ಮಡಿಕೇರಿ, ಸೆ. 27: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರುದ್ಧ ತಾ. 28ರ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಬೆಂಬಲ ನೀಡಬಾರದು ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ವೀರಾಜಪೇಟೆಯಲ್ಲಿ ನಡೆದ ದೀನ್ದಯಾಳ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಬಂದ್ ಕರೆ ನೀಡಲಾಗಿದ್ದು, ಯಾರೂ ಬೆಂಬಲಿಸದಿರುವಂತೆ ಮನವಿ ಮಾಡಿದರು.
* ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ರೈತರ ಪರವಾಗಿದ್ದು, ಅಮಾಯಕ ರೈತರ ಹೆಸರಿನಲ್ಲಿ ದಲ್ಲಾಳಿಗಳ ಪರ ಕರೆ ನೀಡಿರುವ ಕೊಡಗು ಬಂದ್ಗೆ ಯಾರೂ ಬೆಂಬಲ ನೀಡಬಾರದೆಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೃಷಿಕ ವರ್ಗದ ಅಭ್ಯುದಯಕ್ಕಾಗಿ ಜಾರಿಗೆ ತಂದಿರುವ ಮಸೂದೆಗಳ ಬಗ್ಗೆ ನೆಲೆ ಕಳೆದುಕೊಳ್ಳುತ್ತಿರುವ ಕೆಲವು ರಾಜಕೀಯ ಪಕ್ಷಗಳು ತಪ್ಪು ಮಾಹಿತಿಯನ್ನು ನೀಡುತ್ತಿವೆ ಎಂದು ಆರೋಪಿಸಿದ್ದಾರೆ.
* ಸರ್ಕಾರ ರೈತಪರವಾಗಿ ನೂತನ ಯೋಜನೆಗಳನ್ನು ಜಾರಿಗೆ ತಂದು ರೈತರ ಅಭಿವೃದ್ಧಿಗೆ ಮುಂದಾಗಿದೆ. ಆದರೆ, ಇಲ್ಲಿವರೆಗೂ ರೈತನ ಹೆಸರಲ್ಲಿ ಹೋರಾಟ ಮಾಡಿಕೊಂಡು ಶ್ರೀಮಂತರಾಗಿರುವ ಒಂದಷ್ಟು ರೈತ ಮುಖಂಡರುಗಳು ಬಂದ್ಗೆ ಕರೆ ನೀಡಿರುವುದು ಸರಿಯಲ್ಲ. ಇದಕ್ಕೆ ರೈತರು, ಜನರು ಬೆಂಬಲ ನೀಡಬಾರದು ಎಂದು ವೀರಾಜಪೇಟೆ ತಾಲೂಕು ಬಿಜೆಪಿ ವಕ್ತಾರ ಕುಟ್ಟಂಡ ಅಜಿತ್ ಕುರುಂಬಯ್ಯ ಮನವಿ ಮಾಡಿದ್ದಾರೆ.
* ರೈತರ ಪರ ಸಂಘಟನೆಗಳು ಕರೆ ನೀಡುರುವ ಬಂದ್ಗೆ ಶಿವರಾಮೇಗೌಡರ ಕರವೇ ಸಂಘಟನೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಪ್ರಾನ್ಸ್ಸಿಸ್ ಡಿಸೋಜ, ಕಾರ್ಯದರ್ಶಿ ರಾಮನಳ್ಳಿ ಪ್ರವೀಣ್ ಹಾಗೂ ಶನಿವಾರಸಂತೆ ಹೋಬಳಿ ಅಧ್ಯಕ್ಷ ಆನಂದ್ ತಿಳಿಸಿದ್ದಾರೆ.
* ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ತಾ.28 ರಂದು ವೀರಾಜಪೇಟೆ ತಾಲೂಕು ಜಾತ್ಯತೀತ ಜನತಾದಳ ಗಡಿಯಾರ ಕಂಬದ ಬಳಿ ಬೆಳಿಗ್ಗೆ 10.30 ಗಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ತಿಳಿಸಿದ್ದಾರೆ.
* ಜಿಲ್ಲಾ ಟಿಂಬರ್ ಮರ್ಚೆಂಟ್ಸ್ ಅಸೋಸಿಯೇಷನ್ ಕೊಡಗು ಬಂದ್ ಕರೆಗೆ ಬೆಂಬಲ ನೀಡುವದಾಗಿ ಸಂಘದ ಅಧ್ಯಕ್ಷ ಮಂಡೀರ ದೇವಿ ಪೂಣಚ್ಚ ತಿಳಿಸಿದ್ದಾರೆ.
* ಕೇಂದ್ರ - ರಾಜ್ಯ ಸರಕಾರಗಳ ಜನವಿರೋಧಿ ಧೋರಣೆ ವಿರುದ್ಧ ಕರ್ನಾಟಕ ಬಂದ್ಗೆ ನೀಡಿರುವ ಕರೆಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್ವಾದಿ)ದ ಕೊಡಗು ಘಟಕ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
* ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲ ಸೂಚಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ಬಷೀರ್ ತಿಳಿಸಿದ್ದಾರೆ.