*ಗೋಣಿಕೊಪ್ಪಲು, ಸೆ. 27: ಸಹಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಇನ್ನು ಮುಂದೆ ‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ’ದ ಅಧೀನದಲ್ಲಿಯೇ ಕಾರ್ಯನಿರ್ವಹಿಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಡಿಜಿಟಲ್ ಇಂಡಿಯಾ’ ಕನಸನ್ನು ನನಸು ಮಾಡುವ ಸಲುವಾಗಿ ದೇಶದ ಎಲ್ಲ ಬ್ಯಾಂಕಿಂಗ್ ಕ್ಷೇತ್ರವನ್ನು ಏಕಗವಾಕ್ಷಿ ಯೋಜನೆಗೆ ಅಳವಡಿಸಿದ್ದಾರೆ. ಯಾವದೇ ಸಾಲ ಸೌಲಭ್ಯವನ್ನು ಇನ್ನು ಮುಂದೆ ಆರ್.ಬಿ.ಐ. ನಿರ್ದೇಶನದ ಮೇಲೆಯೇ ನೀಡಬೇಕಾಗುತ್ತದೆ. ಆಧಾರ್, ಆರ್.ಟಿ.ಸಿ., ಪಡಿತರ ಚೀಟಿಗಳಲ್ಲಿ ಹೆಸರು ವ್ಯತ್ಯಾಸವಾಗದಂತೆ ನೋಡಿಕೊಳ್ಳುವದು ಗ್ರಾಹಕರ ಜವಾಬ್ದಾರಿ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ನುಡಿದರು.

ಬಾಳೆಲೆಯಲ್ಲಿ 20ನೇ ಕೆಡಿಸಿಸಿ ಬ್ಯಾಂಕ್ ಶಾಖೆ ಉದ್ಘಾಟನೆ ನೆರವೇರಿಸಿ, ನಂತರ ವಿಜಯಲಕ್ಷ್ಮಿ ಪ.ಪೂ. ಕಾಲೇಜು ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಿಸಿಸಿ ಬ್ಯಾಂಕ್ ರಾಷ್ಟ್ರೀಕೃತ ಬ್ಯಾಂಕ್‍ಗಿಂತಲೂ ಕೇಂದ್ರದ ಮುದ್ರಾ ಯೋಜನೆಯ ಸಾಲ ಸೌಲಭ್ಯ ನೀಡುತ್ತಿದ್ದು, ಉತ್ತಮ ಸಾಧನೆ ಮಾಡಿದೆ. ಫಲಾನುಭವಿಗಳು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು ಎಂದರು.

ಸೋಮವಾರ ನಡೆಯುವ ಕರ್ನಾಟಕ ಬಂದ್‍ಗೆ ಯಾವದೇ ಅರ್ಥವಿಲ್ಲ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಇತ್ಯಾದಿ ಕಾಯ್ದೆಗಳನ್ನು ರೈತರ ಹಿತದೃಷ್ಠಿಯನ್ನು ಗಮನದಲ್ಲಿಟ್ಟು ಮೋದಿ ಸರ್ಕಾರ ರೂಪಿಸಿದೆ. ಹೋರಾಟಗಾರರಿಂದ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಅವರು, ಬ್ಯಾಂಕಿಂಗ್ ಸೇವೆಯನ್ನು ಹಳ್ಳಿ ಹಳ್ಳಿಗೂ ತಲುಪಿಸುವ ನಿಟ್ಟಿನಲ್ಲಿ ಬಾಳೆಲೆಯಲ್ಲಿ 20ನೇ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಲಾಗಿದೆ. ಹೆಬ್ಬಾಲೆ,ಟಿ.ಶೆಟ್ಟಿಗೇರಿ ಹಾಗೂ ಬಾಳೆಲೆಯಲ್ಲಿ ಒಂದೇ ತಿಂಗಳಿನಲ್ಲಿ ಮೂರು ಶಾಖೆಯನ್ನು ಆರಂಭಿಸಿರುವದು ದಾಖಲೆ ಎಂದರು. 1921ರಲ್ಲಿ ರಾವ್ ಬಹದ್ದೂರ್ ಕೊಡಂದೇರ ಕುಟ್ಟಯ್ಯ ಅವರು ಬ್ಯಾಂಕಿನ ಪ್ರಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಇದೀಗ 99 ವರ್ಷದ ಇತಿಹಾಸವಿದೆ. ಕೇವಲ ರೂ. 4400 ಬಂಡವಾಳ ಹಾಗೂ ರೂ.10 ಸಾವಿರ ಠೇವಣಿಯಿಂದ ಡಿಸಿಸಿ ಬ್ಯಾಂಕ್ ಆರಂಭಿಸಲಾಯಿತು. ಇಂದು ಪಾಲು ಬಂಡವಾಳ ರೂ. 25 ಕೋಟಿ, ಸ್ವಂತ ಬಂಡವಾಳ 95 ಕೋಟಿ, ದುಡಿಯುವ ಬಂಡವಾಳ ರೂ. 1400 ಕೋಟಿ ಹಾಗೂ ವಾರ್ಷಿಕ ವಹಿವಾಟು ಸುಮಾರು ರೂ .1800 ಕೋಟಿ ಎಂದು ಮಾಹಿತಿ ನೀಡಿದರು. ಒಟ್ಟು ಠೇವಣಿ ಸಂಗ್ರಹಾತಿ 2019-20 ನೇ ಸಾಲಿನಲ್ಲಿ ರೂ. 926.94 ಹಾಗೂ ರೂ. 864.67 ಕೋಟಿ ಸಾಲ ನೀಡಲಾಗಿದ್ದು, ಪ್ರಸ್ತುತ 8.23 ಕೋಟಿ ಲಾಭಾಂಶ ಹೊಂದಿದೆ ಎಂದು ನುಡಿದರು.

