ತಾ. 28 ರಂದು ಕರ್ನಾಟಕ ಬಂದ್
ಬೆಂಗಳೂರು, ಸೆ. 23: ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ತಾ. 28 ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಸಂಪೂರ್ಣ ಬಂದ್ ಆಚರಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದ್ದಾರೆ. ಎಪಿಎಂಸಿ ಮಸೂದೆ ರೈತರ ಮರಣ ಶಾಸನವಾಗಿದೆ. ಬಂಡವಾಳ ಶಾಹಿ ಸರ್ಕಾರ ಇದಾಗಿದೆ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪ ಅವರ ಮುಖವಾಡ ಬಯಲಾಗಿದೆ ಎಂದು ದೂರಿದರು.
ಸಿಎಂ ಬಿಎಸ್‍ವೈ ರಾಜೀನಾಮೆಗೆ ಒತ್ತಾಯ
ಬೆಂಗಳೂರು, ಸೆ. 23: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಕ್ಕಳು ಮತ್ತು ಮೊಮ್ಮಕ್ಕಳು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದು, ಈ ಕುರಿತು ತಮ್ಮ ಬಳಿ ಸಾಕ್ಷ್ಯ ದಾಖಲೆಗಳಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲಾ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರ ಕುಟುಂಬದ ಸದಸ್ಯರು ಬಿಡಿಎನಲ್ಲಿ ರೂ. 666 ಕೋಟಿಗಳ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ, ಗುತ್ತಿಗೆದಾರರಿಂದ ಲಂಚ ಸ್ವೀಕರಿಸಿದ್ದು, ಆರ್‍ಟಿಜಿಎಸ್ ಮೂಲಕ ಕೊಲ್ಕತ್ತಾ, ಬೆಂಗಳೂರಿನ ಕಂಪೆನಿಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಯಡಿಯೂರಪ್ಪ ಪುತ್ರ, ಮೊಮ್ಮಗ ಭಾಗಿಯಾಗಿದ್ದಾರೆ. ಇದು ಕೇವಲ ಆರೋಪವಲ್ಲ, ಸತ್ಯ. ಇದರ ಸಂಪೂರ್ಣ ದಾಖಲೆಗಳು ತಮ್ಮ ಬಳಿಯಿವೆ ಎಂದರು. ಯಡಿಯೂರಪ್ಪ ಒಂದು ಸೆಕೆಂಡ್ ವ್ಯರ್ಥಮಾಡದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.
ಬಾರ್‍ಗಳಲ್ಲಿ ಮಹಿಳೆಯರಿಗೆ ಕೆಲಸ
ಬೆಂಗಳೂರು, ಸೆ. 23: ರಾತ್ರಿ ವೇಳೆ ಬಾರ್ ಮತ್ತು ಕ್ಲಬ್‍ಗಳಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶ ನೀಡಲಾಗಿದ್ದು, ಎಲ್ಲಿ ಯಾವಾಗ ದುಡಿಯಬೇಕು ಎಂಬ ಆಯ್ಕೆ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಸೇರಿದ್ದು ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ್ ಹೆಬ್ಬಾರ್ ಅವರು ಬುಧವಾರ ಮೇಲ್ಮನೆಗೆ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2020 ಮಂಡನೆ ಚರ್ಚೆಯ ವೇಳೆ ಸಚಿವ ಶಿವರಾಮ್ ಹೆಬ್ಬಾರ್, ಇದು ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಜಾರಿಗೆ ತಂದಿರುವ ವಿಧೇಯಕ ಎಂದರು. ಐಟಿ-ಬಿಟಿ ಮಾಲ್ಗಳಲ್ಲಿ ರಾತ್ರಿ ವೇಳೆ ಮಹಿಳೆಯರು ದುಡಿಯುತ್ತಿದ್ದು, ಇನ್ನು ಮುಂದೆ ಅಂಗಡಿಗಳಲ್ಲಿಯೂ ದುಡಿಯಬಹುದು. ರಾತ್ರಿ ವೇಳೆ ದುಡಿಯುವ ಮಹಿಳೆ ವಾಹನ ಹತ್ತಿದಾಗ ಆಕೆಯನ್ನು ಮೊದಲ ಪ್ರಯಾಣಿಕಳಾಗಿ ಹತ್ತಿಸಬಾರದು ಮತ್ತು ಕೊನೆಯದಾಗಿ ಇಳಿಸಬಾರದು ಎಂದರು.
ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ
ನವದೆಹಲಿ, ಸೆ. 23: ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿದ್ದನ್ನೇ ಬಂಡವಾಳ ಮಾಡಿಕೊಂಡ ಕೇಂದ್ರ ಸರ್ಕಾರ ತರಾತುರಿಯಲ್ಲಿ ಹಲವು ಮಸೂದೆಗಳನ್ನು ಅಂಗೀಕರಿಸಿದ ನಂತರ ಬುಧವಾರ ರಾಜ್ಯಸಭಾ ಕಲಾಪವನ್ನು ಎಂಟು ದಿನಗಳ ಮುನ್ನವೇ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಇಂದು ರಾಜ್ಯಸಭೆಯಲ್ಲಿ ಮೂರು ಕಾರ್ಮಿಕ ಮಸೂದೆ ಹಾಗೂ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, 2020 ಅನ್ನು ಅಂಗೀಕರಿಸಿದ ನಂತರ ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಸಾಧಕ ವಿದ್ಯಾರ್ಥಿಗಳಿಗೆ ಕಾರು ಗಿಫ್ಟ್
ರಾಂಚಿ, ಸೆ. 23: ಜಾರ್ಖಂಡ್ ಸರ್ಕಾರ ಇದೇ ಮೊದಲ ಬಾರಿಗೆ 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬುಧವಾರ ಆಲ್ಟೊ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಇಂದು ರಾಜ್ಯ ಶಿಕ್ಷಣ ಸಚಿವ ಜಗರ್ನಾಥ್ ಮಹ್ಟೋ ಅವರು ಟಾಪರ್ಗಳಿಗೆ ಮಾರುತಿ ಆಲ್ಟೊ ಕಾರುಗಳನ್ನು ಹಸ್ತಾಂತರಿಸಿದರು. ಫಲಿತಾಂಶ ಪ್ರಕಟವಾದ ದಿನದಂದು, ಮಹ್ಟೋ ಅವರು 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಈಗ ಕಾರು ಗಿಫ್ಟ್ ನೀಡಿದ್ದಾರೆ. ಸ್ವತಃ 11ನೇ ತರಗತಿಯ ವಿದ್ಯಾರ್ಥಿಯಾಗಿರುವ ಸಚಿವರು, ಮುಂದಿನ ವರ್ಷದಿಂದ 11ನೇ ತರಗತಿಯ ಟಾಪರ್ಗಳಿಗೂ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಅವರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಬಹುದು ಎಂದು ಸಚಿವರು ಹೇಳಿದ್ದಾರೆ.
ಸೌದಿಯಿಂದ ಭಾರತೀಯ ವಿಮಾನ ಸ್ಥಗಿತ
ರಿಯಾದ್, ಸೆ. 23: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ, ಭಾರತ, ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಬರುವ ಮತ್ತು ಹೋಗುವ ವಿಮಾನ ಪ್ರಯಾಣವನ್ನು ಬುಧವಾರ ಸ್ಥಗಿತಗೊಳಿಸಿದೆ. ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ದೇಶಕ್ಕೆ ಬರುವ 14 ದಿನಗಳ ಮೊದಲು ಇತರೆ ದೇಶಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿರುವ ಜನರನ್ನು ಸಹ ನಿರ್ಬಂಧಿಸಲಾಗಿದೆ. ಸೌದಿಗೆ ಬರುವ 14 ದಿನಗಳ ಮೊದಲು ಇತರ ದೇಶಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ ವ್ಯಕ್ತಿ ಸೇರಿದಂತೆ ಭಾರತ, ಬ್ರೆಜಿಲ್ ಮತ್ತು ಅರ್ಜೆಂಟೀನಾ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಆದಾಗ್ಯೂ, ಸರ್ಕಾರದ ಅಧಿಕೃತ ಆಹ್ವಾನಗಳನ್ನು ಹೊಂದಿರುವವರಿಗೆ ಪ್ರಯಾಣ ನಿರ್ಬಂಧದಿಂದ ವಿನಾಯಿತಿ ನೀಡಿದೆ.
