ಮಡಿಕೇರಿ, ಸೆ. 20 : ಕೊಡಗು ಜಿಲ್ಲೆಯಲ್ಲಿ ಹವಾಮಾನ ಇಲಾಖೆಯಿಂದ ಇನ್ನು ಎರಡು ದಿನ ರೆಡ್ ಅಲರ್ಟ್ ಘೋಷಣೆ ನಡುವೆ, ವ್ಯಾಪಕ ಮಳೆಯಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಗಾಳಿಯೊಂದಿಗೆ ವರುಣನ ಆರ್ಭಟ ಹೆಚ್ಚಾಗಿದ್ದು, ಜನರು ವಿದ್ಯುತ್ ಹಾಗೂ ನೆಟ್‍ವರ್ಕ್ ಆಡಚಣೆಯಿಂದ ದೂರ ಸಂಪರ್ಕ ತೊಂದರೆ ಎದುರಿಸುತ್ತಿದ್ದಾರೆ.ಜಿಲ್ಲೆಯಲ್ಲಿ ಅಧಿಕ ಮಳೆಯಾಗುವ ತಲಕಾವೇರಿ - ಭಾಗಮಂಡಲ ಹಾಗೂ ಉತ್ತರ ಕೊಡಗಿನ ಪುಷ್ಪಗಿರಿ ಶ್ರೇಣಿಯ ಶಾಂತಳ್ಳಿ ಸುತ್ತಮುತ್ತ ಹಾಗೂ ದಕ್ಷಿಣ ಕೊಡಗಿನ ಬಿರುನಾಣಿ, ಶ್ರೀಮಂಗಲ ಹೋಬಳಿಗಳಲ್ಲಿ ಮಳೆಯ ತೀವ್ರತೆಯಿಂದ ಜನ-ಜಾನುವಾರುಗಳಿಗೆ ಸಮಸ್ಯೆ ಎದುರಾಗಿದೆ ಎಂದು ಆ ಭಾಗದ ಜನತೆ ಮಾಹಿತಿ ನೀಡಿದ್ದಾರೆ.ಸರಾಸರಿ ಮಳೆ : ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 2.65 ಇಂಚು ಮಳೆ ದಾಖಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ಇತರೆಡೆಗಳಲ್ಲಿ 3.68 ಇಂಚು ಮಳೆಯಾಗಿದೆ. ಭಾಗಮಂಡಲ ವ್ಯಾಪ್ತಿಗೆ 6.88 ಇಂಚು, ಸಂಪಾಜೆ ಸುತ್ತಮುತ್ತ 6.46 ಇಂಚು, ಶಾಂತಳ್ಳಿ ಗ್ರಾಮೀಣ ಭಾಗದಲ್ಲಿ 3.34 ಇಂಚು ಮಳೆ ಸುರಿದಿದೆ. ಮಳೆ ವಿವರ : 24 ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 4.57 ಇಂಚು, ವೀರಾಜಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 1.89 ಇಂಚು, ಸೋಮವಾರ ಪೇಟೆ ತಾಲೂಕಿನಲ್ಲಿ 1.49 ಇಂಚು ಮಳೆಯಾಗಿದೆ.

ನಾಪೋಕ್ಲು ಸುತ್ತಮುತ್ತ 2.65 ಇಂಚು, ವೀರಾಜಪೇಟೆ 2.79 ಇಂಚು, ಹುದಿಕೇರಿ 2.67 ಇಂಚು, ಪೊನ್ನಂಪೇಟೆ ಹಾಗೂ ಬಾಳೆಲೆ ವ್ಯಾಪ್ತಿಯಲ್ಲಿ 1 ಇಂಚು, ಶ್ರೀಮಂಗಲ 2.28 ಇಂಚು ಹಾಗೂ ಅಮ್ಮತ್ತಿ ವ್ಯಾಪ್ತಿಗೆ 1.73 ಇಂಚು ಮಳೆಯಾಗಿದೆ.

