ಸಿದ್ದಾಪುರ, ಸೆ. 22: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಹೊಸೂರು ಗ್ರಾಮದಲ್ಲಿ ಭತ್ತದ ಕೃಷಿ ಮಾಡಿದ ಗದ್ದೆ ಸೇರಿದಂತೆ ಕಾಫಿ ತೋಟಗಳಿಗೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಭತ್ತದ ಬೆಳೆಯನ್ನು ನಾಶ ಮಾಡಿವೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು ಅರಣ್ಯ ಇಲಾಖೆಯು ಹಲವಾರು ಬಾರಿ ಆನೆಗಳನ್ನು ಕಾಡಿಗಟ್ಟಿದ್ದರು ಕೂಡ ಮರಳಿ ಕಾಫಿ ತೋಟದಲ್ಲಿ ಬೀಡುಬಿಟ್ಟು ಕೃಷಿ ಫಸಲುಗಳ ಮೇಲೆ ದಾಳಿ ನಡೆಸುತ್ತಿವೆ. ಹಾನಿಗೊಳಗಾದ ಭತ್ತದ ಬೆಳೆಗಳನ್ನು ವೀರಾಜಪೇಟೆ ವಲಯ ಅರಣ್ಯಾಧಿಕಾರಿ ದೇವಯ್ಯ ಹಾಗೂ ಉಪ ವಲಯ ಅರಣ್ಯ ಅಧಿಕಾರಿ ಮನೋಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ನಷ್ಟ ಸಂಭವಿಸಿರುವ ಕೃಷಿಕರಿಗೆ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.