ಮಡಿಕೇರಿ, ಅ. 1: ಜಿಲ್ಲೆಯಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಅವಶ್ಯವಿರುವ ಭೂಮಿ ಸರ್ವೇ ಮಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಈಗಾಗಲೇ ಸ್ಥಳ ಗುರುತಿಸಿರುವ ಪ್ರದೇಶಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು. ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಹೆಸರಿಗೆ ಆರ್.ಟಿ.ಸಿ ಮಾಡಬೇಕು ಎಂದ ಜಿಲ್ಲಾಧಿಕಾರಿ, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ಶೀಘ್ರವಾಗಿ ಅಭಿಪ್ರಾಯ ನೀಡುವಂತೆ ತಿಳಿಸಿದರು. ಇಲಾಖಾವಾರು ಕಟ್ಟಡ ನಿರ್ಮಾಣ, ಕಸ ವಿಲೇವಾರಿಗೆ ಜಾಗ ಗುರುತಿಸುವಿಕೆ ಪ್ರದೇಶಗಳು ಸೇರಿದಂತೆ ಮತ್ತಿತರ ಸ್ಥಳಗಳ ಸರ್ವೇ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಅವರು ತಿಳಿಸಿದರು. ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು ಮಾತನಾಡಿ ಭಾಗಮಂಡಲದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಾಣ ಮಾಡಬೇಕಿದೆ. ಈಗಾಗಲೇ ತೋಟಗಾರಿಕಾ ಇಲಾಖೆಗೆ ಸೇರಿದ ಸ್ಥಳ ಗುರುತಿಸಲಾಗಿದೆ ಎಂದು ಗಮನಕ್ಕೆ ತಂದರು.
ಐಟಿಡಿಪಿ ಇಲಾಖೆಗೆ ಸಂಬಂಧಿಸಿದಂತೆ ಅರಣ್ಯ ಹಕ್ಕುಪತ್ರ ವಿತರಣೆ ಕುರಿತಂತೆ ಜಿಲ್ಲಾಧಿಕಾರಿ ಮಾಹಿತಿ ಪಡೆದರು. ಅಲ್ಲದೆ ಅರಣ್ಯ ಹಕ್ಕು ಪತ್ರ ವಿತರಣೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳ ವಿಲೇವಾರಿ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸೂಚನೆ ನೀಡಿದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಅವಶ್ಯವಿರುವ ಜಮೀನುಗಳ ಸರ್ವೇ ವಿಳಂಬದ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ತಹಶೀಲ್ದಾರರು, ಭೂ ದಾಖಲೆಗಳ ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಶಿರಸ್ತೇದಾರ್ ಮತ್ತು ಸರ್ವೇ ಸೂಪರ್ ವೈಸರ್‍ಗಳು ಈ ಬಗ್ಗೆ ಸಭೆ ನಡೆಸಿ ಬಾಕಿ ಇರುವ ಕಾರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅನುಮೋದನೆ ನೀಡಲು ಬಾಕಿ ಇರುವ ಹೋಂ ಸ್ಟೇಗಳಿಗೆ ಅನುಮೋದನೆ ನೀಡುವ ಸಂಬಂಧ ಕ್ರಮವಹಿಸಿ. ನಗರ ವ್ಯಾಪ್ತಿಯಲ್ಲಿ ಮುನಿಸಿಪಾಲ್ ಕಮಿಷನರ್ ಅವರಿಂದ ಈ ಕಾರ್ಯ ಪೂರ್ಣಗೊಳಿಸಿ ಎಂದರು.
ಈ ಸಂದರ್ಭ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಮಡಿಕೇರಿ ವ್ಯಾಪ್ತಿಯಲ್ಲಿ 95 ಹೋಂಸ್ಟೇಗಳ ದಾಖಲೆ ಪರಿಶೀಲಿಸಿ ಅನುಮೋದನೆ ನೀಡಲು ಬಾಕಿ ಇದೆ. ಹಲವು ಕಡೆ ಗ್ರಾ.ಪಂ. ಮತ್ತು ಪೊಲೀಸ್ ಇಲಾಖೆಯಿಂದ ಎನ್‍ಒಸಿ ದೊರೆತಿಲ್ಲ ಎಂದು ತಿಳಿಸಿದರು.
ಮಾಜಿ ಸೈನಿಕರಿಗೆ ನಿವೇಶನ ನೀಡುವ ಸಂಬಂಧ ಈಗಾಗಲೇ ಹಲವು ಬಾರಿ ಚರ್ಚೆಯಾಗಿದೆ. ಮಾಜಿ ಸೈನಿಕರಿಗೆ ಭೂಮಿ ನೀಡುವ ಸಂಬಂಧ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹೋಬಳಿ ಮಟ್ಟದಲ್ಲಿ ಸಭೆ ನಡೆಸಲಿದ್ದು, ತಹಶೀಲ್ದಾರರು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಬಾನ ಎಂ.ಶೇಖ್ ಮಾತನಾಡಿ, ಜಿಲ್ಲೆಯಲ್ಲಿನ ಶೇ.47 ರಷ್ಟು ಬೆಳೆ ಸಮೀಕ್ಷೆ ಕಾರ್ಯ ಪೂರ್ಣವಾಗಿದೆ ಎಂದು ಸಭೆಯ ಗಮನಕ್ಕೆ ತಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಶಿರಸ್ತೇದಾರರು ಇತರರು ಇದ್ದರು.