ಕುಶಾಲನಗರ, ಸೆ. 21: ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಿತಿಮೀರಿರುವ ಕಾಡಾನೆಗಳ ಹಾವಳಿ ನಿಯಂತ್ರಿಸಲು ಕ್ರಮಕೈಗೊಳ್ಳಬೇಕೆಂದು ಗ್ರಾಮದ ರೈತರು ಪಂಚಾಯ್ತಿಗೆ ಮನವಿ ಮಾಡಿದ್ದಾರೆ.
ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಾದ ಚಿನ್ನೂರು, ದಾಸವಾಳ, ದುಬಾರೆ, ಹೊಸಪಟ್ಟಣ, ರಂಗಸಮುದ್ರ ಗ್ರಾಮಗಳಿಗೆ ಕಾಡಾನೆಗಳ ಹಿಂಡು ನಿರಂತರವಾಗಿ ದಾಳಿ ನಡೆಸಿ ಕಾಫಿ, ಭತ್ತ, ಅಡಿಕೆ, ತೆಂಗು, ಬಾಳೆ ಮತ್ತಿತರ ಬೆಳೆಗಳನ್ನು ನಾಶಗೊಳಿಸುತ್ತಿವೆ. ಈ ಬಗ್ಗೆ ಗ್ರಾಮಸಭೆಯಲ್ಲಿ ಚರ್ಚೆಯಾಗಿದ್ದು ಕಾಡಾನೆಗಳ ಹಾವಳಿ ತಡೆಯಲು ಆನೆ ಕಂದಕ ನಿರ್ಮಾಣ, ಸೋಲಾರ್ ಅಳವಡಿಕೆ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಯಾವುದೇ ಯೋಜನೆಗಳು ಇದುವರೆಗೆ ಅನುಷ್ಠಾನಗೊಳಿಸಿಲ್ಲ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಸಿ ಗ್ರಾಮದ ರೈತರು, ಸಂಘಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸಲು ಗ್ರಾಮ ಪಂಚಾಯಿತಿ ವೇದಿಕೆ ಕಲ್ಪಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಮುಂದಿನ ಒಂದು ವಾರದ ಒಳಗಾಗಿ ಅಧಿಕಾರಿಗಳು ಸ್ಪಂದಿಸದೆ ಇದ್ದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.