ಸುಂಟಿಕೊಪ್ಪ, ಸೆ. 27: ಕೋವಿಡ್ ಮಹಾಮಾರಿಯಿಂದ ಕೆಲಸವಿಲ್ಲದೆ ಖಿನ್ನತೆಗೆ ಒಳಗಾಗಿ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ.

ಕೊಡಗರಹಳ್ಳಿ ಸ್ಕೂಲ್‍ಬಾಣೆ ನಿವಾಸಿ ರಾಧಕೃಷ್ಣ (66) ಅವರು ಟಿಂಕರಿಂಗ್ ಕೆಲಸ ನಿರ್ವಹಿಸುತ್ತಿದ್ದು ಅವರಿಗೆ ಕೆಲಸವಿಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೆ ಮದ್ಯಸೇವಿಸುವ ಚಟವನ್ನು ಹೊಂದಿದ್ದ ಇವರು ಆರ್ಥಿಕ ಮುಗ್ಗಟ್ಟಿನಿಂದ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಪತ್ನಿಯ ಸೀರೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸ್ಥಳಕ್ಕೆ ಸುಂಟಿಕೊಪ್ಪ ಠಾಣೆಯ ಎಎಸ್‍ಐ ಕಾವೇರಪ್ಪ ಹಾಗೂ ಪೇದೆ ಪುನೀತ್‍ಕುಮಾರ್ ತೆರಳಿ ಸ್ಥಳ ಮಹಜರು ನಡೆಸಿ ಕುಶಾಲನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. ಮೃತರು ಪತ್ನಿ ಹಾಗೂ ಈರ್ವರು ಪುತ್ರರನ್ನು ಅಗಲಿದ್ದಾರೆ.

ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಯು. ಮಣಿಕಂಠ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.