ವೀರಾಜಪೇಟೆ, ಸೆ. 28: ಭಾರತೀಯ ಜನತಾ ಪಕ್ಷ ತತ್ವ ಸಿದ್ಧಾಂತದಲ್ಲಿ ಮುನ್ನಡೆಯುತ್ತಿದ್ದು ವ್ಯಕ್ತಿ ಆಧಾರದಲ್ಲಿ ಮುನ್ನಡೆಯುತ್ತಿಲ್ಲ ಎಂದು ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.

ತಾಲೂಕು ಘಟಕದಿಂದ ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಲಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಬಿಜೆಪಿ ಪಕ್ಷಕ್ಕೆ ಬಂದರೆ ಏನು ಸಿಗುತ್ತದೆ ಎಂಬ ಭಾವನೆ ಬೇಡ. ದೇಶ ಕಟ್ಟುವ ಕೆಲಸ ಮೊದಲು ಆಗಬೇಕು. ಅನೇಕ ಹಿರಿಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ನಿರ್ವಹಿಸಿದ್ದಾರೆ. ಅದೇ ರೀತಿ ವಿವಿಧ ಪಕ್ಷಗಳಿಂದ ಬಿಜೆಪಿ ಸೇರ್ಪಡೆಗೊಂಡ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರಕುಮಾರ್ ಮಾತನಾಡಿ ಬಿಜೆಪಿ ಪಕ್ಷ ಹುಟ್ಟಿಕೊಂಡಿರುವುದು ಯಾವ ಉದ್ದೇಶಕ್ಕಾಗಿ ಎಂಬುದು ಪ್ರತಿಯೊಬ್ಬ ಕಾರ್ಯಕರ್ತರಿಗೆ ಗೊತ್ತಿದೆ. ಬೇರೆ ಪಕ್ಷಗಳಲ್ಲಿ ಚುನಾವಣೆ ಬಂದಾಗ ಮಾತ್ರ ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ನಾವು ಇದ್ದೇವೆ ಎಂದು ತೋರಿಸುತ್ತಾರೆ. ಬಿಜೆಪಿಯಲ್ಲಿ ನಿರಂತರ ಕಾರ್ಯಕ್ರಮದಿಂದ ಮತದಾರರ ಮನಮುಟ್ಟುವ ಕೆಲಸವಾಗುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ದೀನ್ ದಯಾಳ್ ಉಪಾಧ್ಯಾಯರು ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡ ರೀತಿಯನ್ನು ವಿವರಿಸಿದರು. ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಮಾಜಿ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ಹಾಸನ ಜಿಲ್ಲಾ ಪ್ರಭಾರಿ ರೀನಾ ಪ್ರಕಾಶ್, ನಗರ ಅಧ್ಯಕ್ಷ ಟಿಪಿ.ಕೃಷ್ಣ, ಮುಖಂಡ ಚೇದಂಡ ನವೀನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಣ್ ಭೀಮಯ್ಯ ತಾಲೂಕು ಕಾರ್ಯದರ್ಶಿ ವಾಟೇರಿರ ಬೋಪಣ್ಣ ಮತ್ತಿತರರು ಉಪಸ್ಥಿತರಿದ್ದರು.

ಹಲವಾರು ವರ್ಷಗಳ ಕಾಲ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡು ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಅನೇಕ ಕಾರ್ಯಕರ್ತರು ಬಿಜೆಪಿ ಪಕ್ಷ ಸೇರ್ಪಡೆಗೊಂಡರು. ಪ್ರಮುಖವಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಹೊತ್ತಿದ್ದ ಚೇಂದಂಡ ನವೀನ್, ವೀರಾಜಪೇಟೆ ತಾಲೂಕು ಸೇವಾದಳದ ಅಧ್ಯಕ್ಷ ಚಾರಿಮಂಡ ಶರಣು, ವೀರಾಜಪೇಟೆ ನಗರ ಮಾಜಿ ಅಧ್ಯಕ್ಷ ಮಾಳೇಟಿರ ಬೋಪಣ್ಣ, ತಾಲೂಕು ಕಾರ್ಯದರ್ಶಿ ಬಲ್ಲಟ್ಟಿಕಾಳಂಡ ರಂಜಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಮುಕ್ಕಾಟಿರ ಕಾವೇರಮ್ಮ, 90ಕ್ಕೂ ಅಧಿಕ ಮಂದಿ ಬಿಜೆಪಿ ಸೇರ್ಪಡೆಗೊಂಡರು.