ಗೋಣಿಕೊಪ್ಪಲು, ಸೆ.28: ಹಲವು ಸಮಯದ ನಂತರ ಗೋಣಿಕೊಪ್ಪಲುವಿನ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಿ.ಕೆ.ಬೋಪಣ್ಣ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪಂಚಾಯ್ತಿಯ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿದರು. ಪ್ರಮುಖವಾಗಿ ನಗರದಲ್ಲಿ ಹಲವು ದಶಕಗಳಿಂದ ವಾಸವಾಗಿರುವ ಪೌರ ಕಾರ್ಮಿಕರು ಹಾಗೂ ಬಡಜನತೆಯ ವಸತಿ ಯೋಜನೆ ಬಗ್ಗೆ ಪಂಚಾಯ್ತಿಯು ತೆಗೆದುಕೊಂಡ ಕ್ರಮದ ಬಗ್ಗೆ ಚರ್ಚೆ ನಡೆಸಿದರು. ಕ್ಷೇತ್ರದ ಶಾಸಕರು ಉತ್ತಮ ಸ್ಥಾನದಲ್ಲಿರುವುದರಿಂದ,ಕೊಡಗಿನ ಉಸ್ತುವಾರಿ ಸಚಿವರು ವಸತಿ ಸಚಿವರು ಆಗಿರುವುದರಿಂದ ಇಲ್ಲಿನ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ವಿಫುಲ ಅವಕಾಶವಿದೆ. ಪಂಚಾಯ್ತಿ ಸದಸ್ಯರು ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ಬಡ ಜನತೆಗೆ ವಸತಿ ಕಲ್ಪಿಸುವ ಪ್ರಯತ್ನದಲ್ಲಿ ಮುಂದಾಗಬೇಕು. ಈಗಾಗಲೇ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ಗುರುತಿಸಿ ಪೌರ ಕಾರ್ಮಿಕರಿಗೆ ವಸತಿ ಗೃಹದ ನಿರ್ಮಾಣವಾಗಬೇಕು. ಉಳಿದ ಜಾಗದಲ್ಲಿ ಸರ್ಕಾರದ ನಿಯಮದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ನಿವೇಶನ ರಹಿತರಿಗೆ ನಿವೇಶನ ಸೇರಿದಂತೆ ಮನೆ ನಿರ್ಮಿಸಲು ಕ್ರಮಕ್ಕೆ ಮುಂದಾಗಬೇಕು. ಕೂಡಲೇ ಅಗತ್ಯ ದಾಖಲೆಗಳೊಂದಿಗೆ ಬೆಂಗಳೂರಿಗೆ ತೆರಳಿ ಶಾಸಕರಾದ ಕೆ.ಜಿ. ಬೋಪಯ್ಯನವರ ಮುಂದಾಳತ್ವದಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಹಲವು ವರ್ಷಗಳಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ಮುಂದಾಗಬೇಕೆಂದು ಪಂಚಾಯ್ತಿ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಪಂಚಾಯ್ತಿಯ ಪ್ರಭಾರ ಅಧ್ಯಕ್ಷರಾದ ಕಾವ್ಯ ಅಧ್ಯಕ್ಷತೆಯಲ್ಲಿ ಪಂಚಾಯಿತಿಯ ಹಿರಿಯ ಸದಸ್ಯರಾದ ಕೆ.ಪಿ.ಬೋಪಣ್ಣ,ಬಿ.ಎನ್.ಪ್ರಕಾಶ್, ಕುಲ್ಲಚಂಡ ಪ್ರಮೋದ್ ಗಣಪತಿ, ರಾಜಶೇಖರ್ ಕಿರಿಯ ಸದಸ್ಯರಾದ ಜೆ.ಕೆ.ಸೋಮಣ್ಣ, ಮುರುಘ ವಿಷಯ ಪ್ರಸ್ತಾಪಿಸಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಲವು ಖಾಲಿ ಜಾಗಗಳು ಪಂಚಾಯ್ತಿಯ ಹೆಸರಿನಲ್ಲಿವೆ. ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ವಸತಿ ರಹಿತರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಹುದು. ಈ ಹಿಂದೆ ಈ ಬಗ್ಗೆ ಲಿಖಿತ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜನ ವಾಗಲಿಲ್ಲ. ಇದೀಗ ಜಿಲ್ಲಾ ಪಂಚಾಯ್ತಿ ಸದಸ್ಯರ ಮುಂದಾಳತ್ವದಲ್ಲಿ ಇಂತಹ ಉತ್ತಮ ಕಾರ್ಯಕ್ಕೆ ಪಂಚಾಯ್ತಿ ಸರ್ವ ಸದಸ್ಯರ ತಂಡ ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ಉತ್ತಮ ಕೆಲಸ ಇಂದಿನಿಂದಲೇ ಪ್ರಾರಂಭಿಸಲು ಅಣಿಯಾಗೋಣ ಎಂದರು.
