ಇಂದು ವಿಶ್ವ ನಾಶದ ಅಂಚಿಗೆ ಬಂದು ತಲುಪಿದೆ ಎಂದರೆ ತಪ್ಪಾಗಲಾರದು. ಬಲಾಡ್ಯ ರಾಷ್ಟ್ರಗಳಿಗೆ ಇಂದು ಭೂದಾಹ, ಸಂಪತ್ತಿನ ದಾಹ, ಪ್ರತಿಷ್ಠೆಯ ವ್ಯಾಮೋಹ, ತಾನೇ ಈ ವಿಶ್ವದಲ್ಲಿ ಸೂಪರ್ ಪವರ್ ಆಗಬೇಕೆಂಬ ಹುಚ್ಚು ಹಂಬಲ. ಇವುಗಳ ಸ್ಪರ್ಧೆಗಳಲ್ಲಿ ಸಣ್ಣ-ಸಣ್ಣ ದೇಶಗಳು ಬಲಿಪಶುಗಳಾಗಿ ಹೋಗುವುವು. ದೊಡ್ಡ ದೊಡ್ಡ ದೇಶಗಳದ್ದೇ ಬಣಗಳಾಗಿ ಒಬ್ಬರನ್ನು ತುಳಿಯಲು ಇನ್ನೊಬ್ಬರು ಹೊಂಚು ಹಾಕುತ್ತಲೇ ಇರುವರು. ಬಣಗಳ ಮಧ್ಯೆ ಪೈಪೋಟಿ ತೀವ್ರವಾದಾಗ ತಾನೇ ಮೇಲಾಗಬೇಕೆಂಬ ಹಠ ಬಲವಾದಾಗಲೇ ವಿಶ್ವ ಯುದ್ಧವಾಗಿ ಬಿಡುವುದು. ಈಗಂತೂ ಬಹಳಷ್ಟು ರಾಷ್ಟ್ರಗಳು ಪರಮಾಣು ಬಾಂಬು ಗಳನ್ನು ಹೊಂದಿವೆ. ಕ್ಷಣಾರ್ಧದಲ್ಲೇ ಈ ಬಾಂಬುಗಳು ಭೂಮಿಯನ್ನು ಸರ್ವನಾಶ ಮಾಡಬಲ್ಲವು. ಮಾನವನ ಅಸ್ಥಿತ್ವವೇ ಇಲ್ಲದಂತಾಗಿ ಮಾನವನ ಕುರುಹು ಕೂಡ ಮುಂದೆ ದೊರೆಯದಂತಾಗಬಹುದು.

ಪ್ರಸ್ತುತ ಪರಿಸ್ಥಿತಿಯು ಬಹಳಷ್ಟು ಸೂಕ್ಷ್ಮ ಎನಿಸಿದೆ. ವಿಶ್ವದ ರಾಷ್ಟ್ರಗಳು ಎಚ್ಚೆತ್ತುಕೊಳ್ಳುವ ಸಮಯ ಇದಾಗಿದೆ. ಬಹಳಷ್ಟು ರಾಷ್ಟ್ರಗಳ ಮಧ್ಯೆ ಪರಸ್ಪರ ವೈರತ್ವ ಹದ್ದುಮೀರಿ ನಡೆಯುತ್ತಿದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿಯಿದೆ. ಇಂದು ಭಾರತದ ಮೇಲೆ ನೆರೆ ರಾಷ್ಟ್ರ ಚೀನಾ ಗಡಿ ಆಕ್ರಮಣ ಮಾಡಿ ಯುದ್ಧ ವೇರ್ಪಡುವ ಸ್ಥಿತಿ ನಿರ್ಮಾಣ ಮಾಡಿದೆ. ಭಾರತ ಮತ್ತು ಚೀನಾ ಎರಡೂ ಶಕ್ತಿಶಾಲಿ ರಾಷ್ಟ್ರಗಳೇ. ಹಾಗೇನಾದರೂ ಯುದ್ಧ ನಡೆದರೆ ಅದು ವಿಶ್ವ ಯುದ್ಧವೇ ಆಗಿ ಬಿಡುವ ಸಂಭವವಿದೆ. ಏಷ್ಯಾದ ಈ ಎರಡು ಪ್ರಬಲ ರಾಷ್ಟ್ರಗಳು ಈಗಾಗಲೇ ಯುದ್ಧ ತಯಾರಿ ನಡೆಸಿವೆ. ಸೂಪರ್ ಪವರ್ ಪಟ್ಟಕ್ಕಾಗಿ ಇಂದು ಅಮೇರಿಕಾ, ಚೀನಾ, ರಷ್ಯಾ ನಡುವೆ ಭಾರೀ ಪೈಪೋಟಿಯೇ ನಡೆದಿದೆ. ಇಂದು ಯುದ್ಧದಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಸಂಭವವಿದ್ದು, ಅದು ಮಾನವಕುಲ ನಾಶವಾಗಲು ಪ್ರಮುಖ ಕಾರಣವಾಗಲಿದೆ.