ಇತ್ತ ಸುಂಟಿಕೊಪ್ಪ 1.73 ಇಂಚು, ಸೋಮವಾರಪೇಟೆ 1.37 ಇಂಚು, ಕುಶಾಲನಗರ 1.11 ಇಂಚು, ಕೊಡ್ಲಿಪೇಟೆ 1 ಇಂಚು ಹಾಗೂ ಶನಿವಾರಸಂತೆ

(ಮೊದಲ ಪುಟದಿಂದ) ವ್ಯಾಪ್ತಿಗೆ 0.59 ಇಂಚು ಮಳೆ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಮಳೆಯಿಂದ ಸಣ್ಣಪುಟ್ಟ ಸಮಸ್ಯೆಗಳ ಹೊರತು ಜಿಲ್ಲಾಡಳಿತಕ್ಕೆ ಮೂರು ತಾಲೂಕು ತಹಶೀಲ್ದಾರರುಗಳಿಂದ ನಿಖರ ದೂರುಗಳು ಬಂದಿಲ್ಲವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ. ತಲಕಾವೇರಿ - ಭಾಗಮಂಡಲ ಸೇರಿದಂತೆ ಜಿಲ್ಲೆಯ ಕೆಲವೆಡೆಗಳಲ್ಲಿ ಇನ್ನೆರಡು ದಿವಸ ಅಧಿಕ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ಮೇರೆಗೆ ನದಿ ಪಾತ್ರಗಳಲ್ಲಿ ಮುಂಜಾಗ್ರತೆ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.

ಸಂಗಮ ಜಲಾವೃತ : ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯೊಂದಿಗೆ ನಾಪೋಕ್ಲು - ಭಾಗಮಂಡಲ ಹಾಗೂ ಭಾಗಮಂಡಲ - ಮಡಿಕೇರಿ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಸ್ಥಗಿತಗೊಂಡಿದೆ.

ಅಲ್ಲದೆ ಕೊಡಗಿನಲ್ಲಿ ಬೀಡುಬಿಟ್ಟಿರುವ ಎನ್.ಡಿ.ಆರ್.ಎಫ್. ತಂಡ ಸದಾ ಜಾಗೃತವಿದ್ದು, ಯಾವುದೇ ತೊಂದರೆ ಎದುರಾದರೆ ಸ್ಥಳಕ್ಕೆ ಕರೆಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಪಪಡಿಸಿದ್ದಾರೆ.

ಕುಶಾಲನಗರ : ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಹರಿವಿನ ಪ್ರಮಾಣ ಏಕಾಏಕಿ ಏರಿಕೆ ಕಂಡು ಬಂದಿದೆ. ಒಂದೇ ದಿನದ ಅವಧಿಯಲ್ಲಿ ನದಿಯಲ್ಲಿ 15 ಅಡಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿದ್ದು ನದಿ ತಗ್ಗು ಪ್ರದೇಶದ ಬಡಾವಣೆ ಜನತೆ ಮತ್ತು ಕೃಷಿಕರು ಆತಂಕಕ್ಕೆ ಒಳಗಾಗಿರುವುದು ಗೋಚರಿಸಿದೆ. ಕುಶಾಲನಗರ ಪಟ್ಟಣದಲ್ಲಿ ದಿನವಿಡಿ ಮಳೆ ಸುರಿದಿದೆ. ಇದೀಗ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಲಾನಯನ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬೀಳುವ ಸಂಭವ ಇರುವುದರಿಂದ ಕುಶಾಲನಗರ ವ್ಯಾಪ್ತಿಯ ಜನತೆಯಲ್ಲಿ ಆತಂಕ ಕಂಡುಬಂದಿದೆ.

ಸಿದ್ದಾಪುರ : ಕಳೆದ ಕೆಲವು ದಿನಗಳಿಂದ ಸಿದ್ದಾಪುರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಎಡಬಿಡದೆ ಸುರಿದ ಮಳೆಯಿಂದಾಗಿ ಸಂತೆ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗಿತ್ತು ಮಳೆ-ಗಾಳಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ ಕೃಷಿ ಮಾಡಿದ ಗದ್ದೆಗಳಲ್ಲಿ ನೀರು ತುಂಬಿದ್ದು ಸಮಸ್ಯೆಯಾಗಿದೆ ಶುಂಠಿ ಕೃಷಿ ಕೃಷಿಕರಿಗೆ ಕೊಳೆ ರೋಗದ ಭೀತಿ ಎದುರಾಗಿದೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ.

