ಮಡಿಕೇರಿ, ಸೆ. 21: ಕರುನಾಡಿನಲ್ಲಿ ಆತಂಕ ಸೃಷ್ಟಿಸಿರುವ ಮಳೆರಾಯ ಕೊಡಗಿನಲ್ಲಿಯೂ ಎಡೆಬಿಡದೆ ಸುರಿಯಲಾರಂಭಿಸಿದ ಪರಿಣಾಮ, ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ-ಭಾಗಮಂಡಲ ಸುತ್ತಮುತ್ತ ಭತ್ತದ ಗದ್ದೆಗಳು ಜಲಾವೃತಗೊಂಡು ರೈತಾಪಿ ವರ್ಗದಲ್ಲಿ ಆತಂಕ ಸೃಷ್ಟಿಸಿದೆ. ಕಾವೇರಿ ನದಿ ಪಾತ್ರದ ಉದ್ದಕ್ಕೂ ಕೋರಂಗಾಲ, ಚೇರಂಗಾಲ, ಭಾಗಮಂಡಲ, ಚೆಟ್ಟಿಮಾನಿ ಸೇರಿದಂತೆ ನಾಟಿ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ.ಇತ್ತ ಚೇರಂಬಾಣೆ, ನಾಪೋಕ್ಲು, ಬಲಮುರಿ, ಬೇತ್ರಿ ಹಾಗೂ ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು, ಗುಹ್ಯ ಮುಂತಾದೆಡೆಗಳಲ್ಲಿ ಕಾವೇರಿ ನದಿ ಪ್ರವಾಹದಿಂದ ಕೃಷಿ ಭೂಮಿ ಮುಳುಗಡೆಗೊಂಡಿದೆ. ಇನ್ನು ಕುಶಾಲನಗರ, ಕಣಿವೆ, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ತನಕ ನದಿ ಪಾತ್ರದ ಜೋಳ ಕೃಷಿಗೆ ಸಮಸ್ಯೆ ಎದುರಾಗಿದೆ.ಭಾಗಮಂಡಲ ಸಂಗಮ ತಟದಲ್ಲಿ ನೀರಿನ ಪ್ರಮಾಣ ಸ್ವಲ್ಪ ಇಳಿಮುಖಗೊಂಡು, ರಸ್ತೆ ಸಂಚಾರಕ್ಕೆ ತೊಡಕು ನಿವಾರಣೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ. ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ, ನಿಟ್ಟೂರು, ಹುದಿಕೇರಿ, ಬಾಳೆಲೆ, ತಿತಿಮತಿ ವ್ಯಾಪ್ತಿಯಲ್ಲಿ ಮಳೆಯಾಗುತ್ತಿದ್ದರೂ, ಸಾಧಾರಣವಾಗಿ ಹನಿಯುತ್ತಿರುವ ಹಿನ್ನೆಲೆ ಯಾವುದೇ ಸಮಸ್ಯೆ ಎದುರಾಗಿಲ್ಲವೆಂದು ಮೂಲಗಳು ತಿಳಿಸಿವೆ. ಆದರೆ ಈಗಿನ ಮಳೆ ನಿರಂತರ ಮುಂದುವರಿದರೆ ಕಾಫಿ, ಒಳ್ಳೆಮೆಣಸು ಸೇರಿದಂತೆ ಕೃಷಿ ಫಸಲಿಗೆ ಕೊಳೆರೋಗದ ತೊಂದರೆ ಎದುರಾದೀತು ಎಂದು ರೈತ-ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ತರ ಕೊಡಗಿನ ಶಾಂತಳ್ಳಿ, ಬೆಟ್ಟದಳ್ಳಿ, ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳು (ಮೊದಲ ಪುಟದಿಂದ) ಸೇರಿದಂತೆ, ಗಾಳಿಬೀಡು, ಮಕ್ಕಂದೂರು, ಸಂಪಾಜೆ ವ್ಯಾಪ್ತಿಯಲ್ಲಿಯೂ ಅದೇ ಸನ್ನಿವೇಶ ಎದುರಿಸುವಂತಾಗಿದೆ.

