ಮಡಿಕೇರಿ, ಸೆ. 27: ಕೊಡವ ಆದಿ ಕವಿ ಹರಿದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ ಹುಟ್ಟು ಹಬ್ಬವನ್ನು ಕೊಡವಾಮೆರ ಕೊಂಡಾಟ ಕೂಟದಿಂದ ಆಚರಿಸಲಾಯಿತು. ತಾ. 21ರಂದು ಗೂಗಲ್ ಮೀಟ್ ವೆಬಿನಾರ್‍ನಲ್ಲಿ, ಸಂಸ್ಥೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಪೂಮಾಲೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಮೊದಲಿಗೆ ಸಂಘಟನಾ ಕಾರ್ಯದರ್ಶಿ ಕೋಟೆರ ಉದಯ ಪೂಣಚ್ಚ ಅವರು ಸದಸ್ಯ ಗಿರೀಶ್ ಭೀಮಯ್ಯ ಅವರ ಮನೆಯ ನೆಲ್ಲಕ್ಕಿಯಲ್ಲಿ ಕೊಡವ ಪದ್ಧತಿಯಂತೆ, ಕಾರೋಣರಿಗೆ ಅಕ್ಕಿ ಹಾಕಿ, ವರಕವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೂಮಾಲೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಕವಿಯ ಬದುಕು ಬರಹಗಳ ಬಗ್ಗೆ ಬೆಳಕು ಚೆಲ್ಲಿದರು. ಸಭೆಯಲ್ಲಿ ಉಪಸ್ಥಿತರಿದ್ದ ಹಿರಿಯ ಸದಸ್ಯ ಚೋವಂಡ ಬೋಪಯ್ಯ, ತೆನ್ನಿರ ರಾಧಪೆÇನ್ನಪ್ಪ ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭ ಹರದಾಸ ಅಪ್ಪಚ್ಚ ಕವಿಯ ಹುಟ್ಟು ಹಬ್ಬವನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು, ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿಯಲ್ಲಿ ಕವಿಯ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ಪ್ರೌಢಶಾಲಾ ಕನ್ನಡ ಪಠ್ಯ ಪುಸ್ತಕಗಳಲ್ಲಿ ಕವಿಯ ಬದುಕು ಬರಹದ ಕುರಿತು ಪಠ್ಯ ತಯಾರಿ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು. ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕುಲ್ಲಚಂಡ ವಿನುತ ಕೇಸರಿ, ಅಜ್ಜಮಕ್ಕಡ ವಿನುಕುಶಾಲಪ್ಪ, ಬೊಟ್ಟೋಳಂಡ ನಿವ್ಯ ದೇವಯ್ಯ ಸೇರಿದಂತೆ ಹಲವರು ಕವಿಯ ಸಾಹಿತ್ಯದ ಹಾಡುಗಳನ್ನು ಹಾಡಿದರು.

ಸದಸ್ಯ ಮಂದೆಯಂಡ ವನೀತ್ ಸಂಜು ನಿರೂಪಿಸಿ, ನಿರ್ವಹಿಸಿದರು. ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ಸ್ವಾಗತಿಸಿ, ಆಡಳಿತ ಮಂಡಳಿ ನಿರ್ದೇಶಕ ಚಿರಿಯಪಂಡ ವಿಶು ಕಾಳಪ್ಪ ವಂದಿಸಿದರು.