ಕಣಿವೆ : ಕಳೆದೆರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ ಹಾಗೂ ಹಾರಂಗಿ ನದಿ ತೀರದ ಜನರಲ್ಲಿ ಭೀತಿ ಶುರುವಾಗಿದೆ. ಕಳೆದ ಎರಡು ದಿನಗಳಿಂದ ಕಣಿವೆ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಗೆ ಕಾವೇರಿ ಮತ್ತೆ ಮೈದುಂಬಿದ್ದಾಳೆ. ಆಗಸ್ಟ್ ಮೊದಲ ವಾರದಲ್ಲಿ ಬಂದ ಪ್ರವಾಹದ ಸಂಕಟ ತೀರದ ಮುನ್ನವೇ ನದಿತೀರದ ತಗ್ಗು ಪ್ರದೇಶ ನಿವಾಸಿಗಳು ಅಕ್ಷರಶಃ ನಲುಗಿ ಹೋಗಿದ್ದಾರೆ.

ಕುಟ್ಟದಲ್ಲಿ ತಡೆಗೋಡೆ ಕುಸಿತ

ಶ್ರೀಮಂಗಲ : ನಿರಂತರ ಸುರಿದ ಮಳೆಯಿಂದ ಭಾನುವಾರ ಬೆಳಿಗ್ಗೆ 6.30ಕ್ಕೆ ಕುಟ್ಟ ಪೆÇಲೀಸ್ ವಸತಿಗೃಹದ ತಡೆಗೋಡೆ ಕುಸಿತವಾಗಿ, ಅಪ್ಪಳಿಸಿರುವ ಕಾರಣ ಕಟ್ಟಡಕ್ಕೆ ದೊಡ್ಡ ಹಾನಿಯಾಗಿದೆ.ವಸತಿ ಗೃಹದ ಕಿಟಕಿ ಮೂಲಕ ಮಣ್ಣು ಬಿದ್ದಿದೆ. ತಡೆಗೋಡೆ ವಸತಿ ಗೃಹದ ಗೋಡೆಗೆ ಬಿದ್ದ ರಭಸಕ್ಕೆ ಕಟ್ಟಡಕ್ಕೂ ಹಾನಿಯಾಗಿದೆ.ಇದೇ ಜೂನ್ ತಿಂಗಳಲ್ಲಿ ತಡೆಗೋಡೆ ಕಾಮಗಾರಿಯನ್ನು ಮುಗಿಸಲಾಗಿತ್ತು.

ಕುಟ್ಟ ವ್ಯಾಪ್ತಿಗೆ ಹೆಚ್ಚಿನ ಮಳೆ ಆಗದಿದ್ದರೂ ತಡೆಗೋಡೆ ಕುಸಿತವಾಗಿದ್ದು, ಲಕ್ಷಾಂತರ ರೂ.ವೆಚ್ಚದಲ್ಲಿ 20 ಅಡಿ ಎತ್ತರದ ನಿರ್ಮಿಸಿದ ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದು,ಕಾಮಗಾರಿಯನ್ನು ಮೈಸೂರಿನ ಗುತ್ತಿಗೆದಾರರು ನಿರ್ವಹಿಸಿದ್ದರು. ಅದೃಷ್ಟವಶಾತ್ ತಡೆಗೋಡೆ ಕುಸಿದ ಸಂದರ್ಭ ನೆಲ ಅಂತಸ್ತಿನ ಹೊರಗೆ ಜನರು ಇರಲಿಲ್ಲ. ಭಾನುವಾರ ರಜೆ ಹಿನ್ನಲೆ ವಸತಿಗೃಹ ಬಿಟ್ಟು ತಮ್ಮ ಊರಿಗೆ ತೆರಳಿದ್ದರು.

ಮರ ಬಿದ್ದು ಮನೆಗೆ ಹಾನಿ

ಸೋಮವಾರಪೇಟೆ : ಭಾರೀ ಗಾಳಿ ಮಳೆಗೆ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ-ಯಡದಂಟೆಯಲ್ಲಿ ಮರ ಬಿದ್ದು, ವಾಸದ ಮನೆಗೆ ಹಾನಿಯಾಗಿದೆ.

ಯಡದಂಟೆ ಗ್ರಾಮದ ಬಿ.ಎಂ. ಮೋಹನ್ ಎಂಬವರ ಮನೆಯ ಮೇಲೆ ಮರ ಬಿದ್ದ ಪರಿಣಾಮ, ಮನೆಯ ಒಂದು ಪಾಶ್ರ್ವ ಜಖಂಗೊಂಡಿದ್ದು, ಅದೃಷ್ಟವಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಸುಂಟಿಕೊಪ್ಪ : ಸುಂಟಿಕೊಪ್ಪ ಸೇರಿದಂತೆ ಸುತ್ತ ಮುತ್ತಲಿನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿಯಿತು. ಕಳೆದ ಮೂರು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಭಾನುವಾರ ಸಂತೆ ದಿನವಾದರಿಂದ ಸಂತೆ ವ್ಯಾಪಾರ ಅಸ್ತವ್ಯಸ್ತಗೊಂಡಿತು. ಸುಂಟಿಕೊಪ್ಪ ಸುತ್ತಮುತ್ತ ಗಾಳಿ ಮಳೆಗೆ ಮರಗಳು ಧರೆಗುರುಳಿದ್ದು, ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಸುಂಟಿಕೊಪ್ಪ ಸೇರಿದಂತೆ ಹರದೂರು ಗರಗಂದೂರು ಪನ್ಯ ಕಂಬಿಬಾಣೆ, ಕೆದಕಲ್, ಗದ್ದೆಹಳ್ಳ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಕಾನ್‍ಬೈಲು ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ.

