್ ಮೀಸಲು ಅರಣ್ಯದ ಡೆಂಕಲ್ ಎಂಬಲ್ಲಿ ಕಡವೆ ಹತ್ಯೆಗೈದ ನಾಲ್ವರನ್ನು ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದಲ್ಲಿ ಓರ್ವ ತಲೆಮರೆಸಿ ಕೊಂಡಿದ್ದಾನೆ.ಕಳೆದ ಮೂರು ದಿನಗಳ ಹಿಂದೆ ಕಡವೆ ಬೇಟೆಯಾಡಿರುವ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 5 ಗಂಟೆಗೆ ಅರಣ್ಯ ಇಲಾಖಾಧಿಕಾರಿ ಗಳು ಕಾರ್ಯಾಚರಣೆಗಿಳಿದಿದ್ದಾರೆ. ಆರೋಪಿತರ ಮನೆಯಲ್ಲಿ ಒಣಗಿಸಿ ಸಂಗ್ರಹಿಸಿಟ್ಟಿದ್ದ ಅಂದಾಜು 30 ಕೆ.ಜಿ. ಯಷ್ಟು ಮಾಂಸ ಹಾಗೂ ಸನಿಹದ ನದಿ ಬದಿಯಲ್ಲಿ ಎಸೆದಿದ್ದ ಕಡವೆ ಚರ್ಮ, ಕೊಂಬು ಹಾಗೂ ಹತ್ಯೆಗೆ ಬಳಸಿದ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.ಪ್ರಭಾಕರನ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಡಿಕೇರಿ ವಿಭಾಗ ಹಾಗೂ ನಿಲೇಶ್ ಸಿಂಧೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳು, ಮಡಿಕೇರಿ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂದನ್, ಭಾಗಮಂಡಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಎಂ.ಎನ್. ನೇತೃತ್ವದಲ್ಲಿ ಪಿ.ಜೆ. ರಾಘವ, ಉಪ ವಲಯ ಅರಣ್ಯಾಧಿಕಾರಿ (ಮೊದಲ ಪುಟದಿಂದ) ಹಾಗೂ ಸಿಬ್ಬಂದಿಗಳು ಆರೋಪಿಗಳಾದ ತಾವೂರು ಗ್ರಾಮದ ಕೆ.ಎಂ. ಸತೀಶ್, ಅನಿಲ್ ಕುಮಾರ್ ಕೆ.ಸಿ., ಬಾಲಕೃಷ್ಣ ಸಿ.ಎಂ., ರಾಘವೇಂದ್ರ ಕೆ. ಅವರುಗಳನ್ನು ಬಂಧಿಸಿದ್ದಾರೆ. ಕೆ.ಸಿ.ಕುಮಾರ್ ಎಂ. ಚೆಂಬು ಗ್ರಾಮದ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಜೋಯಪ್ಪ, ಪುನೀತ್ ಎಂ.ಎಸ್., ಪುನೀತ್ ಕೆ., ತಿಲಕ, ಪಿ.ಡಿ. ಜನಾರ್ಧನ, ಚಂದ್ರಪ್ಪ ಬಣಕಾರ್, ನಾಗರಾಜ್, ಕಾರ್ತಿಕ್ ಡಿ., ಕೂಸಪ್ಪ, ಭರತ್, ಶರೀಫ್ ಹಾಗೂ ಶಿವಪ್ರಸಾದ್, ಅಮೃತೇಶ್ ಬಿ.ಬಿ., ಉಪ ವಲಯ ಅರಣ್ಯಾಧಿಕಾರಿ, ತೊಡಿಕಾನ ಉಪ ವಲಯ ಇವರ ಸಿಬ್ಬಂದಿಗಳಾದ ಭಿರಾ ಗೌಡ, ರವಿ ಎಂ.ಎಸ್., ಗಣೇಶ್ ಮತ್ತು ಸುದೀರ್ ಜೆ.ಪಿ. ಪಾಲ್ಗೊಂಡಿದ್ದರು.