ಸುಂಟಿಕೊಪ್ಪ, ಸೆ. 27: ಬೀದಿ ದೀಪ ಅಳವಡಿಕೆಯಲ್ಲಿ ತಾರತಮ್ಯ ಎಸಗಲಾಗಿದೆ, ಜಮಾಬಂದಿ ಕಾರ್ಯಕ್ರಮದ ಪಟ್ಟಿಯಲ್ಲಿ ಲೆಕ್ಕ ಪರಿಶೋಧಕರ ನಡವಳಿ ಇಲ್ಲ, ಪಂಚಾಯಿತಿ ಕಟ್ಟಡ ಕಾಮಗಾರಿ ವಿಳಂಬವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ 2019-20ನೇ ಸಾಲಿನ ಪ್ರಥಮ ಜಮಾಬಂದಿ ಕಾರ್ಯಕ್ರಮ ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಪಂಚಾಯಿತಿ ಆಡಳಿತಾಧಿಕಾರಿಗಳಾದ ಕೆ.ಟಿ. ದರ್ಶನ್ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ. ಆದರೆ ಬೀದಿ ದೀಪ ಅಳವಡಿಕೆಯಲ್ಲಿ ತಾರತಮ್ಯ ಕಂಡು ಬಂದಿದೆ. ಕೂಲಿ ಕಾರ್ಮಿಕರು ನೆಲೆಸಿರುವ ಸ್ವಸ್ಥ ಶಾಲೆಯ ನಿವಾಸಿ ಗಳಿಗೆ ಬೀದಿ ದೀಪ ಅಳವಡಿಸಲು ಯಾಕೆ ಮೀನಾ ಮೇಷ ಎಣಿಸುತ್ತಿದ್ದೀರ. ಗುಡ್ಡಪ್ಪ ರೈ ಬಡಾವಣೆ ಹಾಗೂ ಶಿವರಾಂ ರೈ ಬಡಾವಣೆಯ ನಿವಾಸಿಗಳಿಗೆ ರೂ. 1,93,446 ಬೀದಿ ದೀಪಕ್ಕೆ ವೆಚ್ಚ ಮಾಡಿದ್ದೀರ ಆದರೆ ಸ್ವಸ್ಥ ಸಂಸ್ಥೆ ಬಳಿಯಿರುವ ಬಡ ಕುಟುಂಬದವರಿಗೆ ಬೀದಿ ದೀಪ ಇನ್ನೂ ದೊರಕಿಸಿಕೊಟ್ಟಿಲ್ಲ ಎಂದು ಪಿ.ಆರ್. ಸುನಿಲ್‍ಕುಮಾರ್ ಸಭೆಯಲ್ಲಿ ಪ್ರಶ್ನಿಸಿದರು.
ಸ್ವಸ್ಥ ಶಾಲೆಯ ಬಳಿ ಕೇಂದ್ರ ಸರಕಾರದ ಸೌಭಾಗ್ಯ ವಿದ್ಯುತ್ ಯೋಜನೆಯಡಿ ವಿದ್ಯುತ್ ದೀಪ ಅಳವಡಿಸಲು ನಿರ್ಧರಿಸಲಾಗಿದ್ದು, ಹಣ ಬಿಡುಗಡೆ ವಿಳಂಬವಾದರಿಂದ ಕಾರ್ಯಗತಗೊಂಡಿಲ್ಲ ಎಂದು ಪಿಡಿಓ ವೇಣುಗೋಪಾಲ್ ಮತ್ತು ಮಾಜಿ ಅಧ್ಯಕ್ಷೆ ರೋಸ್‍ಮೇರಿ ಉತ್ತರಿಸಿದರು.
ಸರಕಾರದ ಗ್ರಾ.ಪಂ.ನ ಜಮಾಬಂದಿ ಪಟ್ಟಿಯಲ್ಲಿ ಲೆಕ್ಕ ಪರಿಶೋಧಕರ ಸಹಿ ಎಲ್ಲೂ ಕಂಡು ಬಂದಿಲ್ಲ ಎಂದು ಎಂ.ಎ. ವಸಂತ್ ಪ್ರಶ್ನಿಸಿದರು. ಮುಂದಿನ ವರದಿಯಲ್ಲಿ ಲೆಕ್ಕ ಪರಿಶೋಧಕರ ಸಹಿ ದಾಖಲಾತಿ ವರದಿಯನ್ನು ನೀಡಲು ಅಳವಡಿಸಿ ಕೊಳ್ಳಲಾಗುವುದು ಎಂದರು.
