ಮಡಿಕೇರಿ, ಸೆ. 25: ಆರ್ಥಿಕ ಸಂಕಷ್ಟದಿಂದ ಪುತ್ರನಿಗೆ ಡಯಾಲಿಸಿಸ್ ಮಾಡಲು ಪರಿತಪಿಸುತ್ತಿದ್ದ ಕೂಲಿಕಾರ್ಮಿಕ ಮಹಿಳೆಗೆ ಮಾಧ್ಯಮ ಸ್ಪಂದನದಿಂದ ನೆರವು ಲಭಿಸಿದೆ. ಕಿರುಗೂರು ಗ್ರಾಮದಲ್ಲಿ ಕೂಲಿಕಾರ್ಮಿಕರಾಗಿ ದುಡಿಯುತ್ತಿರುವ ವಿಧವೆ ಮಹಿಳೆ ಪಿ.ಕೆ. ಸುಷ್ಮಾ ಅವರ 18 ವರ್ಷದ ಪುತ್ರ ರತಿನ್ ರಾಜ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ.

ವಾರಕ್ಕೆ ಎರಡು ಸಲ ಮಡಿಕೇರಿಯ ಅಶ್ವಿನಿ ಆಸ್ಪತ್ರೆ ಯಲ್ಲಿ ಡಯಾಲಿಸಿಸ್ ಮಾಡುತ್ತಿದ್ದಾರೆ. ಒಂದು ಸಲಕ್ಕೆ 2 ರಿಂದ 2,500 ರೂಪಾಯಿ ಖರ್ಚಾಗುತ್ತಿತ್ತು. ಮಗನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ತಾಯಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲು ಒಂದು ವಾರದ ಹಿಂದೆ ಹೆಸರು ನೋಂದಾಯಿಸಿದ್ದರು.

ಕಾರ್ಮಿಕ ಮಹಿಳೆ ಸಂಕಷ್ಟದ ಕುರಿತು ಕಿರುಗೂರು ನಿವಾಸಿ ಚೆಪ್ಪುಡಿರ ರೋಷನ್ ಮಾಧ್ಯಮ ಸ್ಪಂದನ ತಂಡದ ಅಜ್ಜಮಾಡ ರಮೇಶ್ ಕುಟ್ಟಪ್ಪ ಗಮನಕ್ಕೆ ತಂದಿದ್ದರು.

ಡಿ.ಪಿ. ರಾಜೇಶ್, ಟಿ.ಎನ್. ಮಂಜುನಾಥ್, ರವಿಕುಮಾರ್, ಬಿ.ಆರ್. ಸವಿತಾ ರೈ, ಸಂತೋಷ್ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿಂಪಿ ಅವರ ಗಮನ ಸೆಳೆದಿದ್ದರು. ಕಾರ್ಮಿಕ ಕುಟುಂಬದ ಸಂಕಷ್ಟ ಅರಿತುಕೊಂಡು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲು ಒಪ್ಪಿಕೊಂಡಿದ್ದಾರೆ.

ಇದಲ್ಲದೆ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀಮಂಗಲ ಹಾಗೂ ತೂಚಮಕೇರಿಯ ಈರ್ವರು ವಿದ್ಯಾರ್ಥಿನಿಯರಿಗೆ ರೂ. 25,500 ಹಾಗೂ ರೂ. 26,400 ಶುಲ್ಕ ಪಾವತಿಸಲು ಸಂಕಷ್ಟ ಉಂಟಾದ ಸಂದರ್ಭ ಮಾಧ್ಯಮ ಸ್ಪಂದನದ ಮೊರೆ ಹೋಗಿದ್ದರು. ಮಾಧ್ಯಮ ಸ್ಪಂದನ ತಂಡದ ಕೋರಿಕೆ ಮೇರೆಗೆ ದಾನಿಗಳ ಸಹಕಾರದಿಂದ ಈರ್ವರು ವಿದ್ಯಾರ್ಥಿನಿಯರ ಶುಲ್ಕ ಭರಿಸಲಾಗಿದೆ.