ಸೋಮವಾರಪೇಟೆ, ಸೆ.22: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸುರಿದ ನಿರಂತರ ಮಳೆಗೆ 2 ವಾಸದ ಮನೆಗಳ ಗೋಡೆ ಕುಸಿದು, ಹಾನಿ ಸಂಭವಿಸಿದೆ.
ಪಟ್ಟಣ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಗ್ರಾಮದ ಕೆ.ಹೆಚ್. ಅಬ್ಬಾಸ್ ಎಂಬವರಿಗೆ ಸೇರಿದ ವಾಸದ ಮನೆ ಇಂದು ಮುಂಜಾನೆ 3.30ರ ಸುಮಾರಿಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯೊಳಗಿದ್ದ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೂಲಿಕಾರ್ಮಿಕರಾಗಿರುವ ಅಬ್ಬಾಸ್ ಅವರ ವಾಸದ ಮನೆಯ ಗೋಡೆಗಳು ಕುಸಿದು ಛಾವಣಿ ಧರಾಶಾಹಿಯಾಗಿದ್ದು ವಾಸಕ್ಕೆ ಅಸಾಧ್ಯವಾಗಿದೆ.
ಇದರೊಂದಿಗೆ ತೋಳೂರುಶೆಟ್ಟಳ್ಳಿ ಗ್ರಾಮದ ಟಿ.ಎಂ. ಸುರೇಶ್ ಎಂಬವರ ವಾಸದ ಮನೆಯ ಒಂದು ಪಾಶ್ರ್ವ ಭಾರೀ ಮಳೆಗೆ ಕುಸಿದಿದೆ. ಈ ಭಾಗದಲ್ಲಿ ಕಳೆದ 1 ವಾರಗಳಿಂದ ನಿರಂತರ ಮಳೆಯಾದ್ದರಿಂದ ಅತೀ ಶೀತದಿಂದಾಗಿ ಮನೆಯ ಗೋಡೆ ಕುಸಿದುಬಿದ್ದಿದೆ.
ಗೋಡೆಯೊಂದಿಗೆ ಛಾವಣಿ ನೆಲಕ್ಕಚ್ಚಿದ್ದು, ಉಳಿದ ಕೊಠಡಿಗಳ ಗೋಡೆಗಳೂ ಬೀಳುವ ಹಂತಕ್ಕೆ ತಲುಪಿದೆ. ಎರಡೂ ಕುಟುಂಬಗಳು ಕಂಗಾಲಾಗಿವೆ. ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈರ್ವರ ಮನೆಗಳು ವಾಸಕ್ಕೆ ಅಸಾಧ್ಯವಾಗಿರುವ ಹಿನ್ನೆಲೆ ಸರ್ಕಾರದಿಂದ ಗರಿಷ್ಠ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಬಾ ವ್ಯಾಪ್ತಿಗೆ 36.2 ಮಿ.ಮೀ, ಶನಿವಾರಸಂತೆ 23.8, ಕೊಡ್ಲಿಪೇಟೆ 39, ಸುಂಟಿಕೊಪ್ಪ 28.2, ಶಾಂತಳ್ಳಿಗೆ 52 ಮಿ.ಮೀ., ಕುಶಾಲನಗರ 6.4 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.