ಆಲೂರುಸಿ ದ್ದಾಪುರ, ಸೆ. 23: ಮದ್ಯಪಾನ ಮಾಡಿ ಪ್ರತಿದಿನ ತನಗೆ ಹೊಡೆದು ಹಿಂಸೆ ನೀಡುತ್ತಿದ್ದ ತಂದೆಯಿಂದ ನೊಂದ ಹೆಣ್ಣುಮಗು ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದರಿಂದ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮಗುವಿಗೆ ಹಿಂಸೆ ನೀಡುತ್ತಿದ್ದ ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಗುವನ್ನು ರಕ್ಷಿಸಿದ ಪ್ರಕರಣ ಶನಿವಾರಸಂತೆಯಲ್ಲಿ ನಡೆದಿದೆ. ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಳುಗಳಲೆ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಚಂದ್ರಶೇಖರ್ ಕಳೆದ ಒಂಭತ್ತು ವರ್ಷಗಳ ಹಿಂದೆ ವಿವಾಹವಾಗಿದ್ದು, ಈತನಿಗೆ 8 ವರ್ಷ ಮತ್ತು 6 ವರ್ಷದ ಪುತ್ರಿಯರಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ಚಂದ್ರಶೇಖರ್ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ಪತ್ನಿ ಮತ್ತು ಇಬ್ಬರು ಪುತ್ರಿಯರಿಗೆ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ ಇದರಿಂದ ಹಿಂಸೆ ತಾಳಲಾರದೆ 2 ವರ್ಷಗಳ ಹಿಂದೆ ಪತ್ನಿ ತನ್ನ ಇಬ್ಬರು ಪುತ್ರಿಯರನ್ನು ಕರೆದುಕೊಂಡು ತನ್ನ ತವರು ಮನೆ ನಾಪೋಕ್ಲುವಿಗೆ ತೆರಳಿದ್ದರು. ಆದರೆ ಚಂದ್ರಶೇಖರ್ ಪತ್ನಿಯ ಮನೆಗೆ ತೆರಳಿ ತನ್ನ 8 ವರ್ಷದ ಹಿರಿಯ ಪುತ್ರಿಯನ್ನು ವಾಪಾಸು ತನ್ನ ಮನೆಗೆ ಕರೆತಂದು ಪಕ್ಕದ ಸರಕಾರಿ ಶಾಲೆಗೆ ಸೇರಿಸಿದ್ದ.

ಆದರೂ ಕುಡಿತದ ಚಟ ಬಿಡದ ತಂದೆ ಚಂದ್ರಶೇಖರ್ ಕುಡಿದು ಬಂದು ಮಗುವಿಗೆ ಹೊಡೆದು ಹಿಂಸೆ ಮಾಡುತ್ತಾ ಶಾಲೆಗೆ ಹೋಗಬೇಡ, ಮನೆ ಕೆಲಸ ಮಾಡಿಕೊಂಡಿರು ಎಂದು ಬೆದರಿಕೆ ಹಾಕುತ್ತಿದ್ದ ಅಲ್ಲದೆ ತಾನು ದುಡಿದ ಹಣವನ್ನು ಕುಡಿತಕ್ಕೆ ವಿನಿಯೋಗಿಸುತ್ತಿದ್ದ ಚಂದ್ರಶೇಖರ್ ತನ್ನ ಪುತ್ರಿಗೆ ಮತ್ತು ವಯಸ್ಸಾದ ತಾಯಿಗೆ ಊಟ ಹಾಕುತ್ತಿರಲಿಲ್ಲ, ಪ್ರತಿದಿನ ಕುಡಿದು ಬಂದು ಹೊಡೆಯುತ್ತಿದ್ದ ತಂದೆಯ ವರ್ತನೆಗೆ ಭಯಪಟ್ಟ ಪುತ್ರಿ ಅಕ್ಕಪಕ್ಕದ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಳು. ಪ್ರತಿದಿನ ತಂದೆಯ ವರ್ತನೆಯಿಂದ ನೊಂದ ಮಗು ಮಂಗಳವಾರ ರಾತ್ರಿ ಪಕ್ಕದ ಮನೆಗೆ ತೆರಳಿ ತನ್ನನ್ನು ತಂದೆಯಿಂದ ರಕ್ಷಿಸಿ ಯಾವುದಾದರೂ ಅನಾಥಶ್ರಮಕ್ಕೆ ಸೇರಿಸುವಂತೆ ವಿನಂತಿಸಿಕೊಂಡಿದೆ.

ಮಗುವಿನ ಅಸಹಾಯಕ ಸ್ಥಿತಿಗೆ ಮರುಗಿದ ಸಾರ್ವಜನಿಕರು ಜಿಲ್ಲಾ ಮಕ್ಕಳ (ಮೊದಲ ಪುಟದಿಂದ) ಸಹಾಯವಾಣಿ ಕೇಂದ್ರ, ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಪ್ರಕರಣ ಕುರಿತು ಮಾಹಿತಿ ನೀಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಮಕ್ಕಳ ಸಹಾಯವಾಣಿ ಕೇಂದ್ರದ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ನೊಂದ ಮಗುವಿನ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ನಂತರ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಮಗುವಿಗೆ ಹಿಂಸೆ ನೀಡುತ್ತಿದ್ದ ಕುರಿತು ಮಗುವಿನ ಹೇಳಿಕೆಯನ್ನು ಆಲಿಸಿದ ಪೊಲೀಸರು ತಂದೆ ಚಂದ್ರಶೇಖರ್ ವಿರುದ್ಧ ಬಾಲ ನ್ಯಾಂiÀi ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಂಗ ಬಂಧಕ್ಕೆ ಒಳಪಡಿಸಲಾಗಿದೆ. ಅಧಿಕಾರಿಗಳು ನಿರಾಶ್ರಿತ ಮಗುವನ್ನು ಮಡಿಕೇರಿ ಬಾಲಕಿಯರ ಬಾಲಮಂದಿರದಲ್ಲಿ ದಾಖಲಿಸಿದ್ದಾರೆ. -ದಿನೇಶ್ ಮಾಲಂಬಿ