ಮಳೆ ವಿವರ: ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ 2.52 ಇಂಚು ಸರಾಸರಿ ಮಳೆಯಾಗಿದೆ. ವರ್ಷಾರಂಭದಿಂದ ಇದುವರೆಗೆ 89.24 ಇಂಚು ಮಳೆಯಾಗಿದ್ದು, ಕಳೆದ ವರ್ಷ ಈ ಅವಧಿಗೆ 98.80 ಇಂಚು ದಾಖಲಾಗಿತ್ತು. ಕೊಡಗಿನ ಕಾವೇರಿ ಮಾತ್ರವಲ್ಲದೆ ದಕ್ಷಿಣ ಕೊಡಗಿನ ಲಕ್ಷ್ಮಣ ತೀರ್ಥ, ಕೀರೆಹೊಳೆ, ಉತ್ತರ ಕೊಡಗಿನ ಹಟ್ಟಿಹೊಳೆ, ಮಾದಾಪುರ ಹೊಳೆ ಹಾಗೂ ಹಾರಂಗಿ ಹಿನ್ನೀರು ಪ್ರದೇಶಗಳಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿದೆ ಎಂದು ಮಾಹಿತಿ ಲಭಿಸಿದೆ.

ತಾಲೂಕಿನಲ್ಲಿ ಮಳೆ: ಕಳೆದ 24 ಗಂಟೆಗಳಲ್ಲಿ ಮಡಿಕೇರಿ ತಾಲೂಕಿನಲ್ಲಿ 3.65 ಇಂಚು ಸರಾಸರಿ ಮಳೆಯಾಗಿದೆ. ವರ್ಷಾರಂಭದಿಂದ ಇಂದಿನ ತನಕ 126.83 ಇಂಚು ಮಳೆ ಬಿದ್ದರೆ, ಕಳೆದ ಸಾಲಿನಲ್ಲಿ 134.74 ಇಂಚು ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಹಿಂದಿನ 24 ಗಂಟೆಗಳಲ್ಲಿ 2.05 ಇಂಚು ಹಾಗೂ ಇದುವರೆಗೆ ಒಟ್ಟು 60.32 ಇಂಚು ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ 67.75 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಗೆ 1.86 ಇಂಚು, ವರ್ಷಾರಂಭದಿಂದ ಇದುವರೆಗೆ 80.55 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ 94.12 ಇಂಚು ಮಳೆಯಾಗಿತ್ತು.

ಹೋಬಳಿವಾರು ಮಳೆ: ಕಳೆದ 24 ಗಂಟೆಗಳಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತ ಮುತ್ತ 3.79 ಇಂಚು, ನಾಪೋಕ್ಲು 3.15 ಇಂಚು, ಸಂಪಾಜೆ ವ್ಯಾಪ್ತಿಗೆ 2.36 ಇಂಚು, ಭಾಗಮಂಡಲ ಸರಹದ್ದಿನಲ್ಲಿ ಅಧಿಕವಾಗಿ 5.31 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕು ಕೇಂದ್ರಕ್ಕೆ 2.14 ಇಂಚು, ಹುದಿಕೇರಿ 2.44 ಇಂಚು, ಶ್ರೀಮಂಗಲ 2.36 ಇಂಚು, ಪೊನ್ನಂಪೇಟೆಗೆ 1.25 ಇಂಚು, ಬಾಳೆಲೆ 1 ಇಂಚು, ಅಮ್ಮತ್ತಿ 1.71 ಇಂಚು ಮಳೆ ದಾಖಲಾಗಿದೆ.

ಸೋಮವಾರಪೇಟೆ ತಾಲೂಕು ಕೇಂದ್ರದಲ್ಲಿ 2.12 ಇಂಚು, ಶನಿವಾರಸಂತೆ ಸುತ್ತಮುತ್ತ 1.06 ಇಂಚು, ಕೊಡ್ಲಿಪೇಟೆ 1.97 ಇಂಚು, ಕುಶಾಲನಗ 0.78 ಇಂಚು, ಸುಂಟಿಕೊಪ್ಪ 1.22 ಇಂಚು ಮಳೆಯಾಗಿದೆ. ಈ ತಾಲೂಕು ವ್ಯಾಪ್ತಿಯ ಶಾಂತಳ್ಳಿ ಸುತ್ತಮುತ್ತ 5.16 ಇಂಚು ಅತ್ಯಧಿಕ ಮಳೆ ಸುರಿದಿದೆ.

ಒಟ್ಟಿನಲ್ಲಿ ಆಗಸ್ಟ್‍ನಲ್ಲಿ ಅವಾಂತರ ಸೃಷ್ಟಿಸಿದ್ದ ವರುಣನ ಆರ್ಭಟವು ಕಡಿಮೆಯಾಗಿ, ಒಂದಿಷ್ಟು ದಿನ ಬಿಸಿಲಿನ ವಾತಾವರಣ ನಡುವೆ ಇದೀಗ ಮತ್ತೆ ಮಳೆರಾಯ ಆಗಮಿಸುವದರೊಂದಿಗೆ ಸಾಕಷ್ಟು ಬವಣೆ ಎದುರಿಸುವಂತಾಗಿದೆ.

ಸೋಮವಾರಪೇಟೆ: ಸೋಮವಾರಪೇಟೆ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಮಳೆ ಸುರಿಯುತ್ತಿದ್ದು, ವಾತಾವರಣ ಅತೀ ಶೀತದಿಂದ ಕೂಡಿದೆ. ನಿರಂತರ ಮಳೆಯಾಗುತ್ತಿರುವದರಿಂದ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಸಂತೆ ದಿನವಾದ ಇಂದು ಬೆಳಗ್ಗಿನಿಂದಲೇ ಮಳೆ ಇದ್ದುದರಿಂದ ಪಟ್ಟಣ ಹಾಗೂ ಮಾರುಕಟ್ಟೆಯಲ್ಲಿ ಎಂದಿನಂತೆ ಸಾರ್ವಜನಿಕರು ಕಂಡುಬರಲಿಲ್ಲ. ಮಳೆಯಿಂದಾಗಿ ಇಲ್ಲಿನ ಹೈಟೆಕ್ ಮಾರುಕಟ್ಟೆಯಲ್ಲಿ ನೀರು ಸೋರಿಕೆಯಾಗುತ್ತಿದ್ದು, ನೆನೆದುಕೊಂಡೇ ಗ್ರಾಹಕರು ವ್ಯಾಪಾರ ವಹಿವಾಟು ನಡೆಸಿದರು.

ಮಳೆಯೊಂದಿಗೆ ಭಾರೀ ಗಾಳಿಯೂ ಬೀಸುತ್ತಿದ್ದು, ಅಲ್ಲಲ್ಲಿ ಮರಗಳು ನೆಲಕ್ಕುರುಳುತ್ತಿವೆ. ಕುಶಾಲನಗರದಿಂದ ಸೋಮವಾರಪೇಟೆಗೆ ವಿದ್ಯುತ್ ಸರಬರಾಜು ಕಲ್ಪಿಸುವ ಲೈನ್‍ಗಳ ಮೇಲೆ ಮರ ಉರುಳುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಆಗಾಗ್ಗೆ ವಿದ್ಯುತ್ ವ್ಯತ್ಯಯವಾಗುತ್ತಿದೆ.

ಬಸವನಕೊಪ್ಪ-ಅಜ್ಜಳ್ಳಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳೀಯರು ಮರವನ್ನು ತೆರವುಗೊಳಿಸಿದ ನಂತರ ವಾಹನ ಸಂಚಾರ ಸುಗಮವಾಯಿತು.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿಯಲ್ಲಿ ಭಾರೀ ಮಳೆಯಾಗುತ್ತಿದ್ದರೆ ನೇರುಗಳಲೆ, ಗಣಗೂರು, ಬಾಣಾವರ, ಸಿದ್ದಲಿಂಗಪುರ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದೆ. ಶಾಂತಳ್ಳಿ, ಬೆಟ್ಟದಳ್ಳಿ, ತೋಳೂರುಶೆಟ್ಟಳ್ಳಿ ಭಾಗದಲ್ಲಿ ಎಡೆಬಿಡದೇ ಮಳೆಯಾಗುತ್ತಿದೆ.

ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯ ಕೊತ್ನಳ್ಳಿ, ಕುಡಿಗಾಣ, ಮಲ್ಲಳ್ಳಿ, ಕುಂದಳ್ಳಿ, ಬೀದಳ್ಳಿ, ಜಕ್ಕನಳ್ಳಿ, ಬೆಂಕಳ್ಳಿ ಸೇರಿದಂತೆ ಗರ್ವಾಲೆ, ಸೂರ್ಲಬ್ಬಿ, ಕುಂಬಾರಗಡಿಗೆ, ಕಿಕ್ಕರಳ್ಳಿ, ಬೆಟ್ಟದಕೊಪ್ಪ, ಹರಗ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದೆ.

ಎಡೆಬಿಡದೇ ಸುರಿಯುತ್ತಿರುವ ಮಳೆ ಹಾಗೂ ಗಾಳಿಯಿಂದಾಗಿ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕಾಫಿ ತೋಟದೊಳಗೆ ಸಿಲ್ವರ್ ಮರಗಳು ಗಿಡಗಳ ಮೇಲೆ ಬೀಳುತ್ತಿವೆ. ಇದರೊಂದಿಗೆ ಕಾಫಿ, ಏಲಕ್ಕಿ, ಶುಂಠಿ ಬೆಳೆಗಳು ಕೊಳೆರೋಗಕ್ಕೆ ತುತ್ತಾಗಿದ್ದು, ಅತೀ ಶೀತದಿಂದಾಗಿ ಕರಿಮೆಣಸು ಫಸಲು ನೆಲಕ್ಕಚ್ಚುತ್ತಿವೆ.

ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಿದ್ದಾಪುರದಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ನದಿ ತೀರದ ನಿವಾಸಿಗಳಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕರಡಿಗೋಡು ಗ್ರಾಮದಲ್ಲಿ ಪ್ರವಾಹದ ನೀರಿಗೆ ಸಿಲುಕಿ ಕರಡಿಗೋಡು ರಸ್ತೆ ಜಲಾವೃತಗೊಂಡಿದೆ. ಇದರಿಂದಾಗಿ ಆ ಭಾಗದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕರಡಿಗೋಡುವಿನ ಚಿಕ್ಕನಹಳ್ಳಿ ಪೈಸಾರಿಯ ಕಿರು ಸೇತುವೆ ಮುಳುಗಡೆಗೊಂಡಿದೆ. ಕರಡಿಗೋಡು ಇಳಿಜಾರು ಪ್ರದೇಶದಲ್ಲಿರುವ ಒಂದೆರಡು ಮನೆಗಳ ಒಳಗೆ ನೀರು ನುಗ್ಗಿದೆ.

