ಮಡಿಕೇರಿ, ಸೆ. 25: ಸ್ಥಳೀಯ ಸರಕಾರ ಎಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯಿತಿಗಳ ಆಡಳಿತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಸದ್ಯದಲ್ಲಿ ನಡೆಯಬೇಕಾಗಿರುವ ಈ ಚುನಾವಣೆಗೆ ಈಗಿನಿಂದಲೇ ಕಸರತ್ತುಗಳು ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಸದ್ದಿಲ್ಲದೆ ಬಿರುಸುಗೊಳ್ಳುತ್ತಿವೆ.ಗ್ರಾ.ಪಂ.ಗಳ ಅಧಿಕಾರಾವಧಿ ಈಗಾಗಲೇ ಮುಕ್ತಾಯಗೊಂಡಿದ್ದು, ಈ ವೇಳೆಗೆ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ರಚನೆಗೊಳ್ಳ ಬೇಕಿತ್ತಾದರೂ, ಈ ವರ್ಷ ಎದುರಾಗಿರುವ ಕೋವಿಡ್ನ ಆತಂಕದ ಕಾರಣದಿಂದಾಗಿ ನಿಗದಿತ ಸಮಯಕ್ಕೆ ಚುನಾವಣೆ ನಡೆಯದೆ ಇದು ಅನಿವಾರ್ಯವಾಗಿ ಮುಂದೂಡಲ್ಪಟ್ಟಿದೆ.ಜಿಲ್ಲೆಯಲ್ಲಿ ಕೆಲವೊಂದು ಗ್ರಾ.ಪಂ.ಗಳನ್ನು ಹೊರತುಪಡಿಸಿದಂತೆ ಬಹುತೇಕ ಗ್ರಾ.ಪಂ.ಗಳ ಅಧಿಕಾರಾವಧಿ ಜೂನ್ ಅಂತ್ಯ-ಜುಲೈ ವಾರದಲ್ಲೇ ಮುಕ್ತಾಯಗೊಂಡಿದ್ದು, ಕಳೆದ ಅವಧಿಯ ಸದಸ್ಯರು ಮಾಜಿ ಗಳಾಗಿದ್ದಾರೆ.ಅವಧಿ ಪೂರ್ಣಗೊಂಡ ಗ್ರಾ.ಪಂ.ಗಳಿಗೆ ಈಗಿನ ಪರಿಸ್ಥಿತಿಯಲ್ಲಿ ಚುನಾವಣೆ ನಡೆಸುವುದು ಕಷ್ಟಕರ ವಾದ್ದರಿಂದ ಚುನಾವಣಾ ಆಯೋಗ ಈ ಚುನಾವಣೆಯನ್ನು ರಾಜ್ಯಾದ್ಯಂತ ಮುಂದೂಡಿತ್ತು. ಈ ಕಾರಣದಿಂದಾಗಿ ಸರಕಾರ ಈ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದ್ದು, ಸದ್ಯಕ್ಕೆ ಆಡಳಿತಾಧಿಕಾರಿಗಳು ಜವಾಬ್ದಾರಿ ಹೊಂದಿದ್ದಾರೆ.
ಕೊರೊನಾ ಆತಂಕದ ಪರಿಸ್ಥಿತಿಗೆ ಸಂಬಂಧಿಸಿದಂತೆ ಕಳೆದ ಹಲವು ಸಮಯಗಳಿಂದ ಜಾರಿಗೊಳಿಸಲಾಗಿದ್ದ ವಿವಿಧ ನಿರ್ಬಂಧಗಳು ಪ್ರಸ್ತುತ ಮೆಲ್ಲಮೆಲ್ಲಗೆ ಸಡಿಲಿಕೆಗೊಳ್ಳುತ್ತಾ ಬಂದಿದ್ದು, ಸದ್ಯದಲ್ಲಿ ಗ್ರಾ.ಪಂ. ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಕಂಡುಬಂದಿದೆ.
ಬಹುಶಃ ಮುಂದಿನ ಒಂದು ತಿಂಗಳ ಅವಧಿಯೊಳಗೆ ಚುನಾವಣೆ ಘೋಷಣೆಯಾಗುವ ಕುರಿತು ಹೇಳಲಾಗುತ್ತಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳು ಆರಂಭವಾಗಿವೆ.
ಕೋವಿಡ್-19 ಹಿನ್ನೆಲೆಯಲ್ಲಿ ಗ್ರಾ.ಪಂ.ಗಳ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ಅನುಸರಿಸಬೇಕಾದ ಪ್ರಾಮಾಣಿಕ ಕಾರ್ಯನಿರ್ವಹಣಾ ಪದ್ಧತಿ (ಎಸ್.ಓ.ಪಿ.) ಕರಡು ಪ್ರತಿಯನ್ನು
(ಮೊದಲ ಪುಟದಿಂದ) ರಾಜ್ಯ ಚುನಾವಣಾ ಆಯೋಗ ಸೆಪ್ಟೆಂಬರ್ 3 ರಂದು ಹೊರಡಿಸಿದ್ದು, ಈ ಕುರಿತಾಗಿ ಸೂಚನೆಯನ್ನು ನೀಡಿದೆ.
