ವೀರಾಜಪೇಟೆ, ಸೆ. 26: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡಾಡಿ ನಾಯಿಗಳ ಸಂಖ್ಯೆ ಅಧಿಕವಾಗಿದ್ದು, ಇದರಿಂದ ನಾಗರಿಕರಿಗೆ ನಿರಂತರವಾಗಿ ತೊಂದರೆಯಾಗುತ್ತಿರುವುದರ ಹಿನೆÀ್ನಲೆಯಲ್ಲಿ ಮುಖ್ಯರಸ್ತೆ ಸೇರಿದಂತೆ ಎಲ್ಲ ವಾರ್ಡ್‍ಗಳಲ್ಲಿ ನಾಯಿಗಳನ್ನು ಹಿಡಿದು ಎಲ್ಲ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲು ಪಟ್ಟಣ ಪಂಚಾಯಿತಿ ನಿರ್ಧರಿಸಿದ್ದು, ಇಲ್ಲಿನ ಪಶುವೈದ್ಯ ಇಲಾಖೆಯಲ್ಲಿ ಇಂದಿನಿಂದಲೇ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 12 ಬೀಡಾಡಿ ನಾಯಿಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಹಿಡಿದು ಸಂತಾನ ಹರಣ ಚಿಕಿತ್ಸೆಗೊಳ ಪಡಿಸಿದ್ದಾರೆ. ಪಟ್ಟಣ ಪಂಚಾಯಿತಿ ಪ್ರಪ್ರಥಮವಾಗಿ ಬೀಡಾಡಿ ನಾಯಿಗಳಿಗೆ ಈ ಪ್ರಯೋಗ ಮಾಡಿದ್ದು, ನಿರಂತರವಾಗಿ ಈ ಪ್ರಯೋಗವನ್ನು ಮುಂದುವರೆಸಿ ಬೀಡಾಡಿ ನಾಯಿಗಳನ್ನು ನಿಯಂತ್ರಿಸಲಾಗುವುದು ಎಂದು ಶ್ರೀಧರ್ ತಿಳಿಸಿದರು.

ಪಶುವೈದ್ಯಾಲಯದ ಡಾ. ತಮ್ಮಯ್ಯ ಅವರ ನೇತೃತ್ವದಲ್ಲಿ ಡಾ. ಎಂ.ಸಿ.ಲತಾ, ಡಾ. ಶ್ರೀದೇವ್, ಡಾ. ಶಾಂತೇಶ್ ನಾಯಿಗಳಿಗೆ ಎರಡು ಪ್ರತ್ಯೇಕ ಘಟಕಗಳಲ್ಲಿ ಸಂತಾನ ಹರಣ ಚಿಕಿತ್ಸೆ ನಡೆಸಿದರು. ಇದರ ನಂತರ ನಾಯಿಗಳ ಆರೋಗ್ಯ ತಪಾಸಣೆ ನಡೆಸಿ ಎಲ್ಲ ನಾಯಿಗಳಿಗೆ ಆಂಟಿರೇಬಿಟ್ ಲಸಿಕೆ ಯನ್ನು ಹಾಕಲಾಗುವುದು. ರಸ್ತೆಗಳಲ್ಲಿ ಅಲೆಮಾರಿಯಗಿ ಸಂಚರಿಸುವ ನಾಯಿಗಳಿಗೆ ಈ ಸಂತಾನ ಹರಣ ಚಿಕಿತ್ಸೆ ನಡೆಸಲಾಗುವುದು. ಈಗಾಗಲೇ ಪಟ್ಟಣ ಪಂಚಾಯಿತಿ ಸುಮಾರು 150 ನಾಯಿಗಳನ್ನು ಗುರುತಿಸಿದ್ದು ಪ್ರತಿ ದಿನ 10ರಿಂದ 12 ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗುವುದು ಎಂದು ಡಾ. ತಮ್ಮಯ್ಯ ತಿಳಿಸಿದರು.

ಸಾಕು ನಾಯಿಗಳಿಗೆ ಎಚ್ಚರ

ಸಾಕು ನಾಯಿಗಳನ್ನು ಪಟ್ಟಣದಲ್ಲಿ ಅಲೆಮಾರಿಯಾಗಿ ಸಂಚರಿಸಲು ಬಿಡದೆ ಮನೆಯಲ್ಲಿಯೇ ಕಟ್ಟಿ ಹಾಕುವಂತೆ ಪಟ್ಟಣ ಪಂಚಾಯಿತಿ ನಾಯಿಗಳ ಮಾಲೀಕರಿಗೆ ಎಚ್ಚರಿಸಿದೆ. ಪಟ್ಟಣ ಪಂಚಾಯಿತಿಯಿಂದ ಸಂತಾನ ಹರಣ ಚಿಕಿತ್ಸೆಗಾಗಿ ನಾಯಿಗಳನ್ನು ಹಿಡಿಯುತ್ತಿರುವುದರಿಂದ ನಾಯಿಗಳ ಮಾಲೀಕರು ನಿಗಾವಹಿಸುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.