ಮಳೆಯು ಮುಂದುವರೆದಲ್ಲಿ ಮತ್ತಷ್ಟು ಮನೆಗಳು ಜಲಾವೃತಗೊಳ್ಳುವ ಸಾಧ್ಯತೆ ಇದೆ. ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ, ಕೊಂಡಂಗೇರಿ ಭಾಗಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಎಂ.ಎಲ್ ಹರೀಶ್ ಹಾಗೂ ಗ್ರಾಮಲೆಕ್ಕಿಗ ಓಮಪ್ಪ ಬಣಾಕರ್, ಸಿದ್ದಾಪುರ ಪಂಚಾಯತ್ ಲೆಕ್ಕಾಧಿಕಾರಿ ಗುರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ನದಿ ತೀರದ ನಿವಾಸಿಗಳಿಗೆ ಪ್ರವಾಹದ ನೀರು ಏರಿಕೆಯಾದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಕಂದಾಯ ಇಲಾಖೆಯ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಂದಾಯ ಪರಿವೀಕ್ಷಕ ಹರೀಶ್ ತಿಳಿಸಿದ್ದಾರೆ. ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಸ್ಥಳದಲ್ಲೇ ಮೊಕ್ಕಂ ಹೂಡಿದ್ದಾರೆ. ಗಾಳಿ ಮಳೆಗೆ ಸಿಲುಕಿ ಗುಹ್ಯ ಗ್ರಾಮದ ಹೊಸೋಕ್ಲು ಪೆಮ್ಮಯ್ಯ ಎಂಬವರ ದನದ ಕೊಟ್ಟಿಗೆಯು ಕುಸಿದು ಬಿದ್ದಿದ್ದು, ಭಾಗಶಃ ಹಾನಿಯಾಗಿದೆ. ಈ ಬಗ್ಗೆ ಕಂದಾಯ ಇಲಾಖಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನೆಲ್ಯಹುದಿಕೇರಿ, ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದಲ್ಲಿ ಕಾವೇರಿ ನದಿಯಲ್ಲಿ ನೀರು ಏರಿಕೆಯಾಗಿ ಪ್ರವಾಹದ ಭೀತಿ ಎದುರಾಗಿದೆ. ಸ್ಥಳಕ್ಕೆ ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಅಧಾರಿತ ವಾಗಿ ಜೋಳದ ಬೆಳೆಯನ್ನು ನೂರಾರು ರೈತರು ಬೆಳೆಯುತ್ತಾರೆ. ಈ ಸಾಲಿನಲ್ಲಿ ಜೋಳದ ಬೆಳೆಯು ಉತ್ತಮವಾಗಿ ಬಂದಿದ್ದು ಈಗಾಗಲೇ ಕಟಾವು ಮಾಡಲು ಸಿದ್ದವಾಗಿದ್ದು, ಅನೇಕ ರೈತರು ಕಟಾವು ಮಾಡಿ ಮಾರಾಟ ಮಾಡಲು ಸಿದ್ಧರಾಗಿದ್ದಾರೆ. ಆದರೆ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಬಾರಿ ಕಡಿಮೆ ಬೆಲೆಗೆ ಜೋಳವನ್ನು ಖರೀದಿಸಲು ವ್ಯಾಪಾರಿಗಳು ಬರುತ್ತಿದ್ದಾರೆ. ಇದರಿಂದಾಗಿ ಈ ಭಾಗದ ರೈತರು ಬೆಲೆ ಕುಸಿತದಿಂದಾಗಿ ಸಂಕಷ್ಟಕ್ಕೊಳಗಾಗಿದ್ದಾರೆ.

ಹೆಬ್ಬಾಲೆ, ಶಿರಂಗಾಲ, ಕೂಡಿಗೆ, ತೊರೆನೂರು, ಸಿದ್ದಲಿಂಗಪುರ, ಸೀಗೆ ಹೊಸೂರು, ಆರನೇ ಹೊಸಕೋಟೆ, ಅಳುವಾರ ಸೇರಿದಂತೆ ಎಂಟು ಗ್ರಾಮ ಪಂಚಾಯಿತಿಯ 48 ಉಪ ಗ್ರಾಮದಲ್ಲಿ ಹೆಚ್ಚಾಗಿ ಜೋಳವನ್ನು ಬೆಳೆದಿದ್ದಾರೆ. ಗಾಳಿಯಿಂದಾಗಿ ಜೋಳವು ನೆಲಕಚ್ಚಿದ್ದು, ಅಳಿದುಳಿದ ಬೆಳೆಗೂ ಬೆಲೆಯಿಲ್ಲದೆ ಸಮಸ್ಯೆ ಎದುರಾಗಿದೆ.

ಜೋಳದ ಬೆಳೆಗೆ ಸರಾಸರಿ ರೂ. 1.800 ರಿಂದ 2000 ಬೆಲೆ ಕೇವಲ ರೂ. 750-800ಕ್ಕೆ ಕುಸಿತ ಉಂಟಾಗಿದೆ.

ಕೊರೊನಾದ ನಡುವೆ ಮಳೆಯಿಂದಾಗಿ ಬೆಲೆ ಕುಸಿತದಿಂದ ಬೇಸಾಯ ಮಾಡಿದ ಸಾಲವನ್ನು ಸಹಕಾರ ಸಂಘಗಳಿಗೆ ಕಟ್ಟಲು ಸಾದ್ಯವಾಗುತ್ತಿಲ್ಲ. ಅಲ್ಲದೆ ಈ ಬಾರಿ ಬೇಸಾಯ ಮಾಡಿದ ಅರ್ಧ ಭಾಗದ ಹಣವು ಸಹ ಸಿಕ್ಕುತ್ತಿಲ್ಲಾ ಎಂದು ಈ ವ್ಯಾಪ್ತಿಯ ರೈತರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ನಾಟಿ ಗದ್ದೆಗಳು ಜಲಾವೃತ

ಕೂಡಿಗೆ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಮತ್ತು ಹಾರಂಗಿ ನದಿಗಳ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಕೂಡಿಗೆ ಸಂಗಮದಿಂದ ಮುಂದೆ ಹರಿಯುವ ತಗ್ಗು ಪ್ರದೇಶದ ಗದ್ದೆಗಳಿಗೆ ನೀರು ನುಗ್ಗಿ ನೂರಾರು ಎಕರೆ ನಾಟಿ ಪ್ರದೇಶ ಜಲಾವೃತಗೊಂಡಿದೆ.

