ಕನಿಷ್ಟ 20 ಸೆಕೆಂಡ್ ಸ್ಯಾನಿಟೈಸರ್‍ನಿಂದ ಕೈತೊಳೆದುಕೊಳ್ಳಿ. ಬೆರಳಿನ ಸೆರೆಸೆರೆ ಉಜ್ಜಿಕೊಳ್ಳಿ. ಕಾಟಾ ಚಾರಕ್ಕೆ ಕೈ ಒರೆಸಿಕೊಳ್ಳುವುದರಿಂದ ಕೈಯಲ್ಲಿ ಅಂಟಿರಬಹುದಾದ ವೈರಸನ್ನು ತೊಡೆಯಲು ಸಾಧ್ಯವಿಲ್ಲ. ಸೋಪ್‍ನಿಂದ ಕೈತೊಳೆಯುವವರು ಕನಿಷ್ಟ 45 ಸೆಕೆಂಡ್ ಕೈ ತೊಳೆಯಿರಿ. ಕೈ ತೊಳೆದಾದ ಮೇಲೂ ಬೇರೆ ವಸ್ತು, ವ್ಯಕ್ತಿಗಳನ್ನು ಮುಟ್ಟುವಾಗ ಕನಿಷ್ಟ 1 ನಿಮಿಷ ಸಮಯ ನೀಡಿ. ಸೋಂಕಿನ ವೈರಾಣು ಸಾಯಲು ಅಷ್ಟು ಹೊತ್ತು ಬೇಕೇ ಬೇಕು.

ಎಷ್ಟೇ ಆತ್ಮೀಯರಿರಲಿ. ಸಾಮಾಜಿಕ ಅಂತರ ಕಾಪಾಡಿ ಕೊಂಡು ಅವರೊಂದಿಗೆ ಮಾತನಾಡಿ, ಮೊದಲಿನಂತೆ ಹತ್ತಿರದಲ್ಲಿಯೇ ಮೈಗಂಟಿಕೊಂಡು ನಿಲ್ಲುವ ಸಾಹಸ ಈ ದಿನಗಳಲ್ಲಿ ಒಳ್ಳೆಯದಲ್ಲ. ಸೋಂಕು ತಗುಲಿದರೆ ನಿಮ್ಮ ಆರೋಗ್ಯ ಸಂರಕ್ಷಣೆಗೆ ಯಾರೂ ಬರುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.

ಸೋಂಕು ತಗುಲಿ ಗ್ರಹ ಸಂಪರ್ಕ ತಡೆಯಲ್ಲಿರಬೇಕಾದ ಸಂದರ್ಭ ಅಲ್ಲಿ ಯಾರೂ ಗಮನಿಸುವವರು ಇಲ್ಲ ಎಂದು ಮದ್ಯಪಾನ ಸೇವನೆ, ಸಿಗರೇಟ್ ಸೇವನೆ ಖಂಡಿತಾ ಮಾಡದಿರಿ. ಸೋಂಕಿನ ಅತಿಯಾದ ಲಕ್ಷಣಗಳಿಲ್ಲ ಎಂದರೆ ನೀವು ಸುರಕ್ಷಿತರು ಎಂದೇನಲ್ಲ. ಆರೋಗ್ಯ ಸುಧಾರಿಸುವ ಹಂತದಲ್ಲಿ ಅನಾವ ಶ್ಯಕವಾಗಿ ಅಪಾಯ ತಂದುಕೊಳ್ಳದಿರಿ.

ಸೋಂಕು ತಗುಲಿದರೆ ಕೂಡಲೇ ಬೇರೆಯವರಿಗೂ ವಿಷಯ ತಿಳಿಸಿ. ಸೋಂಕು ತಗುಲಿದೆ ಎಂದರೆ ಅದು ಅವಮಾನಕಾರಿಯಲ್ಲ. ಜೀವನ ಮುಖ್ಯ. ಸೋಂಕು ಗುಣಮುಖ ವಾಗುತ್ತದೆ. ಇದನ್ನು ಮನಸ್ಸಿನಲ್ಲಿರಿಸಿ ಸೋಂಕಿನ ವಿಚಾರ ಸಂಬಂಧಿಕರಿಗೆ ತಿಳಿಸಿ. ಅವರು ನಿಮ್ಮ ಸಂಪರ್ಕಕ್ಕೆ ಬಾರದಂತೆ ತಡೆಗಟ್ಟಿ.

