ವೀರಾಜಪೇಟೆ, ಸೆ. 24: ತಾಲೂಕಿನ ಪ್ರಮುಖ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ನುರಿತ ವೈದ್ಯರಿಲ್ಲ ಎಂದು ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ವೈದ್ಯರನ್ನು ನಿಯೋಜನೆ ಮಾಡುವಂತೆ ಕೊಡಗು ಆಕ್ಷನ್ ಟೀಂ ಸಂಘಟನೆಯು ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ವೀರಾಜಪೇಟೆ ನಗರದ ಉತ್ಸಾಹಿ ಯುವಕರ ತಂಡ ಕೊಡಗು ಆಕ್ಷನ್ ಟೀಂ ಸಂಘಟನೆಯಿಂದ ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ವೈದ್ಯರನ್ನು ನೇಮಿಸುವಂತೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಪ್ರತೀಕ್ ಪೊನ್ನಣ್ಣ; ಸಂಸ್ಥೆಯು ಹಲವಾರು ಜನಪರ ಕಾರ್ಯಗಳನ್ನು ಹಮ್ಮಿಕೊಂಡು ಬಂದಿದೆ. ಜಿಲ್ಲೆಯ ಬಹು ದೊಡ್ಡ ಸಮಸ್ಯೆಯೆಂದರೆ ಜಿಲ್ಲೆಯಲ್ಲಿ ಹೃದಯ ಸಂಬಂಧಿಸಿದ ಕಾಯಿಲೆ ಮತ್ತು ಚಿಕಿತ್ಸೆಗೆ ಯಾವುದೇ ವೈದ್ಯರಿಲ್ಲದಿರುವುದು. ರೋಗಿಗಳು ಜಿಲ್ಲೆಯನ್ನು ಬಿಟ್ಟು ಚಿಕಿತ್ಸೆಗಾಗಿ ಮೈಸೂರು ಬೆಂಗಳೂರು, ಮಂಗಳೂರು ನಗರಗಳನ್ನು ಅವಲಂಬಿಸಿರುವುದು ಖೇದಕರ ಸಂಗತಿಯಾಗಿದೆ. ಕಾಯಿಲೆಗಳಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕದೆ ಕೆಲವು ರೋಗಿಗಳು ಮರಣ ಹೊಂದುತ್ತಿರುವುದು ದು:ಖಕರ ವಿಷಯವಾಗಿದೆ. ಜಿಲ್ಲಾಡಳಿತ ರಾಜ್ಯ ಸರಕಾರ ಮತ್ತು ಜನಪತ್ರಿನಿಧಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಹೃದಯ ಸಂಬಂಧಿಸಿದ ನುರಿತ ವೈದÀ್ಯರನ್ನು ನೇಮಿಸಬೇಕು ಎಂದು ಸರಕಾರವನ್ನು ಸಂಘಟನೆಯ ವತಿಯಿಂದ ಒತ್ತಾಯ ಪಡಿಸುತಿದ್ದೇವೆ ಎಂದು ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಮನವಿಯನ್ನು ಸರಕಾರಕ್ಕೆ ಕಳುಹಿಸುವ ಭರವಸೆ ನೀಡಿದರು. ಈ ಸಂದರ್ಭ ಸಂಸ್ಥೆಯ ಸಂಸ್ಥಾಪಕ ಮೋಸಿನ್ ಇದ್ದರು.