ಕೂಡಿಗೆ-ಕಣಿವೆ ಮಧ್ಯ ಭಾಗದ ತಗ್ಗು ಪ್ರದೇಶದ ದಿವಾಕರ್, ಸಂತೋಷ್, ಕೃಷ್ಣೆಗೌಡ, ಪ್ರಭಾಕರ ಎಂಬವರ ಭತ್ತದ ನಾಟಿ ಗದ್ದೆಗಳಿಗೆ ನದಿಯ ನೀರು ನುಗ್ಗಿದೆ. ಹೆಬ್ಬಾಲೆ ಸಮೀಪದ ಕರಳಹಳ್ಳ ಎಂಬ ಪ್ರದೇಶದಲ್ಲಿ ನಾಟಿ ಮತ್ತು ಸಮೀಪದ ಜೋಳದ ಬೆಳೆಯು ಜಲಾವೃತಗೊಂಡಿದೆ.

ರಸ್ತೆ ಸಂಪರ್ಕ ಕಡಿತ

ಸಿದ್ದಾಪುರದ ಕರಡಿಗೋಡು ಗ್ರಾಮದಲ್ಲಿ ಪ್ರವಾಹ ನೀರು ರಸ್ತೆಗೆ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ ನದಿ ತೀರದ ನಿವಾಸಿಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಸಿದ್ದಾಪುರ ಕರಡಿಗೋಡು ಚಿಕ್ಕನಹಳ್ಳಿ ಬಳಿ ರಸ್ತೆ ಮುಳುಗಡೆ ಗೊಂಡಿದೆ.

ಗೋಣಿಕೊಪ್ಪಲು: ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಗಾಳಿಗೆ ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂದಾಯ ಕಚೇರಿ ಸಮೀಪದಲ್ಲಿ ಕಸ ವಿಲೇವಾರಿ ಜಾಗದಲ್ಲಿ ಅಳವಡಿಸಿರುವ ತಡೆಗೋಡೆ ಶೀಟ್ ಸಂಪೂರ್ಣ ಜಖಂಗೊಂಡಿದೆ. ವಿಪರೀತ ಗಾಳಿ ಬೀಸುತ್ತಿರುವುದರಿಂದ ಸಮೀಪದ ಅಂಗಡಿಯ ಶೀಟ್ ಕೂಡ ಹಾರಿ ಹೋಗಿವೆ.

ಒಂದೇ ಸಮನೆ ಗಾಳಿ ಸಹಿತ ಮಳೆ ಸುರಿಯುತ್ತಿರುವುದರಿಂದ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಜನ ಸಂಚಾರ ವಿರಳವಾಗಿತ್ತು. ಖಾಸಗಿ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಅಷ್ಟಾಗಿ ಕಂಡು ಬರಲಿಲ್ಲ. ಕೆಲವು ಗ್ರಾಮೀಣ ಭಾಗಗಳಿಗೆ ತೆರಳಬೇಕಾದ ಖಾಸಗಿ ಬಸ್‍ಗಳು ಪ್ರಯಾಣಿಕರಿಲ್ಲದೆ ಸಂಚಾರ ರದ್ದುಪಡಿಸಿದ್ದವು. ನಗರದಲ್ಲಿ ಹರಿಯುತ್ತಿರುವ ಕೀರೆ ಹೊಳೆಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಗಾಳಿಯಿಂದಾಗಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬೀಳುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿತ್ತು. ಚೆಸ್ಕಾಂನ ಸಿಬ್ಬಂದಿ ಮಳೆ ಗಾಳಿಯನ್ನು ಲೆಕ್ಕಿಸದೆ ಕೆಲಸದಲ್ಲಿ ನಿರತರಾಗಿದ್ದರು.

