ಸದ್ಯಕ್ಕೆ ರಾಜಕೀಯ ಚಟುವಟಿಕೆಯಲ್ಲಿಲ್ಲ: ಜೀವಿಜಯ

ಸೋಮವಾರಪೇಟೆ, ಸೆ. 20: ಮಾಜಿ ಸಚಿವ ಬಿ.ಎ. ಜೀವಿಜಯ ಅವರು ಸದ್ಯ ಜೆಡಿಎಸ್‍ನಲ್ಲಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಳ್ಳುತ್ತಾರೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್‍ನವರಂತೂ ‘ಜೀವಿಜಯ ಬಂದರೆ ಸ್ವಾಗತ’ ಎಂದರೆ, ಜೆಡಿಎಸ್‍ನ ಕೆಲ ಮುಖಂಡರೇ ‘ಜೀವಿಜಯ ಅವರು ಕಾಂಗ್ರೆಸ್‍ಗೆ ಹೋದರೆ ಹೋಗಲಿ’ ಎಂಬ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ‘ನಾನು ಕಾಂಗ್ರೆಸ್‍ಗೆ ಸೇರುವ-ಜೆಡಿಎಸ್ ತೊರೆಯುವ ಬಗ್ಗೆ ಸದ್ಯಕ್ಕೆ ಯಾವದೇ ತೀರ್ಮಾನ ನಡೆಸಿಲ್ಲ’ ಎಂದು ಜೀವಿಜಯ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ ಸದ್ಯದ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್‍ನ ಜಿಲ್ಲಾಧ್ಯಕ್ಷರಾಗಿ ಕೆ.ಎಂ.ಬಿ. ಗಣೇಶ್ ಆಯ್ಕೆಯಾದಾಗಿನಿಂದಲೂ ಮುನಿಸುಗೊಂಡಿರುವ ಜೀವಿಜಯ ಅವರು, ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಜಾತ್ಯಾತೀತ ಜನತಾದಳದಿಂದ ಒಂದಿಷ್ಟು ಅಂತರ ಕಾಯ್ದುಕೊಳ್ಳುತ್ತಲೇ ಬಂದಿದ್ದಾರೆ.

ಜೆಡಿಎಸ್ ಆಯೋಜಿಸುವ ಸಭೆಗಳಿಗೆ ನಿರಂತರ ಗೈರು. ಕಚೇರಿ ಉದ್ಘಾಟನಾ ಸಮಾರಂಭಕ್ಕೂ ಗೈರು..ಹೀಗೆ ಪಕ್ಷದ ಅಧ್ಯಕ್ಷರೊಂದಿಗೆ ಒಂದಿಷ್ಟು ಅಂತರ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಮಡಿಕೇರಿ ಕ್ಷೇತ್ರದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಜೆಡಿಎಸ್ ಭದ್ರವಾಗಿದೆ. ರೈತರ ಪಕ್ಷ, ಗೌಡರ ಪಕ್ಷ, ಜಾತ್ಯಾತೀತ ಪಕ್ಷದ ಹೆಸರಿನಲ್ಲಿ ಸಂಘಟನೆ ಸ್ವಲ್ಪ ಬಲವಾಗಿದೆ. ವಿಧಾನಸಭಾ ಚುನಾವಣೆಯ ಸಂದರ್ಭ ಸೋಮವಾರಪೇಟೆ ಭಾಗದ ಜೆಡಿಎಸ್ ಕಾರ್ಯ ಚಟುವಟಿಕೆ ಗಮನಿಸಿ, ಹಲವಷ್ಟು ಮಂದಿ ಈ ಬಾರಿ ಜೀವಿಜಯ ಗೆಲ್ಲುತ್ತಾರೆ ಎಂದೇ ಅತೀ ಆತ್ಮವಿಶ್ವಾಸ ಹೊಂದಿದ್ದರು. ಆದರೆ ಕುಶಾಲನಗರ, ಮಡಿಕೇರಿ, ಮಾದಾಪುರ ವ್ಯಾಪ್ತಿಯಲ್ಲಿ ನಿರೀಕ್ಷಿತ ಬೆಂಬಲ ಸಿಗದ ಹಿನ್ನೆಲೆ ಜೀವಿಜಯ ಅವರು ಬಿಜೆಪಿಯ ಅಪ್ಪಚ್ಚುರಂಜನ್ ಎದುರು ಸೋಲು ಕಂಡಿದ್ದಾರೆ.

