ಜೊತೆಯಲಿ.., ಜೊತೆ.., ಜೊತೆಯಲಿ.., ಇರುವೆನು ಹೀಗೆ.., ಎಂದು... ಎಂಬ ಕನ್ನಡದ ಸುಮಧುರ ಗೀತೆಗೆ ಮನಸೋಲದವರೇ ಇಲ್ಲ. ಇಂದಿಗೂ ಕನ್ನಡ ಟಿವಿಗಳ ರಿಯಾಲಿಟಿ ಶೋ ಗಳು, ಆರ್ಕೆಸ್ಟ್ರಾಗಳಲ್ಲಿ ಕೇಳಿ ಬರುವ ಹಳೆಯ ಚಲನ ಚಿತ್ರ ಗೀತೆಗಳಲ್ಲಿ ಇದು ಇಂದಿಗೂ ಎವರ್‍ಗ್ರೀನ್ ಹಾಡು. ಇದು ದಿವಂಗತ ನಟ ಶಂಕರ್‍ನಾಗ್ ಅವರೇ ನಾಯಕನಾಗಿ ನಟಿಸಿ ನಿರ್ದೇಶಿಸಿದ ಗೀತ ಚಿತ್ರದ ಅತ್ಯಂತ ಜನಪ್ರಿಯತೆ ಪಡೆದ ಹಾಡಾಗಿದ್ದು ಚಿತ್ರ 1981ರಲ್ಲಿ ತೆರೆ ಕಂಡಿತ್ತು. ಈ ಹಾಡು ಹಾಡಿದ್ದು ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಮಣ್ಯಂ ಅವರು. ಈ ಹಾಡು ಶಂಕರ್‍ನಾಗ್ ಅವರಿಗೂ ಎಸ್‍ಪಿಬಿ ಅವರಿಗೂ ದೊಡ್ಡ ಹೆಸರು ತಂದು ಕೊಟ್ಟಿತು. ಕನ್ನಡದಲ್ಲಿ ಎಸ್‍ಪಿಬಿ ಹಾಡಿರುವ ನೂರಾರು ಗೀತೆಗಳು ಇಂದಿಗೂ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಅದು ಬಂಧನ ಚಿತ್ರದ ನೂರೊಂದು ನೆನಪು ಇರಬಹುದು ಅಥವಾ ಮಹಾ ಕ್ಷತ್ರಿಯದ ಈ ಭೂಮಿ ಬಣ್ಣದ ಬುಗುರಿ ಇರಬಹುದು ಎಲ್ಲವೂ ಒಂದಕ್ಕಿಂತ ಒಂದು ಸುಮಧುರ. ಗಾನ ಪ್ರೇಮಿಗಳಿಗೆ ಮತ್ತೆ ಮತ್ತೆ ಕೇಳಬೇಕೆನ್ನುವ ಅದಮ್ಯ ತವಕ.

ಎಸ್‍ಪಿಬಿ ಅವರ ಮಧುರ ಕಂಠಕ್ಕೆ ಮನಸೋಲದವರೇ ಇಲ್ಲ. ಇವರು ಗಾಯನ ಆರಂಭಿಸಿದಾಗ ಇವರ ವಯಸ್ಸು ಕೇವಲ 17. ಖ್ಯಾತ ಗಾಯಕಿ ಎಸ್.ಜಾನಕಿ ಅವರು ತಾವು ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಬಾಲ ಸುಬ್ರಹ್ಮಣ್ಯಂ ಅವರ ಸಂಗೀತದ ಗಾನ ಸುಧೆ ಕೇಳಿ ಹಾಡಲು ಅವಕಾಶ ನೀಡಿದರು. ಸಿನಿಮಾಗಳಲ್ಲಿ ಹಾಡಲು ಜಾನಕಿ ಅಮ್ಮ ಅವರೇ ಎಸ್‍ಪಿಬಿ ಅವರನ್ನು ಪ್ರೇರೇಪಿಸಿದರು.

