ಮಡಿಕೇರಿ, ಸೆ. 24: ಕೊಡಗು ಜಿಲ್ಲೆಯ ಮಡಿಕೇರಿಯ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜು, ವೀರಾಜಪೇಟೆ ತಾಲೂಕು ಆಸ್ಪತ್ರೆ, ಸೋಮವಾರಪೇಟೆ ತಾಲೂಕು ಆಸ್ಪತ್ರೆ, ಸಿದ್ದಾಪುರ, ಗೋಣಿಕೊಪ್ಪ, ಪಾಲಿಬೆಟ್ಟ, ನಾಪೋಕ್ಲು, ಕುಟ್ಟ, ಶನಿವಾರಸಂತೆ, ಮೂರ್ನಾಡು ಇನ್ನಿತರ ಸರಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಸುಮಾರು 200ಕ್ಕಿಂತಲೂ ಹೆಚ್ಚು ನೌಕರರು ಎದುರಿಸುತ್ತಿರುವ ಕಾರ್ಮಿಕರ ಈ ಕೆಳಗಿನ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿ ಸರಕಾರಿ ಆಸ್ಪತ್ರೆ ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಸರಕಾರಿ ಆಸ್ಪತ್ರೆಯ ನಾನ್ ಕ್ಲೀನಿಂಗ್, ಡಿ ಗ್ರೂಪ್ ಇನ್ನಿತರ ವಿಭಾಗದ ಕಾರ್ಮಿಕರನ್ನು ಗುತ್ತಿಗೆಯಿಂದ ವಿಮೋಚನೆಗೊಳಿಸಿ ಖಾಯಂಗೊಳಿಸಬೇಕು. ಸರಕಾರದ ಗುತ್ತಿಗೆ ನೌಕರರಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕೊರೊನಾ ಕಾಲದ ಪ್ರೋತ್ಸಾಹ ಧನವನ್ನು ಸರಕಾರಿ ಗುತ್ತಿಗೆ ನೌಕರರಿಗೂ ನೀಡಬೇಕು. ಪ್ರತಿ ತಿಂಗಳ 5ನೇ ತಾರೀಕಿನಂದು ಮಾಸಿಕ ವೇತನ ನೀಡಲು ಗುತ್ತಿಗೆದಾರರಲ್ಲಿ ಒತ್ತಡ ಹೇರಬೇಕು.
ಕಾರ್ಮಿಕರ ಪಿ.ಎಫ್. ಹಣವನ್ನು ಗುತ್ತಿಗೆದಾರರು ಸಮರ್ಪಕವಾಗಿ ಪಿ.ಎಫ್. ಖಾತೆಗೆ ಜಮಾ ಮಾಡಲು ಒತ್ತಾಯಿಸಬೇಕು. ಕಾರ್ಮಿಕರ ಹೆಸರಿನಲ್ಲಿ ಇಎಸ್ಐ ಹಣ ಕಡಿತವಾಗುತ್ತಿದ್ದು, ಕಾರ್ಮಿಕರಿಗೆ ಇಎಸ್ಐ ಆಸ್ಪತ್ರೆ ಸೌಲಭ್ಯ ದೊರೆಯುತ್ತಿಲ್ಲ. ಆದ್ದುದರಿಂದ ಇಎಸ್ಐ ಆಸ್ಪತ್ರೆ ಸೌಲಭ್ಯ ಒದಗಿಸಲು ಒತ್ತಾಯಿಸಬೇಕು. ಗುತ್ತಿಗೆದಾರರು ಕಾರ್ಮಿಕರಿಗೆ 2 ಜೊತೆ ಉಚಿತ ಸಮವಸ್ತ್ರ ನೀಡಬೇಕು, ಸರಕಾರ ನಿಗದಿಪಡಿಸಿರುವ ಕನಿಷ್ಟ ವೇತನವನ್ನು ನೌಕರರಿಗೆ ನೀಡಬೇಕು ಮತ್ತು ಗುತ್ತಿಗೆದಾರರು ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ನೀಡಲು ಒತ್ತಾಯಿಸಬೇಕು ಎಂಬ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಯಿತು.