ಮಡಿಕೇರಿ, ಸೆ. 27: ಕಳೆದ ಮೂರು ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ ಕಡಿಮೆ ಇದ್ದ ಕಾರಣ ಮುಚ್ಚಲ್ಪಟ್ಟಿದ್ದ ಮದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪುನರ್ ಆರಂಭಿಸಲು ಅನುಮತಿ ದೊರೆತಿದೆ.

ಭೂಕುಸಿತದಿಂದ ನಿರಾಶ್ರಿತರಾದ ಕುಟುಂಬಗಳಿಗೆ ಸರ್ಕಾರದಿಂದ ಈ ಭಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, ಇಲ್ಲಿರುವ ಸುಮಾರು 25 ಮಕ್ಕಳು ಸೇರಿದಂತೆ ನೆರೆಕರೆಯಲ್ಲಿನ ಕೆಲ ಮಕ್ಕಳು ಸೇರಿ ಶಾಲೆ ತೆರೆಯಲು ಅಗತ್ಯವಾದ ಮಕ್ಕಳ ಸಂಖ್ಯೆ ಇರುವದರಿಂದ ಇಲ್ಲಿನ ಗ್ರಾಮಸ್ಥರು ಶಾಲೆಯನ್ನು ಪುನರ್ ಆರಂಭ ಮಾಡುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಪಂಚಾಯಿತಿ ಈ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ವರ್ಗಾಯಿಸಿತ್ತು. ಈ ಸಂಬಂಧ ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಮಾತುಕತೆ ನಡೆಸಿದ್ದು, ಕೊನೆಗೂ ಶಾಲೆಯನ್ನು ಪುನರ್ ಪ್ರಾರಂಭಿಸಲು ಅನುಮತಿ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವೇರಿ ಸೇನೆ ಸಂಚಾಲಕ ರವಿಚಂಗಪ್ಪ, ಶಾಲಾ ಮುಖ್ಯ ಶಿಕ್ಷಕಿ ಜಾನಕಿಯವರು ಸೇರಿದಂತೆ ಗ್ರಾಮಸ್ಥರು ಇಂದು ಶಾಲಾ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.