ಅಂದ ಹಾಗೆ ಎಸ್.ಪಿ.ಬಿ ಅವರದ್ದು ಸಂಪ್ರದಾಯಸ್ಥ ಬ್ರಾಹ್ಮಣ ಮೊದಲಿಯಾರ್ ಕುಟುಂಬ. ಇವರ ತಂದೆ ಹರಿಕಥೆ ವಿದ್ವಾಂಸರಾಗಿದ್ದರು. ಇವರು ಹಾಡಿದ ಮೊದಲ ಕನ್ನಡ ಚಿತ್ರ 1967 ರಲ್ಲಿ ತೆರೆ ಕಂಡ ನಕ್ಕರೆ ಅದೇ ಸ್ವರ್ಗ. ಆದರೆ ಆ ಹಾಡು ಪ್ರಖ್ಯಾತಿ ಪಡೆಯಲಿಲ್ಲ. ತರುವಾಯ ದೇವರ ಗುಡಿ ಚಿತ್ರದಲ್ಲಿ ಮಾಮರವೆಲ್ಲೋ ಕೋಗಿಲೆ ಎಲ್ಲೋ ಎಂಬ ಹಾಡು ಹಾಡುವ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಚಿರಪರಿಚಿತರಾದರು. ಈ ಹಾಡಿನ ಮೂಲಕ ಮೋಡಿ ಮಾಡಿದ ತರುವಾಯ ಎಸ್ ಪಿಬಿ ಹಿಂತಿರುಗಿ ನೋಡಲೆ ಇಲ್ಲ. ಒಂದರ ಮೇಲೆ ಒಂದರಂತೆ ಸಾಲು ಸಾಲು ಅವಕಾಶ, ಖ್ಯಾತಿ, ಹಣ ಹುಡುಕಿಕೊಂಡು ಬಂದಿತು. ತೀರಾ ಚಿಕ್ಕ ವಯಸ್ಸಿಗೆ ಎಸ್‍ಪಿಬಿ ಖ್ಯಾತ ಗಾಯಕರಾದರು.

ಕನ್ನಡದ ಮೊದಲ ರಿಯಾಲಿಟಿ ಶೋ ಈ ಟಿವಿಯ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದರು. 2015ರ ಡಿಸೆಂಬರ್ 24 ರಂದು ಮೂಡಬಿದರೆಗೆ ಬಂದು ಆಳ್ವಾಸ್ ವಿರಾಸತ್ ಪ್ರಶಸ್ತಿ ಸ್ವೀಕರಿಸಿದ ಎಸ್‍ಪಿಬಿ ಮುಂದಿನ ಜನ್ಮ ಇದ್ದರೆ ಕರ್ನಾಟಕದಲ್ಲೇ ಹುಟ್ಟುವುದಾಗಿ ಹೇಳಿದ್ದರು. ಇವರದೊಂದು ಅದ್ಭುತ ಕಲೆ ಎಂದರೆ ಆಯಾ ನಟರ ಧ್ವನಿಗೆ ಹೊಂದುವಂತೆ ಸ್ವರ ಬದಲಾಯಿಸಿಕೊಂಡು ಹಾಡುವುದು. ಶ್ರೀನಾಥ್ ಅವರ ಅಭಿನಯದ ಹಾಡಿಗೆ ಅವರ ಧ್ವನಿಗೆ ಸರಿಹೊಂದುವಂತೆ, ಅಂಬರೀಶ್‍ಗೆ ಅವರ ಧ್ವನಿಗೆ, ವಿಷ್ಣುವರ್ಧನ್‍ಗೆ ಅವರ ಧ್ವನಿಗೆ ಸೂಕ್ತವಾಗುವಂತೆ ಹಾಡಿರುವುದು ಕಾಣುತ್ತದೆ. ಈ ರೀತಿ ಹಾಡುಗಾರ ಬಹುಶಃ ದೇಶದಲ್ಲೆ ಬೇರೊಬ್ಬರಿಲ್ಲ.