ಜಿಲ್ಲೆಯಲ್ಲಿ 2018 ರ ಸಾಲಿನಲ್ಲಿ ಸಾಲಮನ್ನಾ ಯೋಜನೆಯಡಿ ವಿವಿಧ ಕಾರಣಗಳಿಂದಾಗಿ ಗ್ರೀನ್‍ಲಿಸ್ಟ್ ವ್ಯಾಪ್ತಿಗೆ ಒಳಪಡದೇ ಇರುವ ರೈತರನ್ನು ಗ್ರೀನ್‍ಲಿಸ್ಟ್ ವ್ಯಾಪ್ತಿಗೆ ಒಳಪಡಿಸಲು, ಸಹಕಾರ ಸಂಘಗಳ ನಿಬಂಧಕರು ತಾ.26 ರಂದು ಸುತ್ತೋಲೆಯನ್ನು ಹೊರಡಿಸಿ, ಅದರಂತೆ ಅರ್ಹ ಮತ್ತು ಅನರ್ಹ ರೈತರ ಪಟ್ಟಿಯನ್ನು ತಯಾರಿಸಿ ದಿನಾಂಕ 12.10.2020 ರೊಳಗೆ ಸಲ್ಲಿಸುವ ನಿಟ್ಟಿನಲ್ಲಿ ಕೊನೆಯ ಅವಕಾಶ ಕಲ್ಪಿಸಲಾಗಿದೆ ಎಂದು ಕೆ.ಪಿ.ಗಣಪತಿ ಮಾಹಿತಿ ನೀಡಿದರು.

ಬಾಳೆಲೆ ಎಪಿಸಿಎಂಪಿಎಸ್ ಮಾಜಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಹಾಗೂ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಎಸ್.ಕೃಷ್ಣ ಗಣಪತಿ ಮಾತನಾಡಿದರು.

ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಿ.ಕೆ. ಚಿಣ್ಣಪ್ಪ, ಹೊಟ್ಟೇಂಗಡ ಎಂ. ರಮೇಶ್, ಕನ್ನಂಡ ಸಂಪತ್, ಕಿಮ್ಮುಡಿರ ಎ. ಜಗದೀಶ್, ಉಷಾ ತೇಜಸ್ವಿ, ನಿರ್ದೇಶಕರು ಹಾಗೂ ಅಪೆಕ್ಸ್ ಬ್ಯಾಂಕ್‍ನ ನಾಮನಿರ್ದೇಶಕ ಕುಂಞಂಗಡ ಅರುಣ್ ಭೀಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಮೋಹನ್ ಎಂ.ಎಸ್., ವ್ಯವಸ್ಥಾಪಕ ದೇವಯ್ಯ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಸ್ವಾಗತ ಕೆಡಿಸಿಸಿ ಬ್ಯಾಂಕ್‍ನ ಎಜಿಎಂ (ಸಾಲ ವಿಭಾಗ) ಟಿ.ಜಿ. ಗಿರೀಶ್, ಪ್ರಾರ್ಥನೆ ಬೋಜಮ್ಮ ಹಾಗೂ ಎಜಿಎಂ, ಎಡಿಎಂ ಕೆ.ಪಿ. ಮಂದಣ್ಣ ವಂದಿಸಿದರು.