ವೀರಾಜಪೇಟೆ, ಸೆ. 20: ಹರಿಯಾಣ, ಉತ್ತರಪ್ರದೇಶ ರಾಜ್ಯಗಳಿಂದ ಲಾರಿಯಲ್ಲಿ ಕೋಣಗಳನ್ನು ತುಂಬಿಸಿಕೊಂಡು ಕೇರಳದ ಕಸಾಯಿ ಖಾನೆ ಮಾರುಕಟ್ಟೆಗೆ ಮಾರಾಟಕ್ಕಾಗಿ ಕೋಣಗಳನ್ನು ಸಾಗಿಸುತ್ತಿದ್ದಾಗ ಇಲ್ಲಿನ ನಗರ ಪೊಲೀಸರು ಪೆರುಂಬಾಡಿ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿ ಸುಮಾರು 15 ಲಕ್ಷ ಮೌಲ್ಯದ ಹತ್ತು ಚಕ್ರದ ಅಶೋಕ್ ಲೈಲಾಂಡ್ ಲಾರಿ, ಮೂರು ಲಕ್ಷ ಮೌಲ್ಯದ 35 ಕೋಣಗಳನ್ನು (ಮೊದಲ ಪುಟದಿಂದ) ವಶಪಡಿಸಿಕೊಂಡು ಲಾರಿಯ ಚಾಲಕ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ 9-30 ರ ಸಮಯದಲ್ಲಿ ಪೆರುಂಬಾಡಿ ಚೆಕ್ ಪೋಸ್ಟ್ನಲ್ಲಿ ಗೋಣಿಕೊಪ್ಪ ಬಾಳುಗೋಡು ಗ್ರಾಮವಾಗಿ ಕೇರಳಕ್ಕೆ ತೆರಳುತ್ತಿದ್ದ ರಾಜಸ್ಥಾನ ನೋಂದಣಿಯ (ಆರ್.ಜೆ. 14-4885) ರ ಲಾರಿಯನ್ನು ಪೊಲೀಸರು ಶೋಧಿಸಿದಾಗ ಲಾರಿಯಲ್ಲಿ 33 ಕೋಣಗಳು, 2 ಎಮ್ಮೆಗಳು ಪತ್ತೆಯಾಗಿವೆ. ನಗರ ಪೊಲೀಸರು ಲಾರಿಯ ಚಾಲಕ ಹರಿಯಾಣದ ನೊಹ್ರ ಜಿಲ್ಲೆಯ ಐ. ಇರ್ಷಾದ್ನ್ನು ವಿಚಾರಣೆಗೊಳಪಡಿಸಿದಾಗ 17 ಕೋಣಗಳನ್ನು ಹರಿಯಾಣದ ನೊಹ್ರದಿಂದ ಹಾಗೂ ಎರಡು ಎಮ್ಮೆ, 16 ಕೋಣಗಳನ್ನು ಉತ್ತರ ಪ್ರದೇಶದದಿಂದ ಖರೀದಿಸಿ ಲಾರಿಗೆ ತುಂಬಿಸಲಾಗಿದೆ. ಈ ಕೋಣಗಳನ್ನು ಕೇರಳದ ಕಸಾಯಿ ಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿದೆ. ತಾ.16ರಂದು ಕೋಣ ಎಮ್ಮೆಗಳನ್ನು ತುಂಬಿಸಿಕೊಂಡು ಉತ್ತರ ಪ್ರದೇಶ, ಹರಿಯಾಣ, ಗಾಗಪುರ, ಹೈದರಬಾದ್, ಬೆಂಗಳೂರು, ಹಾಸನ, ಪಿರಿಯಾಪಟ್ಟಣ, ತಿತಿಮತಿ, ಗೋಣಿಕೊಪ್ಪ ಬಾಳುಗೋಡು ಮಾರ್ಗವಾಗಿ ಕೇರಳ ರಾಜ್ಯಕ್ಕೆ ತೆರಳುತ್ತಿದ್ದುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ಲಾರಿಯಲ್ಲಿದ್ದ ಹರಿಯಾಣ ರಾಜ್ಯದ ನೊಹ್ರ ಜಿಲ್ಲೆಯ ಎಚ್. ಷಹಬುದ್ದೀನ್, ಜಾಹೀದ್, ಎಸ್. ಮುಖೇನ್ ಹಾಗೂ ಚಾಲಕ ಇರ್ಷಾದ್ ಸೇರಿದಂತೆ 4 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.