ನದಿಗೆ 11 ಸಾವಿರ ಕ್ಯೊಸೆಕ್ಸ್ ನೀರು

ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ನೀರು ಹೆಚ್ಚಾಗಿ ಬರುತ್ತಿರುವುದರಿಂದ ಅಣೆಕಟ್ಟೆಯಿಂದ ನದಿಗೆ 11 ಸಾವಿರ ಕ್ಯೊಸೆಕ್ಸ್ ನೀರನ್ನು ಕ್ರೆಸ್ಟ್ ಗೇಟ್‍ಗಳ ಮೂಲಕ ಹರಿಸಲಾಗುತ್ತಿದೆ.

ಅಣೆಕಟ್ಟೆಗೆ 16 ಸಾವಿರ ಕ್ಯೊಸೆಕ್ಸ್ ನೀರು ಒಳ ಹರಿವು ಬರುತ್ತಿದ್ದು, ಅಣೆಕಟ್ಟೆಯ ಹಿತದೃಷ್ಟಿಯಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಈಗಾಗಲೇ ಅಣೆಕಟ್ಟೆಗೆ ಹೆಚ್ಚು ನೀರು ಬರುತ್ತಿರುವ ಕಾರಣದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟೆಯಲ್ಲಿ ಹೆಚ್ಚು ನೀರನ್ನು ಸಂಗ್ರಹಿಸದಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ನದಿಗೆ ಹೆಚ್ಚು ನೀರು ಬರುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸೂಚನೆಗಳನ್ನು ನೀರಾವರಿ ಇಲಾಖೆ ವತಿಯಿಂದ ನೀಡಲಾಗುತ್ತಿದೆ ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.

ಗದ್ದೆ ಜಲಾವೃತ

ವೀರಾಜಪೇಟೆ : ವಿರಾಜಪೇಟೆ ವಿಭಾಗಕ್ಕೆ ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕದನೂರು ಗ್ರಾಮದ ವ್ಯಾಪ್ತಿಯಲ್ಲಿ ಗದ್ದೆಗೆ ನೀರು ನುಗ್ಗಿ ಜಲಾವೃತಗೊಂಡಿದೆ. ನಿರಂತರ ಮಳೆಯಿಂದ ರೈತರು ಆತಂಕಕ್ಕೊಳಗಾಗಿದ್ದು ನಾಟಿ ಮಾಡಿದ ಗದ್ದೆಗೆ ನೀರು ನುಗ್ಗಿರುವುದರಿಂದ ಮಳೆ ಇದೇ ರೀತಿ ಮುಂದುವರೆದರೆ ನಾಟಿ ಮಾಡಿದ ಸಸಿಗಳು ಕೊಳೆಯುವ ಸಾಧ್ಯತೆ ಇದೆ.

ವೀರಾಜಪೇಟೆ ವಿಭಾಗದ ಬೇಟೋಳಿ, ಆರ್ಜಿ, ರಾಮನಗರ, ಹೆಗ್ಗಳ, ಮಾಕುಟ್ಟ, ಬಿಟ್ಟಂಗಾಲ, ಕದನೂರು, ಕಾಕೋಟುಪರಂಬು, ಚೆಂಬೆಬೆಳ್ಳೂರು, ಸೇರಿದಂತೆ ಇನ್ನು ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು ಮಳೆಯ ನಡುವೆ ಚಳಿಯ ವಾತಾವರಣವು ಅಧಿಕವಾಗಿದೆ.

ಬೇತರಿ ಗ್ರಾಮದ ಕಾವೇರಿ ಹೊಳೆ ಹಾಗೂ ಕದನೂರು ಗ್ರಾಮದ ಹೊಳೆಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.