ಮಡಿಕೇರಿ, ಸೆ. 25: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ಸಂಘದ ಕರೆಯಂತೆ ತಾ. 24 ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ಆರಂಭಗೊಂಡಿದೆ. ಇದರಂತೆ ಜಿಲ್ಲೆಯಲ್ಲೂ ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಡಿಎಚ್‍ಓ ಕಚೇರಿ ಸೇರಿದಂತೆ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಈ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಮನೆಗಳಲ್ಲೇ ಉಳಿದಿದ್ದಾರೆ. ಈ ಸಿಬ್ಬಂದಿಗಳ ಬೇಡಿಕೆಗಳ ಕುರಿತಾಗಿ ಈ ಹಿಂದೆ ಸರಕಾರ ಭರವಸೆ ನೀಡಿತ್ತಾದರೂ ನಿರ್ದಿಷ್ಟ ಕಾಲಾವಕಾಶದ ಬಳಿಕವೂ ಈಡೇರದಿರುವುದನ್ನು ವಿರೋಧಿಸಿ ಇದೀಗ ಮುಷ್ಕರ ಆರಂಭಗೊಂಡಿರುವುದಾಗಿ ಸಂಘದ ಜಿಲ್ಲಾ ಅಧ್ಯಕ್ಷ ಮಹದೇವ್ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಹೊರ ಗುತ್ತಿಗೆ ಆಧಾರದ ಸುಮಾರು 560 ಸಿಬ್ಬಂದಿಗಳು ವಿವಿಧ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, (ಮೊದಲ ಪುಟದಿಂದ) ಇದೀಗ ಯಾರೂ ಕೆಲಸ ನಿರ್ವಹಿಸುತ್ತಿಲ್ಲ ಎಂದು ಅಧ್ಯಕ್ಷ ಮಹದೇವಪ್ಪ ಹಾಗೂ ಕಾರ್ಯದರ್ಶಿ ರಘು ‘ಶಕ್ತಿ’ಗೆ ತಿಳಿಸಿದ್ದಾರೆ. ಸಿಬ್ಬಂದಿಗಳ ಪ್ರತಿಭಟನೆಯಿಂದಾಗಿ ಇದೀಗ ವಿವಿಧ ಆಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.
ಸಂಘದ ಬೇಡಿಕೆಗಳು: ರಾಜ್ಯ ಸರಕಾರದ ಆರೋಗ್ಯ ಕ್ಷೇತ್ರದ ಬಜೆಟ್ ಶೇಕಡಾವಾರು ಹೆಚ್ಚಿಸಬೇಕು ಮತ್ತು ಈ ಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಿ, ಅದಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಕೇಂದ್ರ ಸರಕಾರವು ನೀಡಬೇಕು ಮತ್ತು ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಕ್ಷೇಮಾಭಿವೃದ್ಧಿಗೆ ಆದ್ಯತೆ ನೀಡಲು ಕ್ರಮ.
ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ನೀಡಿ ಖಾಯಂಗೊಳಿಸಬೇಕು. ಎಲ್ಲಾ ಹುದ್ದೆಗಳಿಗೆ ವೇತನ ಭತ್ಯೆಗಳು ಮತ್ತು ವೇತನ ಶ್ರೇಣಿಯನ್ನು ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
ಹೊರಗುತ್ತಿಗೆಯಲ್ಲಿರುವ ಎಲ್ಲಾ ನೌಕರರಿಗೂ ಗುತ್ತಿಗೆದಾರ ಮಧ್ಯವರ್ತಿತನವಿಲ್ಲದೇ ನೇರವಾಗಿ ಇಲಾಖೆಯಿಂದಲೇ ವೇತನ ಪಾವತಿ ಮಾಡಬೇಕು ಮತ್ತು ಒಳಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿಗುವ ಸೌಲಭ್ಯಗಳು ಹೊರಗುತ್ತಿಗೆ ನೌಕರರಿಗೂ ಸಹ ಸಿಗಬೇಕು ಎಂದು ಆಗ್ರಹಿಸಲಾಗಿದೆ. ಕೇಂದ್ರ ಸರಕಾರ ನೀಡುತ್ತಿರುವ ಬೋನಸ್ ಹೆಚ್ಚಳ, ಆರೋಗ್ಯ ಭಾಗ್ಯ ಯೋಜನೆ ವಿಸ್ತರಣೆ ಮತ್ತು ನೌಕರರ ಕಲ್ಯಾಣ ನಿಧಿ, ಕಲ್ಯಾಣ ಮಂಡಳಿ ಸ್ಥಾಪಿಸಲು ಕ್ರಮವಹಿಸಲು ಬೇಡಿಕೆ ಮುಂದಿಡಲಾಗಿದೆ. ಇದರೊಂದಿಗೆ ಸಿಬ್ಬಂದಿಗಳ ಇನ್ನೂ ಹಲವು ಬೇಡಿಕೆಗಳಿದ್ದು, ಈಡೇರುವವರೆಗೂ ಮುಷ್ಕರ ಮುಂದುವರೆಯಲಿರುವುದಾಗಿ ಅವರು ತಿಳಿಸಿದ್ದಾರೆ.