ಇಂದು ನದಿ ದಿನ

ನದಿ ತೀರಗಳು ಸಂಸ್ಕøತಿಗಳ ಉಗಮ ಸ್ಥಾನ. ಭಾರತ ದೇಶದಲ್ಲಿ ನದಿಗೆ ತಾಯಿ, ದೇವತೆಯ ಸ್ಥಾನ ನೀಡಿ ಪೂಜಿಸಲಾಗುತ್ತಿದೆ. ದಕ್ಷಿಣ ಭಾರತದ ಕೋಟ್ಯಾಂತರ ಜನ, ಜಾನುವಾರುಗಳಿಗೆ ಜೀವ ಜಲವಾಗಿರುವ ಕಾವೇರಿ ನದಿ ಕೊಡಗಿನ ಆರಾಧ್ಯ ದೇವತೆಯೆಂದು ಪರಿಗಣಿಸುವುದರೊಂದಿಗೆ ಸಪ್ತ ನದಿಗಳಲ್ಲಿ ಒಂದಾಗಿದೆ. ಜನ, ಜಾನುವಾರುಗಳಿಗೆ ಜೀವನದಿ ಯಾಗಿರುವ ಕಾವೇರಿ ನದಿ ಪ್ರಸಕ್ತ ತನ್ನ ಒಡಲಿನಲ್ಲಿ ಬಹುತೇಕ ಕಲುಷಿಕೆಯನ್ನು ಹೊತ್ತು ತನ್ನ ತವರೂರಾದ ಕೊಡಗು ಜಿಲ್ಲೆಯ ಮೂಲದಿಂದಲೇ ಹರಿಯುತ್ತಿರುವ ದೃಶ್ಯ ಕಂಡುಬರುತ್ತಿದೆ.

ಅರಣ್ಯ ನಾಶ ಹಾಗೂ ಹವಾಮಾನ ವೈಪರೀತ್ಯದಿಂದ ಧರೆಯಲ್ಲಿ ಏರುಪೇರು ಉಂಟಾಗುವುದರೊಂದಿಗೆ ಅಭಿವೃದ್ಧಿ ಹಾಗೂ ನಾಗಾಲೋಟದ ಅವೈಜ್ಞಾನಿಕ ಅಭಿವೃದ್ಧಿ ಹೆಸರಿನಲ್ಲಿ ಜೀವನದಿ ಕಾವೇರಿಯ ಉಪನದಿಗಳು ಮಾಯವಾಗುವುದರೊಂದಿಗೆ ಪ್ರಮುಖ ನದಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ನಗರೀಕರಣದ ಹೆಸರಿನಲ್ಲಿ ಕೆರೆಗಳು, ನದಿ ತಟಗಳು ಒತ್ತುವರಿಯಾಗುವುದರೊಂದಿಗೆ ಉಪನದಿಗಳು ಹಾಗೂ ಕಾವೇರಿ ನದಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ಅತಿಯಾಗಿ ಪ್ಲಾಸ್ಟಿಕ್ ಬಳಕೆಯೂ ಪರಿಸರ ಹಾಗೂ ಜೀವಜಲ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಪಾತ್ರೆ, ಬಟ್ಟೆ ತೊಳೆಯುವುದರಿಂದಲೂ ಮತ್ತು ಆಧುನಿಕ ಕೃಷಿ ಚಟುವಟಿಕೆಗಳಿಂದ ಹೊರಹೊಮ್ಮುವ ರಾಸಾಯನಿಕಗಳು ನೇರವಾಗಿ ನದಿ ಒಡಲು ಸೇರುತ್ತಿದೆ. ಕಾವೇರಿ ನದಿ ತಟದಲ್ಲಿರುವ ಧಾರ್ಮಿಕ ಕೇಂದ್ರಗಳ ತ್ಯಾಜ್ಯಗಳು ಕೂಡ ನೇರವಾಗಿ ನದಿ ಒಡಲು ಸೇರುತ್ತಿರುವುದು ಕೂಡ ಆಕ್ಷೇಪಾರ್ಹವಾಗಿದ್ದರೂ ಇದಕ್ಕೆ ಕಡಿವಾಣ ಬೀಳದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪೂಜಾ ಕೈಂಕರ್ಯಗಳ ಹೆಸರಿನಲ್ಲಿ ನದಿ ನೀರನ್ನು ಅತಿಯಾಗಿ ಕಲುಷಿತಗೊಳಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಕಾರ್ಖಾನೆಗಳ ತ್ಯಾಜ್ಯಗಳು ನೇರವಾಗಿ ಕಾವೇರಿ ನದಿ ಸೇರುತ್ತಿರುವ ಬಗ್ಗೆಯೂ ವಾಸ್ತವ ಚಿತ್ರಣ ಕಂಡುಬಂದಿದೆ. ಈ ಮೂಲಕ ನದಿ ನೀರು ಸಂಪೂರ್ಣ ಕಲುಷಿತಗೊಳ್ಳುವುದರೊಂದಿಗೆ ಹಲವು ರೀತಿಯ ಸಮಸ್ಯೆಗಳಿಗೆ ಕಾರಣ ವಾಗುತ್ತಿದೆ. ಇದರಿಂದಾಗಿ ಜಲಚರಗಳು ನಶಿಸುವುದಲ್ಲದೆ ಕೃಷಿ ಚಟುವಟಿಕೆ ಗಳಿಗೂ ಕೂಡ ಕುತ್ತು ಉಂಟಾಗುತ್ತಿದೆ. ಶತ ಶತಮಾನಗಳ ಕಾಲದಿಂದಲೂ ತನ್ನ ಪಾವಿತ್ರ್ಯತೆಗೆ ಮತ್ತು ಶುದ್ಧತೆಗೆ ಹೆಸರಾದ ಜೀವನದಿ ಕಾವೇರಿ ಇತ್ತೀಚೆಗೆ ಕಲುಷಿತ ಗೊಳ್ಳುವುದರೊಂದಿಗೆ ಬರಡಾಗುತ್ತಿದೆ. ಅಭಿವೃದ್ಧಿಯ ನೆಪದಲ್ಲಿ ಜಲ ಮೂಲಗಳಿಗೆ ಅಡ್ಡಿಯಾಗುವು ದರೊಂದಿಗೆ ನದಿ ತೊರೆಗಳು, ಉಪನದಿಗಳು ಕಣ್ಮರೆಯಾಗುತ್ತಿವೆ.

ಇದೆಲ್ಲದರ ಪರಿಣಾಮವಾಗಿ ಮೂಲ ಕಾವೇರಿಯ ವ್ಯಾಪ್ತಿಯಲ್ಲಿ ನದಿ ವ್ಯಾಪ್ತಿ ಏರುಪೇರಾಗಿ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಪ್ರವಾಹ ಬರುವುದರೊಂದಿಗೆ ನದಿಯ ಎರಡೂ ಕಡೆಯ ತಗ್ಗು ಪ್ರದೇಶದ ಮನೆಗಳು, ಕೃಷಿ ಚಟುವಟಿಕೆಗಳು ಜಲಾವೃತ ಗೊಂಡು ಮಳೆಗಾಲದಲ್ಲಿ ಜನಜೀವನ ಅಸ್ತವ್ಯಸ್ತವಾಗುತ್ತಿರುವುದು ಇತ್ತೀಚಿನ ದಿನಗಳ ಆತಂಕದ ಬೆಳವಣಿಗೆಯಾಗಿದೆ. ಪ್ರಕೃತಿಯನ್ನು ಆರಾಧಿಸುವ ಮೂಲಕ ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿಯನ್ನು ಮರೆಯದೆ ಇದ್ದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಎಚ್ಚರವಹಿಸಬಹುದು.

