ಸೋಮವಾರಪೇಟೆ, ಸೆ. 21: ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಮನೆಯ ಮುಂಭಾಗ ಬೆಳೆದಿದ್ದ 6 ಶ್ರೀಗಂಧದ ಮರಗಳನ್ನು ಕಳವು ಮಾಡಿದ ಪ್ರಕರಣ ಜನಮಾನಸದಿಂದ ಬಹುತೇಕ ಮರೆಯಾಗಿದ್ದರೂ, ಆರೋಪಿಗಳ ಪತ್ತೆ ಮಾತ್ರ ಇಂದಿಗೂ ಆಗಿಲ್ಲ. ಪೊಲೀಸ್ ಇಲಾಖೆ ಸಫಲವಾಗ ದಿರುವುದನ್ನು ಜನ ಮರೆತಿಲ್ಲ.

ಕಳೆದ 2019ರ ಅಕ್ಟೋಬರ್ ತಿಂಗಳಿನಲ್ಲಿ ನಡೆದಿದ್ದ ಶ್ರೀಗಂಧದ ಕಳವು ಪ್ರಕರಣದಲ್ಲಿ ಈವರೆಗೆ ಯಾವದೇ ಆರೋಪಿಗಳ ಪತ್ತೆಯಾಗಿಲ್ಲ. ಶಾಸಕರು ಬೆಳೆಸಿದ್ದ ಶ್ರೀಗಂಧದ ಮರವೂ ಅವರಿಗೆ ಮರಳಿ ಲಭಿಸಿಲ್ಲ! ಇನ್ನು 20 ದಿನಗಳು ಕಳೆದರೆ ಕಳ್ಳತನ ನಡೆದು ಬರೋಬ್ಬರಿ 1 ವರ್ಷ!

ಮಡಿಕೇರಿ ಕ್ಷೇತ್ರವನ್ನು ವಿಧಾನ ಸಭೆಯಲ್ಲಿ ಪ್ರತಿನಿಧಿಸುವ, ಈ ಹಿಂದೆ ಸಚಿವರಾಗಿಯೂ ಕೊಡಗನ್ನು ಪ್ರತಿನಿಧಿಸಿದ್ದ ಅಪ್ಪಚ್ಚುರಂಜನ್ ಅವರ ಮನೆ ಆವರಣದಲ್ಲೇ ಕಳ್ಳತನ ಮಾಡಿದ ಖದೀಮರನ್ನು ಈವರೆಗೆ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದಾದರೆ ಕಳ್ಳರ ಎದುರು ಇಲಾಖೆ ನಿಸ್ಸಹಾಯಕವಾಯಿತೇ? ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ.

ಕಳೆದ ತಾ. 10.10.2019ರಂದು ರಾತ್ರಿ ಸೋಮವಾರಪೇಟೆಯ ಕುಂಬೂರು ಗ್ರಾಮದಲ್ಲಿರುವ ಅಪ್ಪಚ್ಚು ರಂಜನ್ ಅವರ ಮನೆಯ ಮುಂಭಾಗ ಬೆಳೆದಿದ್ದ 6 ಶ್ರೀಗಂಧದ ಮರಗಳನ್ನು ಕಳ್ಳರು ಬಲು ನಾಜೂಕಾಗಿ ಕತ್ತರಿಸಿಕೊಂಡು ಹೋಗಿದ್ದರು.

ವಿಧಾನ ಸಭಾ ಅಧಿವೇಶನ ನಡೆಯುತ್ತಿದ್ದ ಹಿನ್ನೆಲೆ ಶಾಸಕರು ಪತ್ನಿ ಸಹಿತ ಬೆಂಗಳೂರಿಗೆ ತೆರಳಿದ್ದ ಸಂದರ್ಭವನ್ನು ಸಾಧಿಸಿದ ಖದೀಮರು ತಮ್ಮ ಕೈಚಳಕ ತೋರಿದ್ದರು. ಶಾಸಕರ ಮನೆ ಮತ್ತು ಗೇಟ್ ನಡುವೆ ಸುಮಾರು 100 ಮೀಟರ್ ಅಂತರವಿದ್ದು, ಗೇಟ್ ಬಳಿಯಲ್ಲಿಯೇ ವಾಚ್‍ಮೆನ್‍ನ ವಸತಿ ಗೃಹವಿದೆ.

