ಡಾ|| ನಯನ ಕಶ್ಯಪ್ ಇವರು ಮೂಲತಃ ಉಡುಪಿ ಜಿಲ್ಲೆಯವರು. ಕುಂದಾಪುರದ ಶ್ರೀನಿವಾಸಮೂರ್ತಿ ಜಾನಕಿ ದಂಪತಿಗಳ ಪುತ್ರಿಯಾದ ನಯನ ಕಶ್ಯಪ್ ಮಡಿಕೇರಿಯ ಉದ್ಯಮಿ ಬಾಲಾಜಿ ಕಶ್ಯಪ್ ಅವರನ್ನು ವರಿಸುವ ಮೂಲಕ 1994ರಲ್ಲಿ ಕೊಡಗಿಗೆ ಆಗಮಿಸಿದರು. ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಾಗೂ ಮಂಗಳೂರು ವಿವಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಬ್ರಹ್ಮಾವರದ ಕ್ರಾಸ್‍ಲ್ಯಾಂಡ್ ಕಾಲೇಜಿನಲ್ಲಿ 1993ರಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದರು. ನಂತರ ಕೆಲಕಾಲ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮಡಿಕೇರಿಗೆ ಆಗಮಿಸಿದ ಮೇಲೆ ಕೆಲ ಸಮಯ ಕೊಡಗು ವಿದ್ಯಾಲಯ ಸಂಯುಕ್ತ ಕಾಲೇಜಿನಲ್ಲಿ ಹಾಗೂ 2001 ರಿಂದೀಚೆಗೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಖಾಯಂ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿ.ಎ, ಎಂ.ಎ, Sಐಇಖಿ, ಎಂ.ಫಿಲ್, ಪಿ ಹೆಚ್‍ಡಿ ಪದವಿ ಗಳನ್ನು ಪಡೆದಿರುವ ಇವರು ಅಧ್ಯಾಪನಾ ವೃತ್ತಿಯ ಜೊತೆಗೆ ಸಾಹಿತ್ಯದ ಬರವಣಿಗೆ, ಪ್ರವಾಸ, ಸಂಗೀತ, ನಾಟಕ ಪ್ರದರ್ಶನದ ಆಯೋಜನೆ ಮುಂತಾದ ಹವ್ಯಾಸಗಳನ್ನು ಹೊಂದಿದ್ದಾರೆ. ತನ್ನ ಸಾಹಿತ್ಯ ಸೇವೆಯನ್ನು ಅಳಿಲು ಸೇವೆ ಎಂದು ಪರಿಗಣಿಸುವ ಇವರು ಕಥೆ, ಕವನ ಸಂಕಲನ, ಪ್ರಬಂಧ, ಸಂಕಲನ, ಅನುವಾದ (ಇಂಗ್ಲಿಷಿನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷಿಗೆ ) ಮತ್ತು ಅಧ್ಯಾತ್ಮಿಕ ಲೇಖನಗಳು, ಮಕ್ಕಳ ಸಾಹಿತ್ಯ ಅನುವಾದ ಸೇರಿ ಒಟ್ಟು 32ಕ್ಕಿಂತಲೂ ಹೆಚ್ಚು ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ. ಇವರು ಅನುವಾದಿಸಿರುವ "ಹಿಮಾಲಯ ಗುರುವಿನ ಗರಡಿಯಲ್ಲಿ: ಓರ್ವ ಯೋಗಿಯ ಆತ್ಮಕಥೆ" ಎಂಬ ಕೃತಿಯು ಇಪ್ಪತ್ತೊಂದು ಮರುಮುದ್ರಣಗಳನ್ನು ಕಂಡು ದಾಖಲೆ ಸೃಷ್ಟಿಸಿರುತ್ತದೆ. ಇವರ ಇಂಗ್ಲಿಷ್ ಅನುವಾದಗಳನ್ನು ಪೆಂಗ್ವಿನ್ ಹಾಗೂ ಆಕ್ಸ್‍ಫರ್ಡ್ ಪ್ರಕಾಶನಗಳು ಹೊರ ತಂದಿವೆ. ಇವರ "ಮೆಟ್ಟಿಲ ಹಾದಿ" ಕವನ ಸಂಕಲನಕ್ಕೆ 2003ರಲ್ಲಿ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಹಾಗೂ 2005ರಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ ಸಂದಿವೆ. ಕೊಡಗಿನ ಭಾರತೀಯ ವಿದ್ಯಾಭವನ ಪ್ರಾಜೆಕ್ಟ್ ಕೂರ್ಗ್ ಹಾಗೂ ಸ್ಟಿಕ್‍ಮೆಕೆಯ ಸಕ್ರಿಯ ಸ್ವಯಂಸೇವಕರಾಗಿ 2018ರ ಉತ್ಪಾತದ ನಂತರ ಕಾಲೂರಿನ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತಿದ್ದಾರೆ. "ಬರವಣಿಗೆಯೆನ್ನುವುದು ಆತ್ಮದ ಒಂದು ಜರೂರೇ ಹೊರತು, ಎಲ್ಲರೂ ಬರೆಯುವರು ಹಾಗಾಗಿ ನಾನೂ ಬರೆಯುವೆನೆಂಬ ಪೈಪೆÇೀಟಿಗಾಗಲಿ ಅಥವಾ ಹೆಗ್ಗಳಿಕೆಗಾಗಲಿ ಬರೆಯುವುದು ಕೊಂಚವಾದರೂ ಅದು ಗಟ್ಟಿಯಾಗಿರಬೇಕು. ರಾಶಿ ಜೊಳ್ಳಿಗಿಂತ ಒಂದೆರಡು ಗಟ್ಟಿ ಕಾಳು ಹೆಚ್ಚು ಉಪಯುಕ್ತ. ಜ್ಞಾನದ ಅಗಾಧ ಶರಧಿಯಲ್ಲಿ ನಮ್ಮದೊಂದು ಜೀವನ್ಮುಖೀ ಬಿಂದು ಸೇರಬಹುದಾದರೆ ಅದಕ್ಕಿಂತ ಬೇರೆ ಸಾರ್ಥಕತೆಯಿಲ್ಲ ಎನಿಸುತ್ತದೆ" ಎಂದು ಇಂದಿನ ನವ ಬರಹಗಾರರಿಗೆ ಇವರು ಕಿವಿಮಾತು ಹೇಳುತ್ತಾರೆ. ಇವರು ಪ್ರಸ್ತುತ ಮಡಿಕೇರಿಯಲ್ಲಿ ವಾಸವಾಗಿದ್ದಾರೆ.
-ವೈಲೇಶ್ ಪಿ. ಎಸ್., ಕೊಡಗು.