ಗ್ರಾ.ಪಂ. ಕೆಳಗಿನ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ಯಾವಾಗ ನಡೆಸಲಾಗುವುದೆಂದು ರಫೀಕ್‍ಖಾನ್ ಪ್ರಶ್ನಿಸಿದರು. ಮುಂದಿನ ಆಡಳಿತ ಮಂಡಳಿ ರಚನೆಯಾದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಓ ವೇಣುಗೋಪಾಲ್ ತಿಳಿಸಿದರು.
ಗ್ರಾಮ ಪಂಚಾಯಿತಿ ಕಚೇರಿಯ ನೂತನ ಕಟ್ಟಡ ಕಾಮಗಾರಿ ವಿಳಂಬವಾಗಿದೆ. ಮೇಲ್ಛಾವಣಿ ನಿರ್ಮಿಸಲು ಸೆಂಟ್ರಿಂಗ್ ಅಳವಡಿಸಿ ಕೆಲವು ತಿಂಗಳುಗಳೇ ಕಳೆದಿದೆ. ಸೆಂಟ್ರಿಂಗ್ ಮಳೆ ಹಾಗೂ ಬಿಸಿಲಿನ ಹೊಡೆತಕ್ಕೆ ಅದು ಆಯತಪ್ಪಿದ್ದು, ಕೂಡಲೇ ಕಾಮಗಾರಿ ಆರಂಭಿಸಿ ಎಂದು ಎಂ.ಎಸ್. ರವಿ ತಿಳಿಸಿದರು.
ಕೊರೊನಾದಿಂದ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡು ಜೀವನ ನಡೆಸುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಪಂಚಾಯಿತಿ ವತಿಯಿಂದ ಮನೆ ಮತ್ತು ಮಳಿಗೆಗಳ ಕಂದಾಯ ಪರಿಷ್ಕರಣೆ ಮಾಡಲು ಮುಂದಾಗಿರುವುದು ಸರಿಯಲ್ಲವೆಂದು ಸೂಫಿ ಮನವಿ ಮಾಡಿಕೊಂಡರು.
ಮುಸ್ಲಿಂ ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ನೂತವಾಗಿ ನಿರ್ಮಿಸಲಾಗಿದ್ದು, ರಸ್ತೆಯು ಸಂಪೂರ್ಣವಾಗಿ ಕಿತ್ತು ಹೋಗಿದೆ. ಕಾಮಗಾರಿಯ ಕನಿಷ್ಟ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಪಿ.ಆರ್. ಸುನಿಲ್ ಕುಮಾರ್ ತಿಳಿಸಿದರು.
ಮಂಗಳೂರು-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಬೀದಿ ದೀಪಗಳು ಕೆಟ್ಟುಹೋಗಿದ್ದು ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಬೀದಿ ದೀಪಗಳನ್ನು ಜೋಡಣೆಗೊಳಿಸುವಂತೆ ತಿಳಿಸಿದರು. ಗ್ರಾಮಸ್ಥರಾದ ವಾಸು, ಸೂಫಿ, ರಫೀಕ್ ಖಾನ್, ಎಂ.ಎಸ್. ರವಿ ಗ್ರಾಮದ ಅಭಿವೃದ್ಧಿಯ ಬಗ್ಗೆ ಆರೋಗ್ಯದಾಯಕ ವಿಚಾರಗಳನ್ನು ಸಭೆಯ ಗಮನಕ್ಕೆ ತಂದರು.
ಸಭೆಯ ವೇದಿಕೆಯಲ್ಲಿ ನೋಡಲ್ ಅಧಿಕಾರಿ ಸಹಾಯಕ ಕೃಷಿಯಾಧಿಕಾರಿ ಪಿ.ಎಸ್. ಬೋಪಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ತಾ.ಪಂ. ಓಡಿಯಪ್ಪನ ವಿಮಲಾವತಿ, ಪಂಚಾಯಿತಿ ಅಭಿಯಂತರ ಫಯಾಜ್ ಆಹ್ಮದ್, ಉದ್ಯೋಗ ಖಾತ್ರಿ ಸಹಾಯಕಿ ನಿಶಾರಾಣಿ, ಸಿಬ್ಬಂದಿ ಗಳಾದ ಡಿ.ಎಂ. ಮಂಜುನಾಥ್, ಶ್ರೀನಿವಾಸ್ ಹಾಗೂ ಪಂಚಾಯಿತಿ ಪೌರಕಾರ್ಮಿಕರು ಇದ್ದರು.