ಪ್ರತಿಪಕ್ಷಗಳ ಸಂಸದರ ಪ್ರತಿಭಟನೆ
ನವದೆಹಲಿ, ಸೆ. 23: ರೈತ ಮತ್ತು ಕಾರ್ಮಿಕ ವಿರೋಧಿ ಮಸೂದೆಗಳನ್ನು ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಂಸದರು ಬುಧವಾರ ಸಂಸತ್ ಭವನ ಆವರಣದಲ್ಲಿ ಗಾಂಧಿ ಪ್ರತಿಮೆಯಿಂದ ಅಂಬೇಡ್ಕರ್ ಪ್ರತಿಮೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ರೈತರ ಕುರಿತ ಮಸೂದೆಗಳಲ್ಲಿ ತಿದ್ದುಪಡಿಗಳನ್ನು ಮತ್ತು ರಾಜ್ಯಸಭೆಯಲ್ಲಿ ಎಂಟು ಸದಸ್ಯರ ಅಮಾನತು ವಿರೋಧಿಸಿ ಪ್ರತಿಪಕ್ಷದ ಸದಸ್ಯರು ಇಂದು ರೈತರನ್ನು, ಕಾರ್ಮಿಕರನ್ನು ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿ ಎಂಬ ಫಲಕ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ, ಸಿಪಿಐ-ಎಂ, ಡಿಎಂಕೆ, ರಾಷ್ಟ್ರೀಯ ಜನತಾದಳ (ಆರ್ಜೆಡಿ), ಆಮ್ ಆದ್ಮಿ ಪಕ್ಷ (ಎಎಪಿ), ಸಮಾಜವಾದಿ ಪಕ್ಷ ಮತ್ತು ಎನ್ಸಿಪಿ ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಫೇಸ್‍ಬುಕ್ ವಿರುದ್ಧ ಕ್ರಮವಿಲ್ಲ
ನವದೆಹಲಿ, ಸೆ. 23: ಈಶಾನ್ಯ ದೆಹಲಿಯ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಜಾರಿಗೊಳಿಸಿದ ಸಮನ್ಸ್‍ಗೆ ಪ್ರತಿಕ್ರಿಯೆ ನೀಡಿರುವ ಫೇಸ್‍ಬುಕ್ ಭಾರÀತದ ಉಪಾಧ್ಯಕ್ಷರ ವಿರುದ್ದ ಅ. 15 ರವರೆಗೆ ಯಾವುದೇ ಒತ್ತಾಯದ ಕ್ರಮ ಕೈಗೊಳ್ಳದಂತೆ ದೆಹಲಿ ವಿಧಾನಸಭೆಗೆ ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿದೆ. ದೆಹಲಿ ವಿಧಾನಸಭೆಯ “ಶಾಂತಿ ಮತ್ತು ಸೌಹಾರ್ದತೆ” ಸಮಿತಿ ಉಪಾಧ್ಯಕ್ಷ ಎಂ.ಡಿ. ಅಜಿತ್ ಮೋಹÀನ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಈ ಸಮಿತಿಯನ್ನು ಆಮ್ ಆದ್ಮಿ ಪಕ್ಷದ ಶಾಸಕ ರಾಘವ ಚಡ್ಡಾ ನೇತೃತ್ವ ವಹಿಸಿದ್ದರು. ಗಲಭೆಗೆ ಸಂಬಂಧಿಸಿದ ಬಿಜೆಪಿ ನಾಯಕ ದ್ವೇಷದ ಹೇಳಿಕೆಗಳನ್ನು ತಿದ್ದುಪಡಿ ಮಾಡದೆ ಪ್ರಸಾರ ಮಾಡಿದ ಸಾಮಾಜಿಕ ಜಾಲತಾಣದ ನಡೆ ಕುರಿತು ಸಮಿತಿ ವಿವರಣೆ ಬಯಸಿತ್ತು.