ಸೋಂಕು ತಗುಲಿದ ಕೂಡಲೇ ತನಗೆ ಬಂದ ಸೋಂಕನ್ನು ಇತರರಿಗೂ ವ್ಯಾಪಿಸಿ ಮಾನಸಿಕ ಸಂತೋಷ ಪಡುವವರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಿದೆ. ಇದು ಮಾನಸಿಕ ಕಾಯಿಲೆ ಯಾಗಿಯೂ ಗುರುತಿ ಸಲ್ಪಟ್ಟಿದೆ. ಹೀಗಾಗಿಯೇ ಸೋಂಕು ಬಂದವರು ಹತ್ತಿರವಿದ್ದಾರೆ ಎಂಬ ಅನುಮಾನ ಯಾವುದೇ ರೀತಿಯ ಸೋಂಕು ಲಕ್ಷಣಗಳಿಂದ ನಿಮಗೆ ಬಂದದ್ದೇ ಆದಲ್ಲಿ ಕೂಡಲೇ ಅಲ್ಲಿಂದ ದೂರವಾಗಿ.

ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಚಿಕಿತ್ಸೆಗೊಳಗಾಗಿ. ಆಸ್ಪತ್ರೆಗೆ ದಾಖಲಾಗಿ. ವೈದ್ಯರು ಸೂಚಿಸಿದರೆ ಮಾತ್ರ ಗ್ರಹಸಂಪರ್ಕ ತಡೆಯಲ್ಲಿರಿ. ಸೋಂಕಿನ ಲಕ್ಷಣಗಳಿದ್ದೂ ಅತ್ತಿಂದಿತ್ತ ಸುತ್ತಾಟ ಬೇಡ. ಎಲ್ಲಕ್ಕಿಂತ ಮುಖ್ಯ ನೀವು ಗಂಟಲ ದ್ರವ ಮಾದರಿ ನೀಡಿ ಫಲಿತಾಂಶಕ್ಕೆ ಕಾಯುತ್ತಿರುವ ಸಂದರ್ಭ ಎಲ್ಲಿಯೂ ಸುತ್ತಾಡದಿರಿ. ಮನೆಯಲ್ಲಿಯೇ ಸಂಪರ್ಕ ತಡೆಯಲ್ಲಿರಿ.

ಏಕೆಂದರೆ, ಅಕಸ್ಮಾತ್ ಪಾಸಿಟಿವ್ ಇರುವುದು ಖಚಿತಪಟ್ಟರೆ ನೀವು ಸುತ್ತಾಡಿ ಅದನ್ನು ಮತ್ತಷ್ಟು ಮಂದಿಗೆ ಹಬ್ಬಿಸುವ ಎಲ್ಲಾ ಸಾಧ್ಯತೆಗಳಿವೆ. ಹಾಗೇ ಕೊರೊನಾ ಸೋಂಕು ಗುಣಮುಖರಾದ ಬಳಿಕವೂ 14 ದಿನ ಆಸ್ಪತ್ರೆ, 14 ದಿನ ಕಡ್ಡಾಯವಾಗಿ ಸಂಪರ್ಕ ತಡೆಯಲ್ಲಿರಿ. ಸೋಂಕಿನ ವೈರಾಣು ಸಂಪೂರ್ಣವಾಗಿ ನಿಮ್ಮ ದೇಹದಿಂದ ನಿವಾರಣೆಯಾಗಿರುವುದಿಲ್ಲ. ಹೀಗಾಗಿ ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯೂ ಇಲ್ಲದಿಲ್ಲ. ನೀವು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುತ್ತಿರಿ ವಿನಾ ಇದರರ್ಥ ಸೋಂಕಿನಿಂದ ಸಂಪೂರ್ಣ ಗುಣಮುಖ ಆಗಿದ್ದೇನೆ ಎಂದಲ್ಲ.

ಸರ್ಕಾರ ಕಾರ್ಯಕ್ರಮ, ಸಮಾರಂಭ ಆಯೋಜಿಸಲು ಅನುಮತಿ ನೀಡಿದೆ. ಹಾಗೆಂದು ನೂರಾರು ಸಂಖ್ಯೆಯಲ್ಲಿ ಸೇರಿಕೊಂಡು ಸೋಂಕು ಹಬ್ಬಿಸುವ ಕಾರ್ಯಕ್ರಮವನ್ನಾಗಿ ಅದನ್ನು ಪರಿವರ್ತಿಸಬೇಡಿ. ಮದುವೆಗಳು, ಕಾರ್ಯಕ್ರಮಗಳು ಸರಳವಾಗಿ ಕಡಿಮೆ ಜನರಿಂದ ಸಂಭ್ರಮದಿಂದಲೇ ನಡೆಯಲಿ. ಇಂತಹ ಆಯೋಜನೆಯ ಮೂಲಕ ಸೋಂಕು ತಗುಲಿ ಅದು ನೂರಾರು ಜನರಿಗೆ ವ್ಯಾಪಿಸುವಲ್ಲಿ ಕಾರಣರಾಗಬೇಡಿ. ಅಗತ್ಯ, ಇದ್ದಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ತೆರಳಿ. ಹೋಗದಿದ್ದರೆ ಆಯೋಜಕರು ಏನು ಬೇಕಾದರೂ ತಿಳಿದುಕೊಳ್ಳಲಿ. ನಿಮ್ಮ ಆರೋಗ್ಯ ರಕ್ಷಣೆ ಮುಖ್ಯವಾಗ ಬೇಕೇ ವಿನಾ ಆಯೋಜಕರ ಮನಸಂತೃಪ್ತಿಯ ಸನ್ನಿವೇಶ ಈಗಿಲ್ಲ.