ಚುನಾವಣೆಯಲ್ಲಿ ಸೋತರೂ ಸಹ ಜೆಡಿಎಸ್‍ನ ಹೆಚ್ಚಿನ ಕಾರ್ಯಕರ್ತರು ಜೀವಿಜಯ ಅವರ ಬೆಂಬಲಿಗರಾಗಿಯೇ ಉಳಿದಿದ್ದಾರೆ. ಜೀವಿಜಯ ಅವರು ರಾಜಕೀಯವಾಗಿ ಈಗಲೂ ಹಲವಷ್ಟು ಬೆಂಬಲಿಗರನ್ನು ಸಂಪಾದಿಸಿದ್ದರೂ ಇತ್ತೀಚಿನ ದಿನಗಳಲ್ಲಿ ರಾಜಕೀಯ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ.

ವಯಸ್ಸಿನ ಬಗ್ಗೆ ಕೇಳಿದರೆ ಸಿಡಿಮಿಡಿಯಾಗುವ ಜೀವಿಜಯ ಅವರು ಕೆಲವೊಮ್ಮೆ ತಮ್ಮ ಕಾರ್ಯಕರ್ತರ ಎದುರು ‘ನನಗೆ ವಯಸ್ಸಾಗುತ್ತಿದೆ. ಚಟುವಟಿಕೆಯ ರಾಜಕೀಯ ಕಷ್ಟ. ನೀವುಗಳು ರಾಜಕೀಯವಾಗಿ ಮುಂದುವರೆಯಿರಿ, ನನ್ನ ಮಾರ್ಗದರ್ಶನ ಇದ್ದೇ ಇರುತ್ತದೆ’ ಎಂದು ಅಭಯ ನೀಡಿದ್ದನ್ನು ಹಲವಷ್ಟು ಕಾರ್ಯಕರ್ತರು ಪತ್ರಿಕೆಯೊಂದಿಗೆ ಹೇಳಿಕೊಂಡಿದ್ದಾರೆ.

ತಾವು ಶಾಸಕ, ಸಚಿವರಾಗಿದ್ದ ಸಂದರ್ಭ ಕೈಗೊಂಡ ಹಲವಷ್ಟು ಜನಪರ ಕಾರ್ಯಗಳು, ಅಭಿವೃದ್ಧಿ ಕಾಮಗಾರಿಗಳು ಜೀವಿಜಯ ಅವರ ಹೆಸರಿನೊಂದಿಗೆ ಸೇರ್ಪಡೆಗೊಂಡಿದೆ. ಹೀಗಿರುವ ಸನ್ನಿವೇಶದಲ್ಲಿ ಮತ್ತೆ ಜೀವಿಜಯ ಅವರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಸದ್ಯ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದ ಜೀವಿಜಯ ಅವರು ‘ಶಕ್ತಿ’ಯೊಂದಿಗೆ ಕೆಲನಿಮಿಷ ಮಾತುಕತೆ ನಡೆಸಿದ್ದು, ತಮ್ಮ ಸದ್ಯದ ಚಿಂತನೆಗಳನ್ನು ಹೀಗೆ ವಿವರಿಸಿದ್ದಾರೆ.

“ಜೀವಿಜಯ ಕಾಂಗ್ರೆಸ್ ಸೇರ್ತಾರೆ ಅಂತ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಕೆಲವರು ಎಲ್ಲಾ ಕಡೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಪಕ್ಷದ ವಿಚಾರದಲ್ಲಿ ನನ್ನನ್ನು ಯಾರೂ ಕೂಡ ಈವರೆಗೆ ಭೇಟಿ ಮಾಡಿಲ್ಲ. ಕೊರೊನಾ ಹರಡುತ್ತಿರುವ ಹಿನ್ನೆಲೆ ನಾನು ಯಾವ ರೀತಿಯಲ್ಲೂ ರಾಜಕೀಯದಲ್ಲಿ ಸದ್ಯದ ಮಟ್ಟಿಗೆ ತೊಡಗಿಸಿಕೊಂಡಿಲ್ಲ”

“ಕಾಂಗ್ರೆಸ್-ಜೆಡಿಎಸ್‍ನ ಕೆಲವರು ಮಾತ್ರ ನನ್ನ ರಾಜಕೀಯ ಹೆಜ್ಜೆಯ ಬಗ್ಗೆ ತಮ್ಮಷ್ಟಕ್ಕೆ ತಾವೇ ಹೇಳಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅಧ್ಯಕ್ಷ ಮತ್ತು ಕೆಲವರು ಜೀವಿಜಯ ಕಾಂಗ್ರೆಸ್‍ಗೆ ಹೋದ್ರೆ ಏನು? ಇನ್ನೂ 100 ಜೀವಿಜಯ ಅಂತವರನ್ನು ಕರೆತರ್ತೀವಿ ಅಂತ ಹೇಳಿರೋದು ಗೊತ್ತಿದೆ. ಇನ್ನು ಕೆಲವರು ನನ್ನ ವಿಚಾರದ ಚರ್ಚೆ ಸಂದರ್ಭ ಕೋಳಿ ಕೇಳಿ ಖಾರ ಅರೆಯುತ್ತಾರಾ? ಎಂದು ಕೊಡ್ಲಿಪೇಟೆಯಲ್ಲಿ ಹೇಳಿದ್ದಾರೆ”