ಈ ಗೇಟ್ ಹಾಗೂ ವಸತಿ ಗೃಹ ದಿಂದ ಅನತಿ ದೂರದಲ್ಲೇ ಸಾಲಾಗಿ ಶ್ರೀಗಂಧದ ಮರಗಳನ್ನು ಶಾಸಕ ರಂಜನ್ ಬೆಳೆಸಿದ್ದರು. ಸುಮಾರು 10ವರ್ಷಕ್ಕೂ ಹೆಚ್ಚು ಪ್ರಾಯದ ಶ್ರೀಗಂಧದ ಮರದ ಚೇಗು ಬಲಿಯಲಾ ರಂಭಿಸಿದ್ದವು. ಇಂತಹ ಸಂದರ್ಭದಲ್ಲೇ ಕಳ್ಳರು ತಮ್ಮ ಚಾಕಚಕ್ಯತೆ ತೋರಿದ್ದು, ವಾಚ್‍ಮೆನ್‍ನ ಅರಿವಿಗೂ ಬಾರದಂತೆ, ಗೇಟ್‍ನಲ್ಲಿ ಅಳವಡಿಸಿದ್ದ ಸಿ.ಸಿ. ಕ್ಯಾಮೆರಾಕ್ಕೂ ಸೆರೆ ಸಿಕ್ಕದಂತೆ 6 ಮರಗಳನ್ನು ಎಗರಿಸಿದ್ದರು.

ಪ್ರಾರಂಭದಲ್ಲಿ ಸೋಮವಾರಪೇಟೆಯ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಅವರು ಪ್ರಕರಣವನ್ನು ಭೇದಿಸಲು ಕಾರ್ಯತಂತ್ರ ರೂಪಿಸಿದ್ದರು. 2 ದಿನದ ತನಿಖೆಯೂ ಸರಿಯಾದ ದಿಕ್ಕಿನಲ್ಲೇ ಸಾಗಿತ್ತು. ಈ ಸಮಯದಲ್ಲಿ ಪ್ರಕರಣವನ್ನು ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ವರ್ಗಾಯಿಸಿದ್ದರು. ಡಿಸಿಐಬಿ ಅಧಿಕಾರಿಗಳು 15 ದಿನಗಳ ಕಾಲ ತಿಪ್ಪರಲಾಗ ಹಾಕಿದರೂ ಕಳ್ಳರ ಸುಳಿವು ಲಭಿಸಲಿಲ್ಲ. ತದನಂತರ ಪ್ರಕರಣವನ್ನು ಸೋಮವಾರಪೇಟೆಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ಹಸ್ತಾಂತರಿಸ ಲಾಯಿತು.

ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ಕಳ್ಳರ ಪತ್ತೆ ಕಾರ್ಯಕ್ಕೆ ಮುಂದಾದರೂ ಯಶಸ್ಸು ಕಾಣಲಿಲ್ಲ. ಆ ಸಮಯದಲ್ಲಿ ವೃತ್ತ ನಿರೀಕ್ಷಕರ ತಂಡ ಕಳ್ಳರ ಪತ್ತೆಗಿಂತ ಪಟ್ಟಣದಲ್ಲಿ ಹೆಲ್ಮೆಟ್ ಧರಿಸದೇ ಓಡಾಡುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುವದರಲ್ಲಿ ಬ್ಯುಸಿಯಾಗಿದ್ದರು. ಇದೀಗ ನಂಜುಂಡೇಗೌಡ ಅವರು ನಿವೃತ್ತಿ ಯಾಗಿದ್ದಾರೆ. ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾಗಿ ಮಹೇಶ್ ಎಂಬವರು ಅಧಿಕಾರ ವಹಿಸಿಕೊಳ್ಳಲಿರುವ ಮಾಹಿತಿ ಲಭಿಸಿದೆ. ಹಿಂದಿನ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಅವರ ಬದಲಿಗೆ ನೂತನ ವರಿಷ್ಠಾಧಿಕಾರಿ ಗಳಾಗಿ ಕ್ಷಮಾ ಮಿಶ್ರಾ ಬಂದಿದ್ದಾರೆ.

ಇನ್ನಾದರೂ ವಿಧಾನ ಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಅಪ್ಪಚ್ಚು ರಂಜನ್ ಅವರ ಮನೆಯಂಗಳದಲ್ಲಿದ್ದ ಶ್ರೀಗಂಧವನ್ನು, ಎಗರಿಸಿದ ಖದೀಮರ ಪತ್ತೆ ಕಾರ್ಯ ನಡೆಯುತ್ತದೆಯೇ? ಅಥವಾ ಕಳ್ಳತನ ಪ್ರಕರಣ ಇಲಾಖೆಯ ಕಡತಗಳಲ್ಲಿ ದಾಖಲೆಯಾಗಿ ಉಳಿಯುತ್ತದೆಯೇ? ಅಥವಾ ಕಳ್ಳರೆದುರು ಇಲಾಖೆ ನಿಸ್ಸಹಾಯಕವಾಗಿಯೇ ಇದ್ದುಬಿಡು ತ್ತದೆಯೇ ಎಂಬದನ್ನು ಕಾದು ನೋಡಬೇಕಿದೆ!

-ವಿಜಯ್ ಹಾನಗಲ್