ನಾಪೋಕ್ಲು: ನಾಲ್ಕುನಾಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೋಮವಾರವೂ ಮಳೆ ಸುರಿಯಿತು. ಇಂದು ಬೆಳಗ್ಗಿನಿಂದಲೇ ಬಿರುಸಿನಿಂದ ಸುರಿದ ಮಳೆ ಮಧ್ಯಾಹ್ನದ ವೇಳೆಗೆ ಕೊಂಚ ಪ್ರಮಾಣದಲ್ಲಿ ಇಳಿಮುಖಗೊಂಡರೂ ನಿರಂತರವಾಗಿ ಸುರಿದ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕಾವೇರಿ ನದಿನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದ್ದು, ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಚೆರಿಯಪರಂಬು, ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಆಗಸ್ಟ್ ಮೊದಲ ವಾರ ಸುರಿದ ಬಿರುಸಿನ ಮಳೆಗೆ ಚೆರಿಯಪರಂಬುವಿನ ಮನೆಗಳು ಜಲಾವೃತಗೊಂಡಿದ್ದು, ಇಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸಿದ್ದರು. ಇದೀಗ ಮತ್ತೆ ಕಾವೇರಿ ನದಿನೀರಿನ ಪ್ರವಾಹ ಏರುತ್ತಿದ್ದು ಚೆರಿಯಪರಂಬು ಜಲಾವೃತಗೊಳ್ಳುವ ಭೀತಿ ಎದುರಾಗಿದೆ.

ಹಲವು ಗ್ರಾಮಗಳಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳು ಜಲಾವೃತವಾಗಿದೆ. ಕಾವೇರಿ ನದಿ ತಟದ ಗದ್ದೆಗಳಲ್ಲಿ ನೀರು ತುಂಬಿದ್ದು ಪೈರುಗಳು ನಾಶವಾಗುವ ಪರಿಸ್ಥಿತಿ ಉಂಟಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಲವೆಡೆ ನಾಟಿ ಮಾಡಿದ್ದ ಪೈರುಗಳು ಹಾನಿಗೊಳಗಾಗಿದ್ದು ಹಲವರು ಮರುನಾಟಿ ಮಾಡಿದ್ದರು. ಇದೀಗ ಮತ್ತೆ ಪ್ರವಾಹದಿಂದ ಭತ್ತದ ಕೃಷಿಗೆ ಧಕ್ಕೆ ಉಂಟಾಗಲಿದೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಹಾರಂಗಿ ಜಲಾಶಯ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.56 ಅಡಿಗಳು, ಕಳೆದ ವರ್ಷ ಇದೇ ದಿನ 2858.13 ಅಡಿ. ಇಂದಿನ ನೀರಿನ ಒಳಹರಿವು 8666 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 1298 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 11854, ನಾಲೆಗೆ 500. ಕಳೆದ ವರ್ಷ ಇದೇ ದಿನ ನದಿಗೆ 1675, ನಾಲೆಗೆ 1250 ಕ್ಯುಸೆಕ್ ನೀರು ಬಿಡಲಾಗಿತ್ತು.

ಮುಂದುವರೆದ ಮಳೆ

ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾಗಮಂಡಲ, ಶಾಂತಳ್ಳಿ, ಮಡಿಕೇರಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ.

ನಾಡಿನ ಜೀವನಾಡಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹಾರಂಗಿ ಜಲಾಶಯಕ್ಕೂ ಸಹ ಹೆಚ್ಚಿನ ಒಳಹರಿವು ನೀರು ಬರುತ್ತಿದೆ.

ಆಗಸ್ಟ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೆಚ್ಚು ಹಾನಿ ಸಂಭವಿಸಿತ್ತು. ಬಳಿಕ ಕೆಲ ದಿನಗಳಿಂದ ಬಿಡುವು ಪಡೆದಿದ್ದ ಮಳೆ. ಮತ್ತೆ ಬಿರುಸುಗೊಂಡಿದೆ. ಜೊತೆಗೆ ವಿಪರೀತ ಶೀತ ಗಾಳಿ ಬೀಸುತ್ತಿದೆ.