ಮೂರನೇ ವಾರ್ಡಿನ ಸದಸ್ಯರಾದ ಸುರೇಶ್ ರೈ,ಎಂ.ಮಂಜುಳ, ಮುರುಗ, ಪ್ರಸ್ತಾಪಿಸಿ ಹೊಳೆ ಬದಿಯಲ್ಲಿರುವ ಗುಡಿಸಲು ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಚೆಸ್ಕಾಂನ ಅಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭ ಕಾನೂನಿನ ನೆಪವನ್ನೇ ಹೇಳುತ್ತಿದ್ದರೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಬೇಕೆಂದು ಜಿಲ್ಲಾ ಪಂಚಾಯ್ತಿ ಸದಸ್ಯರಲ್ಲಿ ಮನವಿ ಮಾಡಿದರು. ಸ್ಥಳದಿಂದ ದೂರವಾಣಿ ಮೂಲಕ ಚೆಸ್ಕಾಂನ ಅಧಿಕಾರಿ ಎಇಇ ಅಂಕಯ್ಯನವರನ್ನು ಸಂಪರ್ಕಿಸಿದ ಜಿ.ಪಂ.ಸದಸ್ಯರಾದ ಸಿ.ಕೆ.ಬೋಪಣ್ಣ ಮಾನವಿಯತೆ ಹಿತದೃಷ್ಟಿಯಿಂದ ಪ್ರತಿ ನಾಗರಿಕನಿಗೂ ಮೂಲಭೂತ ಸೌಕರ್ಯ ನೀಡುವುದು ಕರ್ತವ್ಯವಾಗಿದೆ. ಈ ನಿಟ್ಟಿನನಲ್ಲಿ ಗುಡಿಸಲು ವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು. ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಚೆಸ್ಕಾಂನ ಎಇಇ ಅಂಕಯ್ಯ ಭರವಸೆ ನೀಡಿದರು.
ಕಸ ವಿಲೇವಾರಿ ಸಮಸ್ಯೆಯು ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪ ತಾಳುವುದರಿಂದ ಮುಂದಿನ ದಿನದಲ್ಲಿ ಗೋಣಿಕೊಪ್ಪ ಅರುವತ್ತೋಕ್ಲು ಹಾಗೂ ಪೊನ್ನಂಪೇಟೆ ಪಂಚಾಯ್ತಿ ಅಧ್ಯಕ್ಷರ ಹಾಗೂ ಅಧಿಕಾರಿಗಳ ಸಭೆಯನ್ನು ಶಾಸಕರ ಸಮ್ಮುಖದಲ್ಲಿ ಆಯೋಜಿಸುವ ಮೂಲಕ ಹಳ್ಳಿಗಟ್ಟು ಸಮೀಪವಿರುವ ಕಸ ವಿಲೆವಾರಿ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಜಿ.ಪಂ.ಸದಸ್ಯರು ಸೂಚನೆ ನೀಡಿದರು.
ನಗರದ 4ನೇ ವಿಭಾಗ, 6ನೇ ವಿಭಾಗ, ಮುಖ್ಯ ರಸ್ತೆಗಳು ತೀರ ಹಾಳಾಗಿರುವುದರಿಂದ ಇದನ್ನು ಡಾಂಬರೀಕರಣಗೊಳಿಸಲು ಜಿಲ್ಲಾ ಪಂಚಾಯತ್ ಅನುದಾನದಿಂದ 15 ಲಕ್ಷ ಹಣವನ್ನು ಮೀಸಲಿಡಲಾಗಿದೆ ಆದಷ್ಟು ಬೇಗನೇ ಕಾಮಗಾರಿ ಪ್ರಾರಂಭಿಸಲಾಗುವುದು ಅಲ್ಲಿಯವರೆಗೂ ಸಾರ್ವಜನಿಕರು ಸಹಕರಿಸಲು ಮನವಿ ಮಾಡಿದರು. ಪಂಚಾಯ್ತಿ ವ್ಯಾಪ್ತಿಯ ಲೈಸನ್ಸ್‍ಗಳನ್ನು ಆದಷ್ಟು ಬೇಗನೇ ನೀಡಿ ಆದಾಯ ಕ್ರೋಢೀಕರಣ ಮಾಡಲು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪಂಚಾಯ್ತಿ ಸದಸ್ಯರಾದ ರಾಮಕೃಷ್ಣ, ನೂರೇರ ರತಿಅಚ್ಚಪ್ಪ, ಯಾಸ್ಮೀನ್, ಧ್ಯಾನ್‍ಸುಬ್ಬಯ್ಯ, ಧನಲಕ್ಷ್ಮಿ, ಚೇಂದೀರ ಪ್ರಭಾವತಿಮಹೇಶ್, ಮುಂತಾದ ಸದಸ್ಯರು ಉಪಸ್ಥಿತರಿದ್ದರು. ಪಂಚಾಯ್ತಿ ಪಿಡಿಒ ಶ್ರೀನಿವಾಶ್ ಸ್ವಾಗತಿಸಿದರು, ಸಿಬ್ಬಂದಿ ನವೀನ್ ವಂದಿಸಿದರು.