ಈಗಾಗಲೇ ಎರಡನೇ ಮಹಾಯುದ್ಧ ಭೀಕರತೆಯ ಪರಿಣಾಮವನ್ನು ಇನ್ನೂ ನಾವು ಕಾಣುತ್ತಲೇ ಇದ್ದೇವೆ. ಐದಾರು ವರ್ಷಗಳ ಕಾಲ ನಡೆದ ಈ ಯುದ್ಧದಲ್ಲಿ ಸುಮಾರು ಎಂದರೆ 2.50 ಕೋಟಿ ಸೈನಿಕರು ಮತ್ತು 3.5 ಕೋಟಿ ಜನಸಾಮಾನ್ಯರು ಪ್ರಾಣತ್ಯಾಗ ಮಾಡಿದರು. ಅಂದಿನ ವಿಶ್ವ ಜನಸಂಖ್ಯೆಯ ಸುಮಾರು ಶೇ. 3 ಭಾಗವಾಗಿತ್ತು. ಅಂದು ಯುದ್ಧಕ್ಕಾಗಿ ಮಿತ್ರ ರಾಷ್ಟ್ರಗಳು ಸುಮಾರು 2000 ಬಿಲಿಯನ್ ಡಾಲರ್ ಖರ್ಚು ಮಾಡಿದ್ದವು. ಎರಡೂ ಕಡೆಯ ಒಟ್ಟು ಖರ್ಚು 4 ಟ್ರಿಲಿಯನ್ ಡಾಲರ್ (ರೂ. 298 ಲಕ್ಷ ಕೋಟಿ) ಅಂದು 1941-1945 ಕಾಲದಲ್ಲಿ ಜಗತ್ತಿನ ಬಹಳಷ್ಟು ರಾಷ್ಟ್ರಗಳು ಮಿತ್ರ ಅಥವಾ ಶತ್ರು ರಾಷ್ಟ್ರಗಳ ಪಡೆಯಾಗಿ ಹೋರಾಡುತ್ತಿದ್ದವು.

ಭಾರತವು ಎರಡನೇ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯಾಗಿ ಪಾಲ್ಗೊಂಡು 87000 ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದರೆ, ಇದರಿಂದ 30 ಲಕ್ಷ ಜನ ಬಂಗಾಳದ ಭೀಕರ ಕ್ಷಾಮ, ಖಾಯಿಲೆ ಇತರ ಯುದ್ಧ ಸಂಬಂಧಿ ಕಾರಣಗಳಿಂದಾಗಿ ಪ್ರಾಣ ಬಿಟ್ಟರು. ಅನೇಕ ಸಾಮೂಹಿಕ ನರಮೇಧಗಳು ನಡೆದವು. 1945 ರ ಬೆಳಿಗ್ಗೆ ಜಪಾನ್ ದೇಶದ ಹಿರೋಶಿಮಾ-ನಾಗಸಾಕಿಗಳಿಗೆ ಬಾಂಬ್ ಹಾಕಲಾಯಿತು. ಅದೆಷ್ಟೋ ಸಾವು-ನೋವುಗಳಾಯಿತು. ‘ಅಟ್ಲಬಾಯಿ’ ಎಂಬ ಅಣುಬಾಂಬು ಹಾಕಿದ ಅಮೇರಿಕಾ ಮತ್ತೆ ಆಗಷ್ಟ್‍ನಲ್ಲಿ ‘ಫ್ಯಾಟ್‍ಮ್ಯಾನ್’ ಎಂಬ ಮತ್ತೊಂದು ಬಾಂಬನ್ನು ಹಾಕಿತು. ಇಲ್ಲಿ 2.25 ಲಕ್ಷಕ್ಕೂ ಹೆಚ್ಚು ಜಪಾನಿಯರು ಸತ್ತರು. ಇದೀಗ ಎರಡನೇ ಮಹಾಯುದ್ಧ ಮುಗಿದು 75 ವರ್ಷಗಳು ತುಂಬಿವೆ. ಆದರೆ ಆ ಕರಾಳ ನೆನಪುಗಳು ಇಂದಿಗೂ ಹಸಿಯಾಗಿಯೇ ಇವೆ. ಸತ್ತವರ ಸಮಾಧಿಯ ಮೇಲೆ ನೆಡುವ ವಿಜಯದ ಧ್ವಜ ಅದೊಂದು ವಿಜಯವೇ ಎಂಬ ಪ್ರಶ್ನೆ ಮೂಡುವುದು.

ಇಂದು ವಿಶ್ವ ಶಾಂತಿಯ ಮಹತ್ವವನ್ನು ಎಲ್ಲಾ ದೇಶಗಳೂ ಅರಿಯಬೇಕು. ಇಂದು ಕೊರೊನಾ, ಭೂಕಂಪ, ಪ್ರವಾಹ ಮುಂತಾದ ಕಾರಣಗಳಿಂದ ಇಡೀ ವಿಶ್ವವೇ ಕುಸಿದಂತಿದೆ. ಇಂತಹ ಸಂದರ್ಭಗಳಲ್ಲೂ ಕೆಲ ದೇಶಗಳು ಭೂದಾಹ, ಸಂಪತ್ತಿನ ದಾಹದಿಂದ ಕುಟಿಲ ತಂತ್ರಗಳ ಮೂಲಕ ವಿಶ್ವ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿವೆ. ಕ್ಷಣಾರ್ಧದಲ್ಲಿ ಈ ವಿಶ್ವ ನಾಶವಾಗಬಲ್ಲ ವಿನಾಶಕಾರೀ ಅಸ್ತ್ರಗಳು ಬಹಳಷ್ಟು ದೇಶಗಳ ಬಳಿಯಿದ್ದು, ಪರಸ್ಪರ ಶಾಂತಿ, ಸಹಭಾಳ್ವೆಯಿಂದ ಬಾಳಬೇಕಾದ ಅವಶ್ಯಕತೆಯಿದೆ. ವಿಶ್ವ ಶಾಂತಿ ಕದಡುವ ದೇಶಗಳಿಗೆ ಸರಿಯಾದ ಪಾಠವನ್ನು ಕಲಿಸಬೇಕಿದೆ. ಈಗ ಎಚ್ಚೆತ್ತುಕೊಳ್ಳದೇ ಹೋದರೆ ಮುಂದೊಂದು ದಿನ ಈ ಭೂಮಿ ನಾಶವಾಗುವುದಂತೂ ಖಂಡಿತ. ಮಾನವನ ಉಳಿವಿಗಾಗಿ ವಿಶ್ವ ಶಾಂತಿ ಎಂಬ ಕಲ್ಪನೆ ಯೊಂದಿಗೆ ವಿಶ್ವ ಶಾಂತಿ ದಿನಾಚರಣೆ ವಿಶ್ವದಾದ್ಯಂತ ಆಚರಣೆಯಾಗಲಿ.

- ಹರೀಶ್ ಸರಳಾಯ, ಮಡಿಕೇರಿ.