ಅಲ್ಲದೆ ಶನಿವಾರಸಂತೆ ಮಾರ್ಗದ ರಸ್ತೆಯಲ್ಲಿ ಮರ ಬಿದ್ದಿದ್ದು, ಮರವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವುಗೊಳಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಲಾಗಿದೆ.

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕಳೆದ ಕೆಲವು ದಿನಗಳಲ್ಲಿ 40 ರಿಂದ 50 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹೆಚ್ಚಿನ ಹಾನಿ ಸಂಭವಿಸಿಲ್ಲ. ಅಲ್ಲದೆ ಯಾವುದೇ ಟ್ರಾನ್ಸ್ ಫಾರ್ಮರ್ ಗಳಿಗೂ ಹಾನಿ ಸಂಭವಿಸಿಲ್ಲ ಎಂದು ಸೆಸ್ಕ್ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಮಾಹಿತಿ ನೀಡಿದ್ದಾರೆ.

ವಿದ್ಯುತ್ ಕಂಬ ಬಿದ್ದು ಹಾನಿಗೀಡಾದ ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿ, ಸೆಸ್ಕ್ ತಂಡ ಅಲ್ಲಿನ ಹಾನಿಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಲ್ಲದೆ ಜಿಲ್ಲೆಯ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಜಿಲ್ಲಾಡಳಿತ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದು, ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ 24x7 ಕಂಟ್ರೋಲ್ ರೂಂ ಸಂಖ್ಯೆ 0827-221077, ವ್ಯಾಟ್ಸ್‍ಆಪ್ ಸಂಖ್ಯೆ 8550001077ನ್ನು ಸಂಪರ್ಕಿಸಬಹುದು.

ಪೆÇನ್ನಂಪೇಟೆ : ಪೆÇನ್ನಂಪೇಟೆ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಇಲ್ಲಿಗೆ ಸಮೀಪದ ಬಲ್ಯಮುಂಡೂರು ಗ್ರಾಮದ ಕೊಲ್ಲಿ ತೋಡು ತುಂಬಿ ಹರಿಯುತ್ತಿದೆ. ಸುತ್ತ ಮುತ್ತಲಿನ ಗದ್ದೆಗಳು ಜಲಾವೃತಗೊಂಡಿವೆ. ಭತ್ತದ ಪೈರುಗಳು ನೀರಿನಲ್ಲಿ ಮುಳುಗಿ ಹೋಗಿದ್ದು, ಮಳೆ ಇದೇ ರೀತಿ ಮುಂದುವರೆದರೆ ಪೈರುಗಳು ಕೊಳೆಯುವ ಸಾಧ್ಯತೆಯಿದೆ.

ಶನಿವಾರಸಂತೆ : ಶನಿವಾರಸಂತೆ ಪಟ್ಟಣ ಹಾಗೂ ಹೋಬಳಿಯಾದ್ಯಂತ ಸೋಮವಾರ ಬಿಡುವು ನೀಡುತ್ತಾ ಸಾಧಾರಣ ಮಳೆ ಸುರಿಯತು. ಮಳೆಗಿಂತಲು ಗಾಳಿ ರಭಸವಾಗಿ ಬೀಸುತ್ತಿದ್ದು, ಅಲ್ಲಲ್ಲಿ ರಸ್ತೆ ಬದಿ ಮರಗಳು ಧರೆಗುರುಳಿದೆ.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಬಿಳಾಹ, ಕಿರಿಬಿಳಾಹ, ಚೆನ್ನಾಪುರ, ಕಾಜೂರು, ಮಾದ್ರೆ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಕೊಡ್ಲಿಪೇಟೆ ಹೋಬಳಿಯಾದ್ಯಂತ ಮಳೆಯಾಗಿದೆ. ಭಾರಿ ಗಾಳಿ ಮಳೆ - ಶೀತ ವಾತಾವರಣದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಿತ್ರ-ವರದಿ : ಕೆ.ಡಿ. ಸುನಿಲ್, ವಿಜಯ್, ವಾಸು, ನಾಗರಾಜಶೆಟ್ಟಿ, ಜಗದೀಶ್, ದುಗ್ಗಳ, ಚನ್ನನಾಯಕ, ನರೇಶ್.