ಸೋಮವಾರಪೇಟೆ, ಸೆ. 28: ಸಿಪಿಐ ಪಕ್ಷದ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಸೂರಿಗಾಗಿ ಸಮರ ಜಾಥಾವು ಜಿಲ್ಲೆಯಲ್ಲಿ ಅ.2ರಿಂದ ಆರಂಭಗೊಳ್ಳಲಿದ್ದು, ಕಾರ್ಮಿಕ ಸಂಘಟನೆಯಾದ ಎ.ಐ.ಟಿ.ಯು.ಸಿ. ವತಿಯಿಂದ ಸರಣಿ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷೆ ಹೆಚ್.ಎಂ. ಸೋಮಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 2ರಿಂದ ಜಾಥಾ ಪ್ರಾರಂಭವಾಗಲಿದ್ದು, ಅಂದು ಸೋಮವಾರಪೇಟೆಯ ಗಾಂಧಿ ಪ್ರತಿಮೆ ಎದುರು ಜಾಥಾಕ್ಕೆ ಚಾಲನೆ ನೀಡಲಾಗುವುದು. ಸಿಪಿಐ ರಾಜ್ಯಾಧ್ಯಕ್ಷರಾದ ಸ್ವಾತಿ ಸುಂದರೇಶ್, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಕೆ. ಗುಣಶೇಖರ್, ಜಿಲ್ಲಾ ಕಾರ್ಯದರ್ಶಿ ಸುನಿಲ್ ಅವರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಅ.2ರಿಂದ 5ರವರೆಗೆ ವಿವಿಧ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ ನಡೆಸಲಾಗುವುದು. ಅ.2ರಂದು ಬೇಳೂರು, ಐಗೂರು, ಕಿರಗಂದೂರು ಗ್ರಾಮ ಪಂಚಾಯಿತಿ, 3ರಂದು ಮಾದಾಪುರ, ಕಂಬಿಬಾಣೆ, ತಾ. 5ರಂದು ಸುಂಟಿಕೊಪ್ಪ, ಕೆದಕಲ್ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಕಳೆದ 20 ವರ್ಷದಿಂದ ಜಿಲ್ಲೆಯಲ್ಲಿ ಸೂರಿಗಾಗಿ ಹೋರಾಟ ಮಾಡುತ್ತಾ ಬಂದಿದ್ದರೂ, ಸರ್ಕಾರಗಳು ಸ್ಪಂದನೆ ನೀಡಿಲ್ಲ ಎಂದು ದೂರಿದರು.

ಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಎನ್. ಮಣಿ, ಕಾರ್ಯದರ್ಶಿ ಸುಂದರ, ಮಾದಾಪುರದ ಸೂರಿಗಾಗಿ ಸಮಿತಿ ಅಧ್ಯಕ್ಷ ಅಣ್ಣಪ್ಪ, ಸಂಘಟನೆಯ ಸಿದ್ದಾಪುರ ಹೋಬಳಿ ಅಧ್ಯಕ್ಷ ಕುಮಾರ್, ಸಲಹೆಗಾರ ಶೇಷಪ್ಪ ಅವರುಗಳು ಉಪಸ್ಥಿತರಿದ್ದರು.