ಬೆಂಗಳೂರು ಸೆ. 26: ತಲಕಾವೇರಿ ಕ್ಷೇತ್ರದಲ್ಲಿ ಇತ್ತೀಚೆಗೆ ಗರ್ಭಗುಡಿ ತಳಭಾಗದಿಂದ ತೆÀಗೆದಿರಿಸಲ್ಪಟ್ಟ ಅಗಸ್ತ್ಯ ಪ್ರತಿಷ್ಠಾಪಿತ ವೆಂದು ಹೇಳಲಾದ ಮಹಾನ್ ಶಿವಲಿಂಗದ ಕುರಿತು ಪ್ರತಿಧ್ವನಿಸಿತು. ಕೊಡಗಿನ ವಿಧಾನ ಪರಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಈ ಕುರಿತು ವಿವರವಾಗಿ ವಿಧಾನ ಪರಷತ್‍ನಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಭಾ ನಾಯಕರು ಹಾಗೂ ರಾಜ್ಯ ಮುಜರಾಯಿ ಸಚಿವರೂ ಆದ ಕೋಟಾ ಶ್ರೀನಿವಾಸ ಪೂಜಾರಿಯವರು ‘ನಾಡಿನ ಸುವಿಖ್ಯಾತ ವೈದಿಕ ಪರಿಣಿತರ ಮಾರ್ಗದರ್ಶನದಲ್ಲೇ ಆ ಮಹಾನ್ ಶಿವಲಿಂಗವನ್ನು ಯಾವ ರೀತಿ ಪರಿಗಣಿ ಸಬೇಕೆಂದು ನಿರ್ಧಾರ ಕೈಗೊಳ್ಳಲಾ ಗುತ್ತದೆ’ ಎಂದು ಆಶ್ವಾಸನೆಯಿತ್ತರು.ವೀಣಾ ಅಚ್ಚಯ್ಯ ಅವರು ಶಿವಲಿಂಗದ ಮಹತ್ವದ ಕುರಿತು ಸದನದಲ್ಲಿ ಪ್ರಸ್ತಾಪಿಸಿದ ವಿವರ ಮಾಹಿತಿ ಹೀಗಿದೆ:

‘ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ವಿಚಾರಗಳು ಬಂದಾಗ ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆ ನಡೆದು ಜೋತಿಷಿಗಳ ಮಾರ್ಗಾನುಸಾರ ಮುಜರಾಯಿ ಪ್ರಮುಖರು ಬ್ರಹ್ಮಕಲಶ ಅಷ್ಟಬಂಧಗಳನ್ನು ಅಗಸ್ತ್ಯೇಶ್ವರ ಮತ್ತು ಗಣಪತಿ ದೇವಾಲಯಗಳಲ್ಲಿ ಕ್ಷೇತ್ರ ತಂತ್ರಿಗಳ ಮೂಲಕ ನಿರ್ವಹಿಸಿದ್ದಾರೆ. ಸ್ವತಃ ಅಗಸ್ತ್ಯ ಮಹರ್ಷಿಗಳೇ ಪ್ರ್ರತಿಷ್ಠಾಪಿಸಿದರೆಂದು ಹೇಳಲಾದ ಶಿವಲಿಂಗವನ್ನು ಈ ಹಿಂದಿನ ಸಂದರ್ಭ ಕಾವೇರಿ ನಿಗಮದಿಂದ 2002-2005ರಲ್ಲಿ