ಕನ್ನಡದ ಮೇರು ನಟ ಡಾ. ರಾಜ್ ಅಭಿನಯದ ‘ಎಮ್ಮೆ ತಮ್ಮಣ್ಣ’ ಚಿತ್ರದ ಹಾಡು ಹಾಡುವ ಮೂಲಕ ಎಸ್‍ಪಿಬಿ ರಾಜ್ ಚಿತ್ರಕ್ಕೆ ಮೊದಲ ಬಾರಿ ಹಾಡಿದರು. ನಂತರ ರಾಜ್ ಚಿತ್ರಗಳಿಗೆ ಅವರೇ ಹಾಡಲು ಪ್ರಾರಂಬಿಸಿದ್ದರಿಂದಾಗಿ ಎಸ್‍ಪಿಬಿ ಅವರ ಚಿತ್ರಗಳಿಗೆ ಹಾಡಲು ಅವಕಾಶ ಆಗಲಿಲ್ಲ. ಆದರೆ ಮತ್ತೊಮ್ಮೆ ರಾಜ್ ಹಾಗೂ ಎಸ್‍ಪಿಬಿ ಮುದ್ದಿನ ಮಾವ ಚಿತ್ರದಲ್ಲಿ ಒಂದಾದರು. ಈ ಚಿತ್ರದ ವಿಶೇಷ ಅಂದರೆ ಎಸ್‍ಪಿಬಿ ಅವರೂ ಕೂಡ ಇದರಲ್ಲಿ ಮುಖ್ಯ ಪಾತ್ರ ಮಾಡಿದ್ದರು. ಅವರ ಪಾತ್ರಕ್ಕೆ ಅವರೇ ಧ್ವನಿ ನೀಡಿದರು. ಅದರಲ್ಲಿ ಒಂದು ಹಾಡಿತ್ತು. ಮಾವ ಎಸ್‍ಪಿಬಿ ಹಾಗೂ ಅಳಿಯ ಶಶಿಕುಮಾರ್ ಹಾಡಬೇಕಿತ್ತು. ಆದರೆ ಖುದ್ದು ಎಸ್‍ಪಿಬಿ ಪಾತ್ರಕ್ಕೆ ಅವರೇ ಹಾಡಿದರೆ ಚೆನ್ನಾಗಿರಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು. ಕೊನೆಗೆ ಶಶಿಕುಮಾರ್ ಮನವೊಲಿಕೆಯಿಂದ ಎಸ್‍ಪಿಬಿ ಹಾಡಿಗೆ ಅಣ್ಣಾವ್ರೇ ಕಂಠ ನೀಡಿದ್ದರು. ಇದರಿಂದ ಎಸ್‍ಪಿಬಿ ಅವರ ಸಂತೋಷ ನೂರು ಪಟ್ಟು ಹೆಚ್ಚಾಗಿತ್ತು. ಅಂಥ ದೊಡ್ಡ ಕಲಾವಿದ, ಅಂಥ ದೊಡ್ಡ ಗಾಯಕ. ಅವರು ನನ್ನ ಹಾಡಿಗೆ ಧ್ವನಿ ನೀಡುತ್ತಾರೆಂದರೆ ಸಣ್ಣ ಮಾತಾ? ಇದು ನನ್ನ ಪೂರ್ವಜನ್ಮದ ಪುಣ್ಯ. ನಿಜಕ್ಕೂ ನಾನು ಧನ್ಯ. ಇಷ್ಟು ವರ್ಷ ಅವರ ಚಿತ್ರಗಳಿಗೆ ಹೆಚ್ಚು ಹಾಡು ಹಾಡಲಿಲ್ಲ ಎನ್ನುವ ಬೇಸರ ಇತ್ತು. ಆದರೆ ಇದೊಂದು ಸಿನಿಮಾದಿಂದ ಅದೆಲ್ಲ ಕೊಚ್ಚಿ ಹೋಯಿತು. ಇದನ್ನು ನಾನು ಇನ್ನೊಂದು ಜನ್ಮ ಎತ್ತಿ ಬಂದರೂ ಮರೆಯಲು ಸಾಧ್ಯವೇ ಇಲ್ಲ ಎಂದು ಎಷ್ಟೋ ವೇದಿಕೆಗಳಲ್ಲಿ ಭಾವುಕರಾಗಿ ಹೇಳಿದ್ದರು.