ನದಿ ತಟದ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಿಸರ್ಗವನ್ನು ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವ ಸಂಪನ್ಮೂಲ ಎನ್ನುವಷ್ಟಕ್ಕೆ ಜೀವನದಿ ಕಾವೇರಿಯನ್ನು ಸೀಮಿತವಾಗಿಸಿರುವುದು ನದಿಯ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡು ವಂತಾಗಿದೆ. ಕಾವೇರಿ ನದಿ ಹರಿಯುವ ಭಾಗದಲ್ಲಿ ಪ್ರವಾಸಿಗರ ಒತ್ತಡ ಹೆಚ್ಚುವುದರೊಂದಿಗೆ ತ್ಯಾಜ್ಯಗಳ ವಿಲೇವಾರಿ ಸಮರ್ಪಕವಾಗದೆ ನೇರವಾಗಿ ನದಿಗೆ ತ್ಯಾಜ್ಯ ಸೇರುತ್ತಿ ರುವುದು ಪ್ರಸಕ್ತÀ ಬೆಳವಣಿಗೆಯಾಗಿದೆ. ಈ ಮೂಲಕ ನದಿ ಸಂಪೂರ್ಣ ಮಲಿನಗೊಳ್ಳುತ್ತಿದ್ದು ನದಿ ನೀರು ಬಳಕೆಗೆ ಅಸಾಧ್ಯವೆನಿಸುವ ದೃಶ್ಯಗಳು ಕಂಡುಬರುತ್ತಿವೆ. ಕಾವೇರಿ ನದಿ ಮಲಿನಗೊಳ್ಳುವುದನ್ನು ತಪ್ಪಿಸಲು ತಕ್ಷಣ ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಅನಾಹುತಗಳನ್ನು ನಾವು ಎದುರಿಸಬೇಕಾಗುವುದಂತೂ ನಿಶ್ಚಿತ.

ಜನ, ಜಾನುವಾರು, ಸಸ್ಯ ಸಂಕುಲಗಳಿಗೆ, ರೈತಾಪಿ ವರ್ಗದ ಜೀವನಾಡಿಯಾಗಿರುವ ಕಾವೇರಿ ನದಿಯ ಮಾಲಿನ್ಯದಿಂದ ಸಂಪೂರ್ಣ ಸೊರಗತೊಡಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿಸ್ವಾರ್ಥವಾಗಿ ನೆಲ, ಜಲ, ಪರಿಸರ ರಕ್ಷಣೆಯಲ್ಲಿ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಿರ್ವಹಿಸುವುದರೊಂದಿಗೆ ಮುಂದಿನ ಪೀಳಿಗೆಗಾಗಿ ನದಿಗಳನ್ನು ಸಂರಕ್ಷಿಸ ಬೇಕಾಗಿದೆ. ನದಿ ತಟಗಳ ಒತ್ತುವರಿ ತೆರವು, ನದಿ ದಂಡೆಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ, ನದಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳು ಹರಿಸುವುದನ್ನು ತಪ್ಪಿಸುವುದು, ಅಕ್ರಮ ಮರಳುಗಾರಿಕೆಗೆ, ಮರಗಳ ಹನನಕ್ಕೆ ಕಡಿವಾಣ ಇಂತಹ ಕಾರ್ಯಗಳ ಮೂಲಕ ನದಿ ಸಂರಕ್ಷಣೆ ಸಾಧ್ಯ ವಾಗಲಿದೆ. ಹಿಂದಿನ ಕಾಲದಲ್ಲಿ ಜಿಲ್ಲೆಯ ಹೊಲಗದ್ದೆಗಳಲ್ಲಿ ಭತ್ತ ಬೆಳೆಯುತ್ತಿದ್ದ ಬೆಳೆಗಾರರು ಇಂದು ಪರ್ಯಾಯ ಬೆಳೆಯಾಗಿ ಶುಂಠಿ, ತಾಳೆ, ಮರಗೆಣಸು ಮುಂತಾದ ಬೆಳೆಗಳನ್ನು ಬೆಳೆಯು ತ್ತಿದ್ದಾರೆ. ಇನ್ನು ಹಲವು ಕಾರಣ ಗಳಿಂದಾಗಿ ತಮ್ಮ ಹೊಲ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಭತ್ತದ ಗದ್ದೆಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಅಂತರ್ಜಲ ಹೆಚ್ಚುತ್ತದೆ. ಗದ್ದೆಗಳು ಪಾಳು ಬಿಟ್ಟಿರುವುದರಿಂದ ಬಿಸಿಲಿನ ತಾಪ ಮಾನಕ್ಕೆ ಅಂತರ್ಜಲ ಬತ್ತಿಹೋಗಲು ಕಾರಣವಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಒಂದು ಲಕ್ಷದ ನಾಲ್ಕು ಸಾವಿರದ ಎಂಟುನೂರ ತೊಂಭತ್ತು ಹೆಕ್ಟೇರ್ ಪ್ರದೇಶಗಳಲ್ಲಿ ಕಾಫಿಯನ್ನು ಬೆಳೆಲಾಗುತ್ತಿದ್ದರೆ ಪ್ರಸಕ್ತ ಕೇವಲ 31 ಸಾವಿರ ಹೆಕ್ಟೇರ್ ಪ್ರದೇಶ ದಲ್ಲಿ ಮಾತ್ರ ಭತ್ತ ಬೆಳೆಯಲಾಗುತ್ತಿದೆ. ಉಳಿದ 20 ಸಾವಿರ ಹೆಕ್ಟೇರ್ ಪ್ರದೇಶ ಯಾವುದಕ್ಕೂ ಪ್ರಯೋಜನಕ್ಕೆ ಬಾರದೆ ಪಾಳು ಬಿದ್ದಿರುವ ದೃಶ್ಯ ಕಾಣಬಹುದು. ಬೆಳೆಗಾರರಿಗೆ ಮೂಲಭೂತ ಸೌಕರ್ಯದ ಕೊರತೆಯೆ ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ. ಮೂಲ ಕಾವೇರಿ ವ್ಯಾಪ್ತಿಯಾದ ಕೊಡಗಿನಲ್ಲಿ ಕಾಫಿ ತೋಟಗಳು ಹೆಚ್ಚಾದರೆ ಮಾತ್ರ ಮರಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ಮೂಲಕ ಪರೋಕ್ಷವಾಗಿ ಮಳೆ ಅಂತರ್ಜಲ ವೃದ್ಧಿಯಾಗುತ್ತದೆ. ಅಂತರ್ಜಲದ ನೀರು ನಿಧಾನವಾಗಿ ವರ್ಷವಿಡೀ ಹರಿಯುತ್ತಿರುವ ಕಾರಣ ವರ್ಷವಿಡೀ ನದಿಗಳಲ್ಲಿ ನೀರಿನ ಹರಿವು ಕಂಡು ಬರಲು ಸಾಧ್ಯ. ಬೇಸಿಗೆ ಅವಧಿಯಲ್ಲಿ ಜಿಲ್ಲೆಯ ಕೆಲವು ಕಾಫಿ ತೋಟಗಳಲ್ಲಿ ನೀರಿನ ಕೊರತೆ ಕೂಡ ಕಂಡು ಬರುತ್ತಿವೆ. ಜೀವನದಿ ಕಾವೇರಿಯ ಗಂಭೀರ ಸಮಸ್ಯೆಯ ಬಗ್ಗೆ ಹಲವು ಜಾಗೃತಿ, ಅರಿವು ಮೂಡಿಸುವ ಕಾರ್ಯ ಯೋಜ ನೆಗಳು ನಿರಂತರ ವಾಗಿ ಸಾಗ ಬೇಕಾಗಿದೆ. ಜಿಲ್ಲಾಡಳಿತವೂ ಜಾಗೃತಗೊಂಡು ಕಾರ್ಯ ನಿರ್ವಹಿಸಬೇಕಾಗಿದೆ.

- ಚಂದ್ರಮೋಹನ್