ಕೆಲಸಕಾರ್ಯ ಇಲ್ಲದೇ ಹೋದಲ್ಲಿ ಸುಖಾಸುಮ್ಮನೆ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಬೇಡಿ. ಇದರಿಂದ ಸೋಂಕು ತಗುಲಿದಾತ ನಿಮ್ಮ ಬಳಯೇ ಸಂಚರಿಸಿ ನಿಮಗೂ ಸೋಂಕು ತಗುಲಿಸುವ ಸಾಧ್ಯತೆಯಿದೆ. ಗಾಳಿ ಯಿಂದಲೂ ಕೊರೊನಾ ಸೋಂಕು ಬರುತ್ತದೆ ಎಂದು ಅಧ್ಯಯನಗಳ ವರದಿ ನಿರ್ಲಕ್ಷಿಸುವಂತದ್ದಲ್ಲ.

ಬಂಧುಮಿತ್ರರ ಮನೆಗಳಿಗೆ ಈ ದಿನಗಳಲ್ಲಿ ಹೋಗುವುದನ್ನು ತಡೆಗಟ್ಟಿ. ನೀವು ಯಾರ ಮನೆಗೂ ಈ ಸಂದರ್ಭ ಅಪೇಕ್ಷಿತ ಅತಿಥಿಗಳಲ್ಲ. ಪರವಾಗಿಲ್ಲ.. ಬನ್ನಿ ಎಂದ ಕೂಡಲೇ ದೌಡಾಯಿಸುವುದು ಕೊರೊನಾ ದಿನಗಳಲ್ಲಿ ಸೂಕ್ತವಲ್ಲ. ಯಾರಿಗೆ ಗೊತ್ತು ನಿಮ್ಮ ಆಗಮನ ಆತಿಥೇಯರ ಮನಸ್ಸಿನಲ್ಲಿ ಎಷ್ಟೊಂದು ಆತಂಕಕ್ಕೆ ಕಾರಣವಾಗಿರಬಹುದೋ? ಅಕಸ್ಮಾತ್ ಆ ಮನೆಯವರಿಗೆ ಸೋಂಕು ತಗುಲೀತು ಮತ್ತು ಅದು ನಿಮ್ಮಿಂದ ಬಂತು ಎಂಬ ಭಾವನೆ ಅವರಲ್ಲಿದ್ದೀತು ಎಂದುಕೊಳ್ಳಿ. ಅವರು ನಿಮ್ಮನ್ನು ನೋಡುವ ಭಾವನೆಯೇ ಬದಲಾದೀತು. ಬೇಕಾ ಇದೆಲ್ಲಾ?!

ವಾಹನಗಳಲ್ಲಿ ಸಾಗುವಾಗ ನೀವು ಒಬ್ಬರೇ ಇದ್ದರೆ ಮಾಸ್ಕ್ ಧರಿಸುವಿಕೆ ಅಗತ್ಯವಿಲ್ಲ. ಆದರೆ ಬಸ್ ಸೇರಿದಂತೆ ಬೇರೆ ವಾಹನಗಳಲ್ಲಿ ನಿಮ್ಮೊಂದಿಗೆ ಬೇರೆ ಪ್ರಯಾಣಿಕರಿದ್ದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಿ.

ಕೊರೊನಾ ಸೋಂಕು ತಗುಲಿ ಗ್ರಹ ಸಂಪರ್ಕ ತಡೆಯಲ್ಲಿರುವ ಸಂದರ್ಭ ಮಾಸ್ಕ್ ಧರಿಸಬೇಡಿ. ಏಕೆಂದರೆ ಸೋಂಕಿನಿಂದಾಗಿ ಅದಾಗಲೇ ನಿಮ್ಮ ದೇಹದೊಳಗೆ ಉಸಿರಾಟದ ಏರಿಳಿತದ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇಂತಹ ಸಂದರ್ಭ ಮಾಸ್ಕ್ ಧರಿಸುವಿಕೆ ಉಸಿರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಗಂಭೀರ ಪರಿಣಾಮ ತರುವ ಸಾಧ್ಯತೆಯೂ ಇಲ್ಲದಿಲ್ಲ.

