ಮಡಿಕೇರಿ, ಸೆ. 21: ನೆಲ್ಲಿಹುದಿಕೇರಿ ಗ್ರಾಮದ ನಿವೇಶನ ರಹಿತರಿಗೆ ಮುಂದಿನ ಇಪ್ಪತ್ತು ದಿನಗಳ ಒಳಗಾಗಿ ನಿಗದಿತ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ, ನಿರಾಶ್ರಿತರೆ ಸ್ಥಳಕ್ಕೆ ತೆರಳಿ, ಅಲ್ಲಿನ ಮರಗಳನ್ನು ತೆರವುಗೊಳಿಸಿ ಪ್ರತಿಭಟನೆ ನಡೆಸುವು ದಾಗಿ ನೆಲ್ಲಿಹುದಿಕೇರಿ ನಿರಾಶ್ರಿತರ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪಿ.ಆರ್. ಭರತ್, ನೆಲ್ಲಿಹುದಿಕೇರಿ ನದಿ ದಡದ ಬೆಟ್ಟದಕಾಡು, ಕುಂಬಾರಗುಂಡಿ, ಬರಡಿ, ಕಾರಬಾಣೆÉ ಪ್ರದೇಶಗಳಲ್ಲಿ ಸುಮಾರು ಮೂವತ್ತು ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳು ಪ್ರತಿವರ್ಷ ಪ್ರವಾಹಕ್ಕೆ ಸಿಲುಕಿ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿರುವುದ ರಿಂದ ಶಾಶ್ವತ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಹಾಗೂ ಕೊಡಗಿನ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಮುಂದಿನ 20 ದಿನಗಳ ಒಳಗಾಗಿ ಅಭ್ಯತ್ಮಂಗಲದ ಒತ್ತುವರಿ ಜಾಗದ ಮರಗಳನ್ನು ಕಡಿದು ಮನೆ ನಿರ್ಮಿಸಲು ಭೂಮಿ ಸಮತಟ್ಟು ಮಾಡಿಕೊಡಬೇಕು. ನಿವೇಶನಕ್ಕೆ ಹೋಗುವ ರಸ್ತೆಯ ಸಮಸ್ಯೆ ಇತ್ಯರ್ಥಪಡಿಸಿ ರಸ್ತೆ ಮಾಡಿ ಸೇತುವೆ ನಿರ್ಮಿಸಿ ಕೊಡಬೇಕು. ಫಲಾನುಭವಿಗಳಿಗೆ ಮನೆ ನಿರ್ಮಿಸಲು ಬೇಕಾದ ಹಣವನ್ನು ತ್ವರಿತ
ಗತಿಯಲ್ಲಿ ಬಿಡುಗಡೆ ಮಾಡಬೇಕು ಮತ್ತು ತಕ್ಷಣ ಹಕ್ಕು ಪತ್ರ
ನೀಡಬೇಕು ಎಂದು ಭರತ್ ಒತ್ತಾಯಿಸಿದರು.
ನಿರಾಶ್ರಿತರಿಗೆ ಸಂಘ, ಸಂಸ್ಥೆಗಳು, ದಾನಿಗಳು, ಸುಮಾರು 40ಕ್ಕಿಂತಲೂ ಹೆಚ್ಚು ಮನೆಗಳನ್ನು ಕಟ್ಟಿಕೊಡಲು ತೀರ್ಮಾನಿಸಿದ್ದಾರೆ. ಆದರೆ ಆ ಜಾಗದ ದಾಖಲಾತಿಗಳನ್ನು ನೀಡಲು ಕಂದಾಯ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ದಾಖಲೆಗಳ ವಿಲೇವಾರಿಗೆ ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷೆ ಸಫಿಯಾ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಮಣಿ ಮೊಹಮ್ಮದ್, ಸಹ ಕಾರ್ಯದರ್ಶಿ ಎಂ.ಎ. ಸಲ್ಮತ್, ಪದಾಧಿಕಾರಿಗಳಾದ ಟಿ.ಡಿ. ಸಂಗೀತಾ ಹಾಗೂ ಶಹೀಜಾ ಉಪಸ್ಥಿತರಿದ್ದರು.