ಮಡಿಕೇರಿ, ಸೆ. 25: ಇಲ್ಲಿನ ಪತ್ರಿಕಾಭವನ ಬಳಿಯ ಕಾವೇರಿ ಹಾಲ್ ಎದುರು ರಸ್ತೆಯಲ್ಲಿಯೇ ಕಳೆದ ಹತ್ತಾರು ದಿನಗಳಿಂದ ಅಪೂರ್ಣ ಚರಂಡಿ ಕೆಲಸದೊಂದಿಗೆ; ಕಲ್ಲು, ಮರಳು, ಕಾಮಗಾರಿ ಉಪಕರಣಗಳು ರಸ್ತೆಯ ನಡುವೆ ಬಿದ್ದುಕೊಂಡು ದಾರಿ ಹೋಕರು ನಗರಸಭೆ ಆಡಳಿತ ವೈಖರಿಗೆ ಹಿಡಿಶಾಪ ಹಾಕುವದು ಕೇಳುತ್ತಿದೆ.

ಹಳೆಯ ಮತ್ತು ಹೊಸ ಖಾಸಗಿ ಬಸ್ ನಿಲ್ದಾಣಗಳಲ್ಲಿ ಅವ್ಯವಸ್ಥೆ ನಡುವೆ ಗುಂಡಿಬಿದ್ದಿರುವ ರಸ್ತೆಗಳು ಸಹಜವಾಗಿಯೇ ವಾಹನ ಚಾಲಕರು ಆಕ್ರೋಶಗೊಳ್ಳುವಂತಾಗಿವೆ. ಮುಖ್ಯರಸ್ತೆಯಿಂದ ಅಂಚೆಕಚೇರಿ ಮುಂಭಾಗ ಮಾರ್ಗದಲ್ಲಿ ಏಲಕ್ಕಿ ಸೊಸೈಟಿ ಪಕ್ಕದಲ್ಲಿ ಸಾಗಿದರೆ ಕಸದ ದರ್ಶನ ಹಾಗೂ ಅನೇಕ ಸಮಯದಿಂದ ಬೀದಿ ದೀಪ ಉರಿಯದೆ ರಾತ್ರಿಯ ಕತ್ತಲೆಯು ಕುರುಡನ ಕೈಗೆ ಆಡಳಿತ ನೀಡಿರುವ ಅನುಭವ ಉಂಟಾಗಲಿದೆ.

ಆ ಮಾರ್ಗದಲ್ಲೇ ಮುಂದುವರಿದರೆ ಶ್ರೀ ಓಂಕಾರೇಶ್ವರ ದೇವಾಲಯ ಹಿಂಭಾಗ ರಸ್ತೆಯಲ್ಲಿ ಮೃತ್ಯುಕೂಪವೇ ಎದುರಾಗಲಿದೆ. ಇಂತಹ ಸನ್ನಿವೇಶವನ್ನು ದೇಚೂರು ಅಶ್ವತ್ಥಕಟ್ಟೆ ಮಾರ್ಗ, ಮಲ್ಲಿಕಾರ್ಜುನ ನಗರದ ಬಹುತೇಕ ರಸ್ತೆ ಹಾಗೂ ಮಡಿಕೇರಿಯ ಉದ್ದಗಲಕ್ಕೂ ಎದುರುಗೊಳ್ಳುವಂತಾಗಿದೆ. ಒಟ್ಟಿನಲ್ಲಿ ಮಡಿಕೇರಿ ನಗರದ ಸುತ್ತಾಟದಿಂದ ಮರುಕ ಹುಟ್ಟಲಿದೆ.

ಹಣ ಎಲ್ಲಿ ಹೋಯ್ತು: ಪ್ರತಿವರ್ಷ ಮಡಿಕೇರಿಯ ಅಭಿವೃದ್ಧಿಗಾಗಿ ಜನತೆಯ ತೆರಿಗೆಯಿಂದ ವ್ಯಯಿಸುವ ಹಣ ಎಲ್ಲಿ ಏನಾಗುತ್ತಿದೆ ಎಂಬ ಪ್ರಶ್ನೆ ಜನತೆಯನ್ನು ಕಾಡುವಂತಾಗಿದೆ. ನಗರೋತ್ಥಾನ ಯೋಜನೆಯಡಿ ಅಂದಾಜು ರೂ. 35 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಎಲ್ಲಿ ನಡೆಸಲಾಯಿತು? ಅಥವಾ ಅಷ್ಟೊಂದು ಹಣ ಈ ಪುಟ್ಟ ಮಡಿಕೇರಿಯ ರಸ್ತೆ, ಚರಂಡಿ ನಿರ್ವಹಣೆಗೂ ಲಭಿಸದಾಯಿತೇ? ಹೀಗೆ ಪ್ರಶ್ನೆಯೊಂದಿಗೆ ಪ್ರಶ್ನೆಯನ್ನು ನಗರದ ಸಾರ್ವಜನಿಕರು ಮುಂದಿಡುತ್ತಿದ್ದಾರೆ. ಆದರೆ ಈ ಕುರಿತು ನಮ್ಮ ಜನಪ್ರತಿನಿಧಿಗಳು ಅಥವಾ ಕಾರ್ಯಾಂಗದ ಅಧಿಕಾರಿಗಳು ಮೌನ ಮುರಿಯುತ್ತಿಲ್ಲ; ಹೀಗಾಗಿ ಒಂದೊಮ್ಮೆ ಮಡಿವಂತರಕೇರಿ ಎಂಬ ಹೆಗ್ಗಳಿಕೆಯಿದ್ದ ಮಡಿಕೇರಿಯ ಬಗ್ಗೆ ಮೌನದೊಂದಿಗೆ ಮರುಗುವಂತಾಗಿದೆ ಕಾರಣ ಯಾರಿಂದಲೂ ಸಮರ್ಪಕ ಉತ್ತರ ಅಲಭ್ಯ.!