ವೀರಾಜಪೇಟೆ, ಸೆ. 23: ವೀರಾಜಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ಘಟಕ ಪ್ರಾರಂಭಿಸುವಂತೆ ಕೋರಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ತಾಲೂಕು ಪದಾಧಿಕಾರಿಗಳು ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಹೆಚ್ಚಾಗಿ ಅನಾರೋಗ್ಯಸ್ಥರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದು, ಅನೇಕ ಬಡವರು, ಕೂಲಿ ಕಾರ್ಮಿಕರು, ಸಂಕಷ್ಟದ ಪರಿಸ್ಥಿತಿಯಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಯಿಂದ ರೋಗಿಗೆ ಬೇಕಾಗುವ ರಕ್ತವನ್ನು ತರಲು ಕಷ್ಟಕರ ಮತ್ತು ತಿಳುವಳಿಕೆ ಇಲ್ಲದೇ ಇರುವವರಿಗೆ ಸಾದ್ಯವಾಗದೇ ಇದ್ದು ಅನೇಕ ರೋಗಿಗಳು ಈ ಕಾರಣದಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ. ರಕ್ತ ನೀಡುವವರು ಕೂಡ ವೀರಾಜಪೇಟೆಯಿಂದ ಮಡಿಕೇರಿ ಜಿಲ್ಲಾಸ್ಪತ್ರೆಗೆ ರಕ್ತ ನೀಡಲು ತೆರಳಲು ಹಿಂದೇಟು ಹಾಕುತ್ತಿದ್ದು, ಅದೆಷ್ಟೋ ಜನರಿಗೆ ರಕ್ತವನ್ನು ನೀಡಬೇಕೆಂಬ ಮನಸ್ಸಿದ್ದರೂ ಕೊರೊನಾ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗೆ ತೆರಳಿ ರಕ್ತ ನೀಡಲು ಭಯಪಡುತ್ತಿದ್ದಾರೆ. ರಕ್ತನಿಧಿ ಘಟಕ ಪ್ರಾರಂಭಿಸಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ತಾಲೂಕು ಅಧ್ಯಕ್ಷ ಟಿ.ವಿ. ಅನಿಲ್ ಕುಮಾರ್, ಉಪಾಧ್ಯಕ್ಷ ಸಂತೋಷ್ ಕುಮಾರ್, ಖಜಾಂಚಿ ತಬ್ರೇಜ್, ನಗರ ಉಪಾಧ್ಯಕ್ಷ ಫೈಝಲ್, ಹೋಬಳಿ ಅಧ್ಯಕ್ಷ ಜುನೈದ್, ಆಟೋ ಸಂಘದ ಅಧ್ಯಕ್ಷ ಸತೀಶ್, ಸಲೀಂ ಹಾಗೂ ರಿಹಾನ್ ಉಪಸ್ಥಿತರಿದ್ದರು.