ಪೆÇನ್ನಂಪೇಟೆ, ಸೆ.21: ಗ್ರಾಮೀಣ ರಸ್ತೆಗಳು ಸುಧಾರಣೆಯಾದರೆ ಮಾತ್ರ ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಗತಿ ಕಾಣಲು ಸಾಧ್ಯ. ಆದ್ದರಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಗ್ರಾಮಸ್ಥರ ಸಹಕಾರ ಅತೀ ಮುಖ್ಯ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಪ್ಪಂಡೇರಂಡ ಭವ್ಯ ಚಿಟ್ಯಣ್ಣ ಅವರು ಹೇಳಿದರು.
ಬಿಟ್ಟಂಗಾಲ ಗ್ರಾ. ಪಂ. ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿಗಳ ಗ್ರಾಮಸಡಕ್ ಯೋಜನೆಯಡಿ ರೂ.6.45ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿರುವ 8.9 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರದಂದು ವಿ.ಬಾಡಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿಗೊಂಡ ರಸ್ತೆಗಳು ಶಾಶ್ವತವಾಗಿ ಉಳಿಯಬೇಕಾದರೆ ಚರಂಡಿ ವ್ಯವಸ್ಥೆ ಪ್ರಮುಖವಾದದ್ದು. ರಸ್ತೆಯ ಚರಂಡಿ ನಿರ್ಮಾಣಕ್ಕೆ ಗ್ರಾಮಸ್ಥರು ಸಹಕಾರ ನೀಡಿದರೆ ಮಾತ್ರ ರಸ್ತೆಯ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ವೀರಾಜಪೇಟೆ ತಾಲೂಕು ಬಿಜೆಪಿ ಕಾರ್ಯದರ್ಶಿಗಳಾದ ಅಮ್ಮುಣಿಚಂಡ ರಂಜಿ ಪೂಣಚ್ಚ ಅವರು, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಂಗಾಲ-2ನೇ ರುದ್ರಗುಪ್ಪೆ- ವಿ.ಬಾಡಗ- ಕುಟ್ಟಂದಿ ರಸ್ತೆಯ ಒಟ್ಟು 8.9 ಕಿ.ಮೀ. ದೂರದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪ್ರಧಾನಮಂತ್ರಿಗಳ ಗ್ರಾಮ ಸಡಕ್ ಯೋಜನೆಗೆ ಸೇರಿಸಲು ಕ್ಷೇತ್ರದ ಸಂಸದ ಹಾಗೂ ಶಾಸಕರ ಪಾತ್ರ ಅತೀ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾ. ಪಂ. ಮಾಜಿ ಸದಸ್ಯರಾದ ಕೊಂಗಂಡ ವಾಸು ಮುದ್ದಯ್ಯ, ವೀರಾಜಪೇಟೆ ಫೆಡರೇಷನ್ ಸಹಕಾರ ಸಂಘದ ಉಪಾಧ್ಯಕ್ಷ ಕುಪ್ಪಂಡ ಮನು, ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಎ.ಪಿ. ದಿನೇಶ್, ಸಹ ಪ್ರಮುಖ್ ಕುಪ್ಪಂಡ ದಿಲನ್ ಬೋಪಣ್ಣ ಹಾಗೂ ಇತರರು ಇದ್ದರು.