ಮಡಿಕೇರಿ, ಸೆ. 22: ನಗರದ 23ನೇ ವಾರ್ಡಿನ ಬಾಲವಿಕಾಸ ಕೇಂದ್ರದ (ಅಂಗನವಾಡಿ) ಸಭೆಯು ನಗರಸಭೆಯ ಮಾಜೀ ಸದಸ್ಯರಾದ ಮನ್ಸೂರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂದಿನ ಸಾಲಿನ ಅಂಗನವಾಡಿ ಕೇಂದ್ರದ ನೂತನ ಅಧ್ಯಕ್ಷೆಯನ್ನಾಗಿ 23ನೇ ವಾರ್ಡಿನ ಪ್ರಿಯಾ ಗುರುಕಿರಣ್ ಅವರನ್ನು ಆರಿಸಲಾಯಿತು. ಈ ಸಂದರ್ಭ ಪ್ರಿಯಾ ಗುರುಕಿರಣ್ ಅವರಿಗೆ ಹಿಂದಿನ ಸಾಲಿನ ಅಧ್ಯಕ್ಷೆ ಅಪ್ಸತ್ ಅವರು ಅಧಿಕಾರ ಹಸ್ತಾಂತರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮನ್ಸೂರ್ ಮಾತನಾಡಿ, ಈ ಅಂಗನವಾಡಿ ಕೇಂದ್ರಕ್ಕೆ 23ನೇ ವಾರ್ಡಿನ ಬಹುತೇಕ ಪೋಷಕರ ಮಕ್ಕಳಿಗೆ ಯೋಗ್ಯ ರೀತಿಯ ತರಬೇತಿಯನ್ನು ನೀಡಲಾಗುತ್ತಿದ್ದು, ನಗರಸಭೆಯ ವತಿಯಿಂದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಈ ಅಂಗನವಾಡಿ ಕೇಂದ್ರವನ್ನು ಡಾ. ಅಬ್ದುಲ್ ಕಲಾಂ ಬಡಾವಣೆಯಲ್ಲಿ ನಗರಸಭೆಯಿಂದ ಗುರುತಿಸಿರುವ ನೂತನ ಪರಿಸರಕ್ಕೆ ಸ್ಥಳಾಂತರಿಸಲಾಗುವುದೆಂದರು.

ಅಂಗನವಾಡಿ ಕೇಂದ್ರದ ಶಿಕ್ಷಕಿ ಸುಮಿತ್ರಾ ಸ್ವಾಗತಿಸಿದರು. ಈ ಕೇಂದ್ರದ ನೂತನ ಸಮಿತಿಗೆ ಆರೋಗ್ಯ ಕೇಂದ್ರದ ಶುಶ್ರೂಷಕಿ ಜಿ. ಶೋಭಾ ಅವರನ್ನು ಆರಿಸಿಕೊಳ್ಳಲಾಯಿತು. ಸಭೆಯಲ್ಲಿ ಬೈ.ಶ್ರೀ ಪ್ರಕಾಶ್, ಜೀವನ್, ಎಸ್.ಎನ್. ವಸಂತ ಕುಮಾರ್, ಸೀತಾ ಪ್ರಕಾಶ್, ಮಹಮ್ಮದ್ ಜಿಯಾವುಲ್ಲಾ ಉಪಸ್ಥಿತರಿದ್ದರು.