(ಮೊದಲ ಪುಟದಿಂದ) ಜೀರ್ಣೋದ್ಧಾರ ನಡೆದಾಗ ಆ ಕಡುಶರ್ಕರ ಶಿವಲಿಂಗ ಜೀರ್ಣಗೊಂಡಿತೆಂದು ಗರ್ಭಗುಡಿಯ ಕೆಳಭಾಗದಲ್ಲಿರಿಸಿ ಹೊಸ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿತ್ತು. ಆದರೆ, ಇತ್ತೀಚೆಗೆ ದೇವಾಲಯ ಸಮಿತಿ ಮತ್ತು ಧಾರ್ಮಿಕ ದತ್ತಿ ಇಲಾಖೆಯಿಂದ ನಡೆದ ಬ್ರಹ್ಮಕಲಶದ ಸಂದರ್ಭ ಜೋತಿಷಿಗಳು ಹೇಳಿದರೆಂದು ಗರ್ಭಗುಡಿಯ ಕೆಳಭಾಗದಲ್ಲಿದ್ದ ಶಿವಲಿಂಗವನ್ನು ತೆಗೆದು ಹೊರಗಿರಿಸಲಾಗಿದೆ. ಈ ಮಹಾನ್ ಶಿವಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸಲು ಪ್ರಯತ್ನಿಸಿದಾಗ ಮೈಸೂರಿನವರೆನ್ನಲಾದÀ ಕೆಲವು ಪ್ರಮುಖರು ಇದಕ್ಕೆ ತಡೆಯಾಜ್ಞೆ ತಂದಿದ್ದು ಈ ಶಿವಲಿಂಗವು ತ್ರಿಶಂಕು ಸ್ಥಿತಿಯಲ್ಲಿ ತಲಕಾವೇರಿಯಲ್ಲಿ ಎಲ್ಲಿಯೋ ಒಂದು ಕಡೆ ನಿರ್ಲಕ್ಷಿತವಾಗಿ ಇರಿಸಲ್ಪಟ್ಟಿದೆ. ಧಾರ್ಮಿಕ ಮನೋಭಾವದ ಅನ್ವಯ ಇಂತಹ ಪ್ರಕಿಯೆಗಳು ಇಡೀ ಕರ್ನಾಟಕಕ್ಕೆ ಮಾರಕವಾಗಿ ಪರಿಣಮಿಸಿವೆ ಎಂದು ಕೇಳಿಬಂದ ವಿದ್ಯಮಾನ. ಆದರೆ, ಈ ವಿಷಯದಲ್ಲಿ ಮುಜರಾಯಿ ಇಲಾಖೆಯಾಗಲೀ ಸಚಿವಾಲಯವಾಗಲೀ ಏನೂ ಕ್ರಮಕೈಗೊಳ್ಳದೆ ಮೌನವಹಿಸಿರುವುದು ಈ ನಾಡಿನ ದೌರ್ಭಾಗ್ಯವೆನಿಸಿದೆ. ಈ ದಿಸೆಯಲ್ಲಿ ಸ್ವತಃ ದೈವಭಕ್ತರೆನಿಸಿರುವ ರಾಜ್ಯ ಮುಜರಾಯಿ ಸಚಿವರು ಗಮನ ಹರಿಸಲಿ ಎಂದು ವೀಣಾ ಅಚ್ಚಯ್ಯ ಸದನದಲ್ಲಿ ಗಮನಕ್ಕೆ ತಂದರು.

ನಾಡಿನ ಸುವಿಖ್ಯಾತ ವೈದಿಕ ಪರಿಣಿತರನ್ನು ಸೇರಿಸಿ ಅವರೆಲ್ಲರ ಮಾರ್ಗದರ್ಶನವನ್ನು ಪಡೆದು ಈ ಮಹಾನ್ ಶಿವಲಿಂಗವನ್ನು ಯಾವ ರೀತಿ ಪರಿಗಣಿಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕೂಡ ಅತ್ಯಗತ್ಯವಾಗಿದೆ. ಏಕೆಂದರೆ ಪೌರಾಣಿಕ ಹಿನ್ನೆಲೆಯನ್ವಯ ಮಾತೆ ಕಾವೇರಿಗೆ ಪೂರಕವಾಗಿ ಅಗಸ್ತ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಅಗಸ್ತ್ಯೇಶ್ವರ ಶಿವಲಿಂಗದ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ, 2002ರಲ್ಲಿ ನಡೆದಿದ್ದ ಅಷ್ಟ ಮಂಗಲ ಪ್ರಶ್ನೆಯಲ್ಲಿ ಅಗಸ್ತ್ಯೇಶ್ವರನನ್ನು ನಿರ್ಲಕ್ಷಿಸಿದರೆ ಇಡೀ ನಾಡಿಗೇ ಕೆಡುಕುಂಟಾಗುತ್ತದೆ, ಕಾವೇರಿ ವಿವಾದಗಳು ಭುಗಿಲೇಳುತ್ತವೆ. ಅದನ್ನು ಸರಿಪಡಿಸಬೇಕು ಎಂಬ ಸೂಚನೆ ದೊರಕಿತ್ತು ಎಂದು ಈ ಸಂದರ್ಭ ಸ್ಮರಿಸಿಕೊಳ್ಳುತ್ತೇನೆ. ಈ ಹಿನ್ನೆಲೆಯಲ್ಲಿ ಸರಕಾರವು ಈ ವಿಚಾರವನ್ನು ಕಿಂಚಿತ್ತೂ ನಿರ್ಲಕ್ಷ್ಯ ಮಾಡದೆ ಆದ್ಯ ಗಮನ ಹರಿಸಿ ಸಾಂಪ್ರದಾಯಿಕ, ಧಾರ್ಮಿಕ ವಿಧಿವಿಧಾನಗಳ ಮೂಲಕ ಆ ಮಹಾನ್ ಶಿವಲಿಂಗದ ನಿರ್ವಹಣೆ ಕುರಿತು ಶಾಶ್ವತ ಪರಿಹಾರವನ್ನು ಕೈಗೊಳ್ಳುವಂತೆಯೂ ಈ ಮೂಲಕ ಕೊಡಗಿನ ಪ್ರತಿನಿಧಿಯಾಗಿ ವಿನಂತಿಸುತ್ತೇನೆ’ ಎಂದು ವೀಣಾ ಅಚ್ಚಯ್ಯ ಸದನದ ಗಮನ ಸೆಳೆದರು.