ಮಡಿಕೇರಿ, ಸೆ. 24: ಕನ್ನಡ ಭಾಷೆಯು ಸಂಸ್ಕøತ ಹಾಗೂ ತಮಿಳಿನ ಬಳಿಕ ಅತ್ಯಂತ ಹಳೆಯ ಭಾಷೆಯಾಗಿ ಗುರುತಿಸಲ್ಪಟ್ಟಿದ್ದು ಅದರ ಪ್ರಾಚೀನತೆ ಹಾಗೂ ನಾಡಿ ನೊಂದಿಗಿನ ನಂಟನ್ನು ಅರಿತು ಯುವ ಸಮೂಹವು ಭಾಷಾಭಿಮಾನ ಮೂಡಿಸಿಕೊಳ್ಳಬೇಕಿದೆ ಎಂದು ಮರಗೋಡು ಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ ಕರೆ ನೀಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೂರ್ನಾಡು ಹೋಬಳಿ ಕ.ಸಾ.ಪ. ಘಟಕದ ವತಿಯಿಂದ ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಮತ್ತು ಮಹಬಲೇಶ್ವರ ಭಟ್ ದತ್ತಿನಿಧಿ ಕಾರ್ಯಕ್ರಮದಲ್ಲಿ ಕನ್ನಡದ ಏಳುಬೀಳುಗಳ ಸಮೀಕ್ಷೆ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ, ಮಾತೃಭಾಷೆಯನ್ನು ಪ್ರೀತಿಸುವು ದರಿಂದ, ಕತೆ, ಕವನ, ಸಾಹಿತ್ಯ ರಚನೆ ಮಾಡುವುದರಿಂದ ಮನಸ್ಸು ಪ್ರಪುಲ್ಲಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಮಾತನಾಡಿ, ಕನ್ನಡಾಭಿಮಾನಕ್ಕೆ ಒತ್ತುಕೊಡುವ ಉದ್ದೇಶದಿಂದ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ 18 ವಿದ್ಯಾರ್ಥಿಗಳು 125 ಅಂಕಗಳಿಸಿ ಸಾಧನೆ ಮಾಡಿದ್ದಾರೆ. ಕೊಡಗು ಕ.ಸಾ.ಪ. ಕಾರ್ಯಕ್ರಮಗಳು ರಾಜ್ಯಮಟ್ಟದಲ್ಲೇ ಮಾದರಿಯಾಗಿ ಗುರುತಿಸಿಕೊಂಡಿದೆ ಎಂದರು.
ಈ ಸಂದರ್ಭ ಹೋಬಳಿ ವ್ಯಾಪ್ತಿಯಲ್ಲಿ ಸಾಧನೆಯನ್ನು ಮಾಡಿದ 17 ವಿದ್ಯಾರ್ಥಿಗಳನ್ನು ಗೌರವಿಸ ಲಾಯಿತು. ಕಾರ್ಯಕ್ರಮವನ್ನು ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಕಟ್ಟೆಮನೆ ಸೋನಜಿತ್ ಉದ್ಘಾಟಿಸಿದರು. ಮೂರ್ನಾಡು ಹೋಬಳಿ ಕ.ಸಾ.ಪ. ಅಧ್ಯಕ್ಷ ಪಿ.ಪಿ. ಸುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿರುವ ಸಾಹಿತಿ ಐಮಂಡ ಜಗದೀಶ್ ಪುರಸ್ಕಾರದ ಪ್ರಾಯೋಜಕತ್ವವನ್ನು ವಹಿಸಿದ್ದರು. ಶಿಕ್ಷಕರಾದ ಕೆ. ಶಿವಪ್ರಸಾದ ಸ್ವಾಗತಿಸಿ, ಬಿ.ಬಿ. ಪೂರ್ಣಿಮ ನಿರೂಪಿಸಿ, ಡಿ. ರಮೇಶ್ ನಾಯ್ಕ ವಂದಿಸಿದರು.