ಕೇಂದ್ರ ಗೃಹ ಮಂತ್ರಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೋವಿಡ್-19 ನಿಯಂತ್ರಣದೊಂದಿಗೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಈಗಾಗಲೇ ಮಾರ್ಗಸೂಚಿಯನ್ನು ರಚಿಸಿ ಸಂಬಂಧಿಸಿದವರಿಗೆ ಮಾಹಿತಿ ನೀಡಿದೆ.
ಚುನಾವಣೆ ನಡೆಸುವ ಕುರಿತು ಅನುಸರಿಸಬೇಕಾದ ಎಲ್ಲಾ ಕ್ರಮಗಳನ್ನು ಇದರಲ್ಲಿ ಪ್ರಕಟಿಸಲಾಗಿದೆ. ನಾಮಪತ್ರ ಸ್ವೀಕಾರದಿಂದ ಹಿಡಿದು ಫಲಿತಾಂಶದ ತನಕದ ಕ್ರಮಗಳ ಬಗ್ಗೆ ಇದರಲ್ಲಿ ಸೂಚನೆ ನೀಡಲಾಗಿದೆ.
ಮೀಸಲಾತಿಯೂ ನಿಗದಿ
ಚುನಾವಣೆಯ ಸಿದ್ಧತೆಗೆ ಸಂಬಂಧಿಸಿದಂತೆ ಗ್ರಾ.ಪಂ. ಚುನಾವಣೆಯ ಪ್ರಮುಖ ಜವಾಬ್ದಾರಿಯನ್ನು ಹೊಂದಿರುವ ಜಿಲ್ಲಾಧಿಕಾರಿಗಳು ಕೂಡ ಚುನಾವಣಾ ಕ್ಷೇತ್ರಗಳ ವಿಭಜನೆ, ಮೀಸಲಾತಿ, ಸ್ಥಾನಗಳ ಹಂಚಿಕೆ ಕುರಿತಾದ ಅಧಿಸೂಚನೆಯನ್ನು ಕೂಡ ಪ್ರಕಟಿಸಿದ್ದಾರೆ.
ಬಿರುಸಿನ ಚಟುವಟಿಕೆ
ಈ ಬೆಳವಣಿಗೆಗಳು ಒಂದೊಂದಾಗಿ ನಡೆಯುತ್ತಿರುವ ಬೆನ್ನಲ್ಲೇ ಗ್ರಾ.ಪಂ.ಗಳಿಗೆ ಸ್ಪರ್ಧಿಸಲು ಆಸಕ್ತರಾಗಿರುವ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿವೆ. ಈ ಚುನಾವಣೆ ನಡೆದ ಬಳಿಕ ಇದರ ಫಲಿತಾಂಶ-ಅಭ್ಯರ್ಥಿಗಳ ಪ್ರಭಾವದಂತಹ ವಿಚಾರಗಳು ಮುಂದಿನ ವಿಧಾನಸಭಾ ಚುನಾವಣೆ, ವಿಧಾನ ಪರಿಷತ್ ಸದಸ್ಯ ಸ್ಥಾನದ ಚುನಾವಣೆಯ ಮೇಲೂ ಪರಿಣಾಮ ಬೀರುವ ದೂರದೃಷ್ಟಿಯೂ ಇರುವುದರಿಂದ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ಮೀಸಲಾತಿ ನಿಗದಿಗೆ ಸರಿಯಾಗಿ ಕೆಲವೆಡೆ ಕ್ಲಿಷ್ಟಕರವಾಗುತ್ತಿದೆ ಎನ್ನಲಾಗುತ್ತಿದೆ. ಹಲವಾರು ಆಸಕ್ತರು ಇರುವುದರಿಂದ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸುವುದು ಗ್ರಾ.ಪಂ. ಮಟ್ಟದಲ್ಲಿ ದೊಡ್ಡ ಸವಾಲೇ ಆಗಲಿದೆ. ಅಲ್ಲದೆ ಈ ಚುನಾವಣೆ ಶಾಸಕ ಸ್ಥಾನದ ಚುನಾವಣೆಗಿಂತ ವಿಭಿನ್ನವಾಗಿ ಸ್ಥಳೀಯ ಮಟ್ಟದಲ್ಲೇ ಕಾವು ಏರಿಸುವುದರಿಂದ ಗ್ರಾ.ಪಂ. ಚುನಾವಣೆಗಳು ಭಾರೀ ಮಹತ್ವ ಹೊಂದಿರುತ್ತವೆ.
ರಾಜಕೀಯ ಪಕ್ಷಗಳ ಚಿಹ್ನೆಯಡಿ ಈ ಚುನಾವಣೆ ನಡೆಯುವುದಿಲ್ಲವಾದರೂ ಈಗಿನ ವ್ಯವಸ್ಥೆಯಲ್ಲಿ ಇಲ್ಲಿ ರಾಜಕೀಯ ಪಕ್ಷಗಳ ಬೆಂಬಲದೊಂದಿಗೇ ಈ ‘ಸಮರ’ ನಡೆಯುವುದರಿಂದ ಚುನಾವಣೆ ಘೋಷಣೆಗೂ ಮುನ್ನವೇ ರಾಜಕೀಯ ಚಟುವಟಿಕೆಗಳು ಜಿಲ್ಲೆಯಲ್ಲಿ ಗರಿಗೆದುರುತ್ತಿವೆ ಎಂಬದು ನೈಜ ಮುನ್ನೋಟ. -ಶಶಿ ಸೋಮಯ್ಯ