“ಆದರೆ ನಾನು ಬೆಂಬಲಿಗರು, ಹಿತೈಷಿಗಳ ಅಭಿಪ್ರಾಯ ಕೇಳಿ ಮುಂದಿನ ಹೆಜ್ಜೆ ಇಡುತ್ತೇನೆ. ಇದೀಗ ಕೊರೊನಾ ಹಿನ್ನೆಲೆ ಬೆಂಬಲಿಗರ ಸಭೆಯನ್ನು ಸದ್ಯಕ್ಕೆ ಕರೆದಿಲ್ಲ. ದಿನಂಪ್ರತಿ ಕಾರ್ಯಕರ್ತರು ನನ್ನನ್ನು ಭೇಟಿ ಮಾಡುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಹೆಚ್ಚಿನ ಆಸಕ್ತಿ ಇಲ್ಲ”

“ರಾಜಕೀಯವಾಗಿ ನಾನೇನು ಮಾಡುತ್ತಿಲ್ಲ. ಎಲ್ಲೂ ಹೋಗುತ್ತಿಲ್ಲ. ನನ್ನಷ್ಟಕ್ಕೆ ನಾನಿದ್ದೀನಿ. ಸೋಮವಾರಪೇಟೆಗೂ ಹೋಗಿಲ್ಲ. ದೇವೇಗೌಡರು ನಾಲ್ಕೈದು ಪತ್ರ ಬರೆದಿದ್ದಾರೆ. ವೀಡಿಯೋ ಕಾನ್ಫರೆನ್ಸ್‍ಗೆ ಕರೆದಿದ್ರು, ನನ್ ಹತ್ರ ವಾಟ್ಸಾಪ್ ಇಲ್ಲ. ಹಾಗಾಗಿ ಭಾಗಿಯಾಗಿಲ್ಲ. ದೇವೇಗೌಡರು ಸಂಪರ್ಕದಲ್ಲಿದ್ದಾರೆ”

“ದೇಶದಲ್ಲಿ, ರಾಜ್ಯದಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆ, ದೃವೀಕರಣ ಆಗುತ್ತಿದೆ ಎಂದು ಗಮನಿಸುತ್ತಿದ್ದೇನೆ. ಎಲ್ಲಾ ಪಕ್ಷದಲ್ಲೂ ಗೊಂದಲಗಳಿವೆ. ಇದರಲ್ಲಿ ನಾನು ಸಿಕ್ಕಿಹಾಕಿಕೊಳ್ಳುವದಿಲ್ಲ. ಸದ್ಯಕ್ಕೆ ರಾಜಕೀಯ ನಿರಾಸಕ್ತಿಯಲ್ಲಿದ್ದೇನೆ. ಕಾಂಗ್ರೆಸ್ ಮುಖಂಡರು ಪಕ್ಷ ಸೇರುವ ಬಗ್ಗೆ ಯಾವದೇ ಭೇಟಿ, ಮಾತುಕತೆ ನಡೆಸಿಲ್ಲ”

“ಸದ್ಯಕ್ಕೆ ಬೆಂಬಲಿಗರ ಯಾವದೇ ಸಭೆಗಳಿಲ್ಲ. ಕೊರೊನಾ ವೈರಾಣುವಿನ ಆತಂಕ ಕಡಿಮೆಯಾದ ನಂತರ ಯೋಚಿಸುತ್ತೇನೆ. ಕಾರ್ಯಕರ್ತರು ಆಗಾಗ್ಗೆ ಭೇಟಿ ಮಾಡುತ್ತಿದ್ದಾರೆ. ಚರ್ಚೆ ನಡೆಸುತ್ತಿದ್ದೇವೆ. ಅಂತಿಮವಾಗಿ ನಾನೊಬ್ಬನೇ ಯಾವದೇ ತೀರ್ಮಾನ ತೆಗೆದುಕೊಳ್ಳುವದಿಲ್ಲ. ನನ್ನ ಬೆಂಬಲಿಗರು-ಹಿತೈಷಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ”

- ವಿಜಯ್ ಹಾನಗಲ್