ಮನೆಗಳಿಗೆ ಅಂಚೆಯವರು, ಗ್ಯಾಸ್ ವಿತರಕರು, ಬಿಲ್ ಸಂಗ್ರಾಹಕರು. ಹೀಗೆ ಯಾರೇ ಬರಬೇಕಾದ ಪ್ರಮೇಯ ಬಂದಲ್ಲಿ ಮನೆಯೊಳಗೆ ಪ್ರವೇಶಿಸುವ ಮುನ್ನ ಸ್ಯಾನಿಟೈಸರ್ ನೀಡಿ ಬರಮಾಡಿಕೊಳ್ಳಿ. ಸ್ಯಾನಿಟೈಸೇಷನ್ ಮಾಡದೇ ಮನೆಯೊಳಗೆ ಯಾರೂ ಬಾರದಂತೆ ನೋಡಿಕೊಳ್ಳಿ.

ಹೊರಗಡೆ ಹೋಗಿ ಮನೆಗೆ ಬರುವ ಮುನ್ನ ನೀವೂ ಸ್ಯಾನಿಟೈಸೇಷನ್ ಮಾಡಿಕೊಳ್ಳಿ. ಹೊರಗಡೆ ತಿರುಗಾಡಿ ಮರಳಿದ ನಿಮ್ಮೊಂದಿಗೆ ನಿಮಗಾಗಿ ಮನೆಯೊಳಗಿರುವ ಕುಟುಂಬದವರ ಆರೋಗ್ಯವೂ ನಿಮಗೆ ಮುಖ್ಯ ವಾಗಿರಲಿ. ಹೊರಹೋಗಿ ಬಂದಾಗ ಬಿಸಿ ನೀರು ಸ್ನಾನ ಸೂಕ್ತವಾದದ್ದು.

ಕೊರೊನಾವನ್ನು ದೇಶದಿಂದ ತೊಲಗಿಸುವ ನಿಟ್ಟಿನಲ್ಲಿ ಖಂಡಿತಾ ಮುಂಜಾಗ್ರತಾ ಕ್ರಮಗಳನ್ನು ಪ್ರತಿಯೋರ್ವರೂ ಪಾಲಿಸಲೇಬೇಕು. ಕೊರೊನಾ ಸೋಂಕು ಭಾರತದ ಪಾಲಿಗೆ ದೊಡ್ಡ ಶತ್ರುವಿದ್ದಂತೆ. ಇಂತಹ ಶತ್ರುವನ್ನು ತೊಲಗಿಸುವ ಹೋರಾಟದಲ್ಲಿ ಪ್ರತಿಯೋರ್ವರೂ ಕೈಜೋಡಿಸಲೇಬೇಕಾಗಿದೆ.

ಜೈ ಭಾರತ್,.. ಜೈ ಜವಾನ್... ವಂದೇ ಮಾತರಂ... ಎಂದರೆ ಮಾತ್ರ ದೇಶಪ್ರೇಮವಲ್ಲ. ಈಗಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಸೋಂಕಿನ ಶತ್ರುವನ್ನು ಹೊಡೆದೋಡಿಸಲು ಆರೋಗ್ಯ ಸಂಬಂಧಿತ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ದೇಶಭಕ್ತಿ ಮೆರೆಯುವುದು ಖಂಡಿತಾ ಅಗತ್ಯ.

ಭಾರತ ನಮ್ಮದು. ದೇಶವಾಸಿಗರೂ ನಮ್ಮವರು... ನಮ್ಮ ಆರೋಗ್ಯದೊಂದಿಗೆ ದೇಶವಾಸಿಗಳ ಆರೋಗ್ಯ ಉಳಿದರೆ ಮಾತ್ರ ದೇಶ ಕೂಡ ಸುರಕ್ಷಿತವಾಗಿ ಇದ್ದೀತು. ಬೇಗನೇ ಕೊರೊನಾ ದೇಶದಿಂದ ತೊಲಗೀತು. ಎಲ್ಲವನ್ನೂ ನೀಡಿದ ಭಾರತಕ್ಕಾಗಿ ಈಗ ನಮ್ಮ ನಿಮ್ಮ ಕೊಡುಗೆ ಏನು? ಯೋಚಿಸಿ...! ಆತ್ಮಾವ ಲೋಕನಕ್ಕೆ ಇದು ಸೂಕ್ತ ದಿನಗಳು.

- ಅನಿಲ್ ಎಚ್.ಟಿ.

- ಮುಗಿಯಿತು.