ಸಂಗೀತ ಕ್ಷೇತ್ರದಲ್ಲಿ ಜನ್ನಮನ್ನಣೆ ಗಳಿಸಿದ್ದ ಎಸ್‍ಪಿಬಿ ಅವರು, ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದರು. ನಾಲ್ಕು ಭಾಷೆಗಳಲ್ಲಿ ಹಾಡುಗಾರಿಕೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಏಕೈಕ ಹಾಡುಗಾರ ಎಂಬ ಹೆಗ್ಗಳಿಕೆ ಎಸ್‍ಪಿಬಿ ಅವರದ್ದಾಗಿದೆ. ಆಂಧ್ರ ಪ್ರದೇಶದ ನಂದಿ ಪ್ರಶಸ್ತಿಯನ್ನು ಸರಣಿಯಲ್ಲಿ 25 ಬಾರಿ ಪಡೆದಿರುವುದು, ಕೇಂದ್ರ ಸರ್ಕಾರದ ಪದ್ಮಭೂಷಣ, ಪದ್ಮವಿಭೂಷಣ, ಹಲವು ವಿಶ್ವವಿದ್ಯಾನಿಲಯಗಳು ಎಂಟತ್ತು ಗೌರವ ಪಿಹೆಚ್ ಡಿ ನೀಡಿದ್ದರೂ ಎಸ್‍ಪಿಬಿ ಮಾತ್ರ ಸರಳ ಸ್ವಭಾವದ ವ್ಯಕ್ತಿಯಾದರೆ ಹೊರತು ಅದರಿಂದ ಹಮ್ಮು ಬಿಂಬು ತೋರಲಿಲ್ಲ. ಎಸ್‍ಪಿಬಿ ಅವರು ಇಂದು ಇಲ್ಲದಿದ್ದರೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಈ ಗಾನ ಮಾಂತ್ರಿಕ ಕಳೆದ 5 ದಶಕಗಳಲ್ಲಿ 16 ಭಾಷೆಗಳಲ್ಲಿ ಹಾಡಿದ ಹಾಡುಗಳ ಸಂಖ್ಯೆ ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು. 1980ರ ದಶಕದಲ್ಲಿ ಇವರು ದಿನವೊಂದಕ್ಕೆ ಮೂರು ಸಿನಿಮಾಗಳಿಗೆ ಒಟ್ಟು 18-19 ಹಾಡುಗಳನ್ನು ಹಾಡಿದ್ದೂ ಇದೆ. ದೇಶದಲ್ಲಿ ಇದೊಂದು ದಾಖಲೆಯೇ.ದೇಶದ ಅತ್ಯಂತ ಬಿಝಿ ಹಾಡುಗಾರ ಎನಿಸಿಕೊಂಡಿದ್ದ ಎಸ್‍ಪಿಬಿ ಅಂತಹ ಹಾಡುಗಾರ ಮುಂದೆ ಹುಟ್ಟುವುದು ಕಷ್ಟ.

ಆಸ್ಪತ್ರೆಗೆ ದಾಖಲಾಗಿರುವ ವೇಳೆ ತಮಿಳುನಾಡು ಸರ್ಕಾರ ಚಿಕಿತ್ಸಾ ವೆಚ್ಚ ನೀಡಲು ಮುಂದೆ ಬಂದರೂ ಆ ಸೌಲಭ್ಯ ಪಡೆಯದೆ ಅವರ ಖರ್ಚಿನಲ್ಲೆ ಚಿಕಿತ್ಸೆ ಪಡೆದು ಸ್ವಾಭಿಮಾನ ಬಿಟ್ಟುಕೊಡದ ಸಂಗೀತ ದೈತ್ಯ ಹಾಡುಗಳ ಮೂಲಕ ಚಿರವಾಗಿ ನಮ್ಮೊಂದಿಗಿರುತ್ತಾರೆ.

-ಕೋವರ್‍ಕೊಲ್ಲಿ ಇಂದ್ರೇಶ್

ಚಿತ್ರ: ಬಿ.ಆರ್. ಸತೀಶ್