ಶನಿವಾರಸಂತೆ, ಸೆ. 22: ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ದಲಿತ ಹಿತರಕ್ಷಣಾ ಒಕ್ಕೂಟದ ಹೋಬಳಿ ಮಟ್ಟದ ಸಭೆ ತಾಲೂಕು ಘಟಕದ ಅಧ್ಯಕ್ಷ ಡಿ.ಎನ್. ವಸಂತ್ ಅಧ್ಯಕ್ಷತೆಯಲ್ಲಿ ನಡೆಯಿತು.

ಒಕ್ಕೂಟದ ಜಿಲ್ಲಾ ಮಾರ್ಗದರ್ಶಕ ಪತ್ರಕರ್ತ ಜಯಪ್ಪ ಹಾನಗಲ್ ಮಾತನಾಡಿ, ದಲಿತ ಹೋರಾಟದ ಹೆಸರಿನಲ್ಲಿ ಇಂದು ಹತ್ತು ಹಲವು ಸಂಘಟನೆಗಳು ಕಾರ್ಯನಿರ್ವಹಿಸುತ್ತಿದೆ. ವ್ಯಕ್ತಿ, ಪಕ್ಷ ನೋಡಿ ಬೆಂಬಲಿಸದೆ ಬಣ ರಹಿತವಾಗಿ ಸಂಘಟಿತರಾಗಬೇಕು. ಜಿಲ್ಲೆಯಲ್ಲಿ ದಲಿತ ಪರ ಹೋರಾಟಗಳನ್ನು ಮಾಡಲು ದಲಿತ ಹಿತರಕ್ಷಣಾ ಒಕ್ಕೂಟ ರಚಿಸಿದ್ದು, ಸಂಘಟನೆಯೊಂದಿಗೆ ಯುವಕರು ಕೈಜೋಡಿಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಸ್. ನಿರ್ವಾಣಪ್ಪ ಮಾತನಾಡಿ, ಜಿಲ್ಲಾ ಹಾಗೂ ತಾಲೂಕು ಸಮಿತಿಗಳನ್ನು ನೂತನವಾಗಿ ರಚಿಸಿದ್ದು, ಹೋಬಳಿಮಟ್ಟದಲ್ಲಿ ಸಂಘಟಿಸುವತ್ತ ಹೆಜ್ಜೆ ಹಾಕಲಾಗುತ್ತಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕೀಲ ಬಿ.ಈ. ಜಯೇಂದ್ರ ಮಾತನಾಡಿ, ಒಕ್ಕೂಟದ ಕಾರ್ಯಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ. ಸಾಮಾನ್ಯ ಕಾರ್ಯಕರ್ತರು ವಿಶ್ಲೇಷಿಸಲು ಮುಕ್ತ ಅವಕಾಶವಿರುತ್ತದೆ ಎಂದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ರಾಜಪ್ಪ, ಖಜಾಂಚಿ ಎಚ್.ಎ. ನಾಗರಾಜ್, ಸದಸ್ಯರಾದ ಡಿ.ವಿ. ದೇವರಾಜ್, ಜಗದೀಶ್, ತಾಲೂಕು ಉಪಾಧ್ಯಕ್ಷೆ ವಿಮಲಾಕ್ಷಿ, ಕಾರ್ಯದರ್ಶಿ ಎಚ್.ಜಿ. ಶ್ರೀನಿವಾಸ, ಸದಸ್ಯರಾದ ಡಿ.ಆರ್. ವೇದಕುಮಾರ್, ಕೆಂಚೇಶ್ವರ ಉಪಸ್ಥಿತರಿದ್ದರು.