ಮಡಿಕೇರಿ, ಸೆ. 28: ಕೊಡಗು ಲೇಖಕರ ಮತ್ತು ಕಲಾವಿದರ ಬಳಗದಿಂದ ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಆತ್ಮಕ್ಕೆ ಶೃದ್ದಾಂಜಲಿ ಕೋರಿ ಸಂತಾಪ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಎಂ ಪಿ. ಕೇಶವ ಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಎಸ್‍ಪಿಬಿ ಅವರ ಗಾಯನ ಮೋಡಿಗೆ ಮಾರು ಹೋಗದ ಸಂಗೀತ ರಸಿಕರೇ ಇಲ್ಲ. ಹಾಗೆಯೇ ಅವರ ಅಭಿನಯಕ್ಕೂ ಮರುಳಾಗದ ಕಲಾಭಿಮಾನಿಗಳಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ಹಲವು ಭಾಷೆಗಳಲ್ಲಿ ಸಾವಿರಾರು ಸಿನಿಮಾ ಹಾಡುಗಳಿಗೆ ಕಂಠವಾಗಿರುವ ಎಸ್‍ಪಿಬಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪೆÇೀಷಕ ನಟನಾಗಿಯೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಾವಿರಾರು ಪ್ರಶಸ್ತಿಗಳನ್ನು, ಪದ್ಮಭೂಷಣ, ರಾಷ್ಟ್ರಮಟ್ಟದ ಹತ್ತಾರು ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಮೂವತ್ತಕ್ಕೂ ಹೆಚ್ಚು ಎಂದರು.

ಕೊಡಗು ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಎಸ್ ಐ ಮುನೀರ್, ಮಾತನಾಡಿ ಹಿಂದೆ ಎಸ್‍ಪಿಬಿ ಮಡಿಕೇರಿಯ ಕಾರ್ಯಕ್ರಮಕ್ಕೆ ಬಂದಾಗ ಅವರು ನಡೆದುಕೊಂಡ ರೀತಿ ಅವರು ಮೇಲುಕೀಳು ಇಲ್ಲದೆ ಎಲ್ಲರೊಡನೆ ಬೆರೆತ ರೀತಿ ಅವರ ಸರಳತೆಯನ್ನು ತೋರುತಿತ್ತು ಎಂದರು. ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಅಧ್ಯಕ್ಷ ಬಿ ಎನ್ ಮನು ಶೆಣೈ ಮಾತನಾಡಿ ಎಸ್ ಪಿ ಬಿ ಅವರು ದೀನದಲಿತರ ನೋವುಗಳಿಗೆ ಸ್ಪಂದಿಸುವ ವ್ಯಕ್ತಿಯಾಗಿದ್ದು ಸ್ವತಃ ಒಂದು ಟ್ರಸ್ಟಿನ ಅಧ್ಯಕ್ಷರಾಗಿದ್ದು ಹಲವಾರು ಜನರಿಗೆ ಸಹಾಯ ಮಾಡಿದ್ದಾರೆ ಎಂದರು.

ಮಡಿಕೇರಿ ಬಿ ಆರ್ ಸಿ ರಂಜಿತ್, ಕನ್ನಡ ಸಾಹಿತ್ಯ ಪರಿಷತ್ತಿನ ಮಡಿಕೇರಿ ತಾಲೂಕು ಮಾಜಿ ಅಧ್ಯಕ್ಷ ಬೇಬಿ ಮ್ಯಾಥ್ಯೂ ಸಂತಾಪ ವ್ಯಕ್ತಪಡಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಮೂಡಾ ಮಾಜಿ ಅಧ್ಯಕ್ಷೆ ಸುರೈಯಾ ಅಬ್ರಾರ್, ಮಿನಾಜ್ ಪ್ರವೀಣ್, ಬಳಗದ ಉಪಾಧ್ಯಕ್ಷೆ ರೇವತಿ ರಮೇಶ್, ವಿ.ಟಿ.ಮಂಜುನಾಥ್, ಆರ್.ಪಿ. ಚಂದ್ರಶೇಖರ್ ಉಪಸ್ಥಿತರಿದ್ದರು. ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ ಸ್ವಾಗತಿಸಿದರು, ಉಪಾಧ್ಯಕ್ಷ ಎಂ.ಇ.ಮೊಹಿದ್ದಿನ್ ವಂದಿಸಿದರು.